ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಪುತ್ತೂರು ತಾ| ಘಟಕದ ಚುನಾವಣೆ ಹಿನ್ನೆಲೆ

0

25 ಮಂದಿ ಮತದಾರರ ಕರಡು ಪಟ್ಟಿ ಬಿಡುಗಡೆಗೊಳಿಸಿದ ಚುನಾವಣಾಧಿಕಾರಿ-ನ.25ರಂದು ಸಂಜೆ ಅಂತಿಮ ಪಟ್ಟಿ ಪ್ರಕಟ

ನ.26ರಿಂದ ನ.28ರವರೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ

ಪುತ್ತೂರು: ಪ್ರತಿಷ್ಠಿತ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಪುತ್ತೂರು ತಾಲೂಕು ಘಟಕದ 2022-2025ನೇ ಸಾಲಿನ ಪದಾಧಿಕಾರಿಗಳ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆಗೆ ದ.5ರಂದು ನಡೆಯಲಿರುವ ಚುನಾವಣೆಗೆ ಸಂಬಂಧಿಸಿ ನ.24ರಂದು ಮತದಾರರ ಕರಡು ಪಟ್ಟಿ ಬಿಡುಗಡೆಯಾಗಿದೆ.

ಪತ್ರಕರ್ತರ ಸಂಘದ ಚುನಾವಣಾಧಿಕಾರಿಯಾಗಿರುವ ರಾಜ್ಯ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಇಬ್ರಾಹಿಂ ಅಡ್ಕಸ್ಥಳ ಅವರು 25 ಮಂದಿ ಮತದಾರರ ಕರಡು ಪಟ್ಟಿ ಬಿಡುಗಡೆಗೊಳಿಸಿದ್ದಾರೆ. ಪತ್ರಿಕಾ ಭವನಕ್ಕೆ ಭೇಟಿ ನೀಡಿದ ಇಬ್ರಾಹಿಂ ಅಡ್ಕಸ್ಥಳರವರು ಮತದಾರರ ಕರಡು ಪಟ್ಟಿ ಬಿಡುಗಡೆಗೊಳಿಸಿ ಪತ್ರಿಕಾ ಭವನದಲ್ಲಿ ಪಟ್ಟಿ ಅಳವಡಿಸಿದ್ದಾರೆ. ಮತದಾರರ ಪಟ್ಟಿಯಲ್ಲಿ ಇರುವವರ ಹೆಸರು ಇತ್ಯಾದಿ ತಿದ್ದುಪಡಿಗಳು ಇದ್ದಲ್ಲಿ ಸರಿಪಡಿಸಿಕೊಂಡು ನ.25ರಂದು ಸಂಜೆ ಮತದಾರರ ಅಂತಿಮ ಪಟ್ಟಿ ಪ್ರಕಟವಾಗಲಿದೆ. ಚುನಾವಣಾಧಿಕಾರಿ ಇಬ್ರಾಹಿಂ ಅಡ್ಕಸ್ಥಳರವರು ಪತ್ರಿಕಾ ಭವನಕ್ಕೆ ಭೇಟಿ ನೀಡಿದ್ದ ವೇಳೆ ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರುಗಳಾದ ಶೇಖ್ ಜೈನುದ್ದೀನ್ ನೆಲ್ಲಿಕಟ್ಟೆ, ಸುಧಾಕರ ಪಡೀಲ್, ಶಶಿಧರ ರೈ ಕುತ್ಯಾಳ, ಲೋಕೇಶ್ ಬನ್ನೂರು ಮತ್ತು ಸಂತೋಷ್ ಕುಮಾರ್ ಶಾಂತಿನಗರ ಅವರು ಚುನಾವಣೆಯ ನೀತಿ ನಿಯಮಗಳ ಕುರಿತು ಮಾಹಿತಿ ಪಡೆದುಕೊಂಡರಲ್ಲದೆ ಮತದಾರರ ಪಟ್ಟಿ ಪರಿಶೀಲಿಸಿದರು.

ಚುನಾವಣಾಧಿಕಾರಿಯವರು ಪತ್ರಿಕಾ ಭವನಕ್ಕೆ ಆಗಮಿಸುವ ವೇಳೆ ಪತ್ರಿಕಾ ಭವನದಲ್ಲಿದ್ದ ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಸ್ವಯಂಘೋಷಿತ ಅಧ್ಯಕ್ಷ ಐ.ಬಿ.ಸಂದೀಪ್ ಕುಮಾರ್ ಬಳಿಕ ಅಲ್ಲಿಂದ ಹೊರಗೆ ಹೋದವರು ಪತ್ರಿಕಾ ಭವನದ ಆವರಣದಲ್ಲಿ ಮೊಬೈಲ್ ಫೋನಲ್ಲಿ ಮಾತನಾಡುತ್ತಿದ್ದು ಅಲ್ಲಿಂದ ಹೋದವರು ಮತ್ತೆ ಚುನಾವಣಾಧಿಕಾರಿ ಹೋಗುವವರೆಗೂ ಕಾಣಲಿಲ್ಲ. ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಸ್ವಯಂಘೋಷಿತ ಕಾರ್ಯದರ್ಶಿ ಅಜಿತ್ ಕುಮಾರ್ ಮತ್ತು ಉಚ್ಚಾಟಿತ ಉಪಾಧ್ಯಕ್ಷ ಅನಿಶ್ ಕುಮಾರ್ ಅವರು ಪತ್ರಿಕಾ ಭವನಕ್ಕೆ ಚುನಾವಣಾಧಿಕಾರಿ ಭೇಟಿ ನೀಡಿದಾಗ ಅದೇ ಕೊಠಡಿಯಲ್ಲಿ ಇದ್ದರಾದರೂ ಚುನಾವಣೆಗೆ ಸಂಬಂಧಿಸಿ ಏನೂ ಮಾತನಾಡಲಿಲ್ಲ. ಸ್ವಲ್ಪ ಹೊತ್ತು ಅಲ್ಲಿ ಇದ್ದ ಅಜಿತ್ ಕುಮಾರ್ ಮತ್ತು ಅನಿಶ್ ಕುಮಾರ್ ಅವರು ಚುನಾವಣಾಧಿಕಾರಿ ಇಬ್ರಾಹಿಂ ಅಡ್ಕಸ್ಥಳ ಜತೆ ಶಶಿಧರ ರೈ ಕುತ್ಯಾಳ ಮತ್ತು ಸಂತೋಷ್ ಕುಮಾರ್ ಶಾಂತಿನಗರ ಅವರು ಚುನಾವಣೆಗೆ ಸಂಬಂಧಿಸಿ ಚರ್ಚೆ ನಡೆಸುತ್ತಿದ್ದಾಗ ಅಲ್ಲಿಂದ ಹೊರ ಹೋದರು. ಮತದಾರರ ಪಟ್ಟಿಯ ವಿಚಾರದಲ್ಲಿ ಇಬ್ರಾಹಿಂ ಅಡ್ಕಸ್ಥಳ ಅವರೊಂದಿಗೆ ಶೇಖ್ ಜೈನುದ್ದೀನ್, ಲೋಕೇಶ್ ಬನ್ನೂರು, ಸುಧಾಕರ ಪಡೀಲ್ ಮತ್ತು ಸಂತೋಷ್ ಕುಮಾರ್ ಅವರು ಚರ್ಚೆ ನಡೆಸುತ್ತಿದ್ದ ವೇಳೆ ಎರಡು ಮೂರು ಬಾರಿ ಬಂದ ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಸ್ವಯಂಘೋಷಿತ ಉಪಾಧ್ಯಕ್ಷ ಕುಮಾರ್ ಕಲ್ಲಾರೆ ಅವರು ಯಾವ ವಿಚಾರದ ಬಗ್ಗೆಯೂ ಮಾತನಾಡಲಿಲ್ಲ.

ವೇಳಾಪಟ್ಟಿ ಪ್ರಕಟಿಸಿದ್ದ ಜಿಲ್ಲಾ ಪತ್ರಕರ್ತರ ಸಂಘ : ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪುತ್ತೂರು ತಾಲೂಕು ಘಟಕಕ್ಕೆ ಚುನಾವಣೆ ನಡೆಸುವಂತೆ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ನೀಡಿದ್ದ ಸೂಚನೆಯ ಪ್ರಕಾರ ನ.23ರಂದು ಮಂಗಳೂರು ಪತ್ರಿಕಾ ಭವನದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಭೆಯಲ್ಲಿ ಚುನಾವಣಾ ವೇಳಾಪಟ್ಟಿ ಬಿಡುಗಡೆ ಮಾಡಲಾಗಿತ್ತು.

ಪುತ್ತೂರು ಸರಕಾರಿ ಸಾರ್ವಜನಿಕ ಆಸ್ಪತ್ರೆ ಬಳಿ ವಾರ್ತಾ ಇಲಾಖೆಯ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪುತ್ತೂರು ತಾಲೂಕು ಘಟಕಕ್ಕೆ ಮುಂದಿನ ಮೂರು ವರ್ಷಗಳ ಅವಧಿಗೆ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆಗೆ ದ.5ರಂದು ಬೆಳಿಗ್ಗೆ 10 ಗಂಟೆಯಿಂದ ಅಪರಾಹ್ನ 2 ಗಂಟೆಯವರೆಗೆ ಚುನಾವಣೆ ನಿಗದಿ ಪಡಿಸಲಾಗಿದ್ದು ಅದೇ ದಿನ ಮತ ಎಣಿಕೆಯಾಗಿ ಫಲಿತಾಂಶ ಪ್ರಕಟವಾಗಲಿದೆ. ಚುನಾವಣಾ ಪ್ರಕ್ರಿಯೆಗಳು ಪತ್ರಿಕಾ ಭವನದಲ್ಲಿಯೇ ನಡೆಯಲಿದೆ.

ಚುನಾವಣೆಗೆ ಅಧಿಸೂಚನೆ ಪ್ರಕಟ

ನ.24ರಂದು ಚುನಾವಣೆಗೆ ಅಧಿಸೂಚನೆ ಪ್ರಕಟವಾಗಿದ್ದು ಮತದಾರರ ಕರಡು ಪಟ್ಟಿ ಪ್ರಕಟಿಸಲಾಗಿದೆ. ನ.25ರಂದು ಮತದಾರರ ಅಂತಿಮ ಪಟ್ಟಿ ಪ್ರಕಟವಾಗಲಿದ್ದು ನ.26ರಿಂದ 28ರವರೆಗೆ ನಾಮಪತ್ರ ಸಲ್ಲಿಕೆ(ಬೆಳಿಗ್ಗೆ 11ರಿಂದ ಅಪರಾಹ್ನ 1 ಗಂಟೆಯವರೆಗೆ) ಮಾಡಬಹುದಾಗಿದೆ. ನ.28ರಂದು ನಾಮಪತ್ರ ಪರಿಶೀಲನೆ ಮತ್ತು ಕ್ರಮಬದ್ಧ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಲಿದ್ದು ನ.29 ನಾಮಪತ್ರ ವಾಪಸು ಪಡೆಯುವ ಕೊನೆಯ ದಿನ(ಅಪರಾಹ್ನ 1 ಗಂಟೆಯ ಒಳಗೆ)ವಾಗಿದೆ. ನ.29ರಂದು ಅರ್ಹ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಲಿದ್ದು ದ.5ರ ಬೆಳಿಗ್ಗೆ 11ರಿಂದ 2 ಗಂಟೆಯವರೆಗೆ ಚುನಾವಣೆ ನಡೆಯಲಿದೆ. ದ.5ರ ಮಧ್ಯಾಹ್ನ 3 ಗಂಟೆಯಿಂದ ಮತ ಎಣಿಕೆ ನಡೆದು ಫಲಿತಾಂಶ ಘೋಷಣೆಯಾಗಲಿದೆ. ನಾಮಪತ್ರ ಸಲ್ಲಿಕೆಗೆ ನ. 29 ಕಡೆಯ ದಿನ ಎಂದು ಆರಂಭದಲ್ಲಿ ತಿಳಿಸಲಾಗಿತ್ತು. ಅದನ್ನು ಇದೀಗ ಪರಿಷ್ಕರಿಸಲಾಗಿದ್ದು, ನ. 28ರಂದು ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾಗಿದ್ದು ಅದೇ ದಿನ ನಾಮಪತ್ರ ಪರಿಶೀಲನೆ ನಡೆದು ಕ್ರಮಬದ್ಧ ಅಭ್ಯರ್ಥಿಗಳ ಪಟ್ಟಿ ಪ್ರಕಟವಗಲಿದೆ.

25 ಮಂದಿ ಮತದಾರರ ಕರಡು ಪಟ್ಟಿ ಪ್ರಕಟ

ಪತ್ರಕರ್ತರ ಸಂಘಕ್ಕೆ ನಡೆಯುವ ಚುನಾವಣೆಗೆ ಸಂಬಂಧಿಸಿ 25 ಮಂದಿ ಮತದಾರರ ಪಟ್ಟಿಯನ್ನು ಪತ್ರಿಕಾ ಭವನದಲ್ಲಿ ಅಳವಡಿಸಲಾಗಿದೆ. ಶ್ರವಣ್ ಕುಮಾರ್(ವಿಜಯವಾಣಿ), ಐ.ಬಿ. ಸಂದೀಪ್ ಕುಮಾರ್(ಹೊಸದಿಗಂತ), ಎ.ಸಿದ್ದೀಕ್ ನೀರಾಜೆ(ಪ್ರಜಾವಾಣಿ), ಶಶಿಧರ ರೈ(ವಿಜಯವಾಣಿ), ಯು.ಎಲ್. ಉದಯ ಕುಮಾರ್(ಹೊಸದಿಗಂತ), ದೀಪಕ್ ಬಿ(ವಿಜಯ ಕರ್ನಾಟಕ), ಎಂ.ಎಸ್.ಭಟ್(ಉದಯವಾಣಿ), ಮಹಮ್ಮದ್ ನಝೀರ್(ಜಯಕಿರಣ), ಸಂಶುದ್ದೀನ್ ಸಂಪ್ಯ(ವಾರ್ತಾಭಾರತಿ), ಉಮಾಶಂಕರ್(ಸ್ಪಂದನ), ಮೇಘ ಪಾಲೆತ್ತಡಿ(ಸಂಯುಕ್ತ ಕರ್ನಾಟಕ), ಕಿರಣ್ ಪ್ರಸಾದ್ ಕೆ(ಉದಯವಾಣಿ), ಉಮಾಪ್ರಸಾದ್ ರೈ ನಡುಬೈಲು(ಸುದ್ದಿ ಬಿಡುಗಡೆ), ಸುಧಾಕರ ಆಚಾರ್ಯ(ಸುದ್ದಿ ಬಿಡುಗಡೆ) , ಸುಧಾಕರ ಕೆ(ವಿಜಯ ಕರ್ನಾಟಕ), ಅಜಿತ್ ಕುಮಾರ್(ನ್ಯೂಸ್ 18), ಕುಮಾರ್ ಕಲ್ಲಾರೆ(ವಿಜಯ ಕರ್ನಾಟಕ), ಪ್ರವೀಣ್ ಕುಮಾರ್(ವಿಶ್ವವಾಣಿ), ಕೃಷ್ಣಪ್ರಸಾದ್(ವಿಶ್ವವಾಣಿ), ಲೋಕೇಶ್ ಬನ್ನೂರು(ಸುದ್ದಿ ಬಿಡುಗಡೆ), ಶೇಖ್ ಜೈನುದ್ದೀನ್(ಸುದ್ದಿ ಬಿಡುಗಡೆ), ಕರುಣಾಕರ ರೈ ಸಿ.ಎಚ್(ಸುದ್ದಿ ಬಿಡುಗಡೆ), ಹರೀಶ್ ಬಿ(ಸುದ್ದಿ ಬಿಡುಗಡೆ), ಯತೀಶ್ ಉಪ್ಪಳಿಗೆ(ಸುದ್ದಿ ಬಿಡುಗಡೆ) ಮತ್ತು ಶೇಷಪ್ಪ ಕಜೆಮಾರ್(ಸುದ್ದಿ ಬಿಡುಗಡೆ) ಅವರ ಹೆಸರು ಮತದಾರರ ಕರಡು ಪಟ್ಟಿಯಲ್ಲಿದೆ. ನ.25ರಂದು ಅಧಿಕೃತ ಮತದಾರರ ಪಟ್ಟಿ ಪ್ರಕಟವಾಗಲಿದೆ.

LEAVE A REPLY

Please enter your comment!
Please enter your name here