ರಾಮಕುಂಜ ಆ.ಮಾ.ಶಾಲೆಯಲ್ಲಿ ವಿದ್ಯಾರ್ಥಿವೇತನ ವಿತರಣೆ, ಪ್ರತಿಭಾ ಪುರಸ್ಕಾರ

0

ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ವಿದ್ಯಾರ್ಥಿಗಳ ಕೊಡುಗೆಯೂ ಬೇಕು; ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ

ರಾಮಕುಂಜ: ಶ್ರೀ ರಾಮಕುಂಜೇಶ್ವರ ಬಡ ವಿದ್ಯಾರ್ಥಿ ದತ್ತಿನಿಧಿ, ಶ್ರೀ ರಾಮಕುಂಜೇಶ್ವರ ಕ್ರೀಡಾ ಟ್ರಸ್ಟ್ ಮತ್ತು ಭೂಮಿ ಚಾರಿಟೇಬಲ್ ಟ್ರಸ್ಟ್ ಮುಂಬೈ, ಕರಾವಳಿ ಗ್ರೂಪ್ ಆಫ್ ಕಾಲೇಜ್ ಎಕ್ಸಲೆಂಟ್ ಅವಾರ್ಡ್ ಇವರ ಸಹಯೋಗದೊಂದಿಗೆ ರಾಮಕುಂಜ ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆಯ ಆಶ್ರಯದಲ್ಲಿ ವಿದ್ಯಾರ್ಥಿ ವೇತನ ವಿತರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ದ.1ರಂದು ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲಾ ಸಭಾಂಗಣದಲ್ಲಿ ನಡೆಯಿತು.

ವಿದ್ಯಾರ್ಥಿ ವೇತನ ವಿತರಿಸಿ ಆಶೀರ್ವಚನ ನೀಡಿದ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು, ಶಿಕ್ಷಣ ಸಂಸ್ಥೆಗಳಲ್ಲಿ ಬುದ್ಧಿವಂತಿಕೆ ಸಂಪಾದನೆಯ ಜೊತೆಗೆ ಬುದ್ಧಿಯನ್ನು ಸದ್ವಿನಿಯೋಗ ಮಾಡುವ ಸಂಸ್ಕಾರ ಸಿಗಬೇಕು. ನಾವು ಸಮಾಜಕ್ಕೆ ಘಾತಕ ಪರಿಣಾಮ ಉಂಟು ಮಾಡುವ ವಿದ್ಯಾರ್ಥಿಗಳನ್ನೂ ಕಾಣುತ್ತೇವೆ. ದೇಶ ಆರ್ಥಿಕವಾಗಿ ಬಲಿಷ್ಠಗೊಂಡಲ್ಲಿ ನೆಮ್ಮದಿ ಕಾಣಲು ಸಾಧ್ಯವಿಲ್ಲ. ಆರ್ಥಿಕ ಬೆಳವಣಿಗೆಯ ಜೊತೆಗೆ ಸಾಂಸ್ಕೃತಿಕ, ಧಾರ್ಮಿಕ, ಶೈಕ್ಷಣಿಕವಾದ ಚಿಂತನೆ ಇದ್ದಲ್ಲಿ ಮಾತ್ರ ಬಲಿಷ್ಠ ರಾಷ್ಟ್ರ ನಿರ್ಮಾಣ ಸಾಧ್ಯವಿದೆ. ಇದಕ್ಕೆ ಪ್ರತಿಯೊಬ್ಬ ವಿದ್ಯಾರ್ಥಿಯೂ ಕೊಡುಗೆ ನೀಡಬೇಕಿದೆ ಎಂದು ನುಡಿದರು. ಸುಸಂಸ್ಕೃತವಾದ ವಿದ್ಯೆಯೊಂದಿಗೆ ವಿದ್ಯಾರ್ಥಿಗಳು ಬೆಳೆದಲ್ಲಿ ಮುಂದೆ ದೇಶಕ್ಕೆ ಆಸ್ತಿಯಾಗಲಿದ್ದಾರೆ. ಇಂದು ಮೊಬೈಲ್‌ನಿಂದ ಹಲವು ದುಷ್ಪರಿಣಾಮ ಕಾಣುತ್ತಿದ್ದೇವೆ. ಮಕ್ಕಳು ಸಾಮಾಜಿಕ ಜಾಲತಾಣಗಳ ಪ್ರಭಾವಕ್ಕೆ ಒಳಗಾಗಿ ಎಳೆಯ ವಯಸ್ಸಿನಲ್ಲಿಯೇ ತಮ್ಮ ಬದುಕನ್ನು ಬಲಿದಾನ ಮಾಡುತ್ತಿರುವುದು ದೊಡ್ಡ ದುರಂತ ಆಗಿದೆ. ಪೋಷಕರು ತಮ್ಮ ಮಕ್ಕಳ ಬಗ್ಗೆ ಜಾಗರೂಕರಾಗಿರಬೇಕಾಗಿದೆ ಎಂದು ಹೇಳಿದ ಸ್ವಾಮೀಜಿ, ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ಹುಟ್ಟೂರು, ಅವರ ನೇತೃತ್ವದ ಸಂಸ್ಥೆಯನ್ನು ಕೆ.ಸೇಸಪ್ಪ ರೈಯವರು ತನ್ನ ಅವಿರತ ಶ್ರಮ, ತ್ಯಾಗದ ಮೂಲಕ ಎತ್ತರಕ್ಕೆ ಬೆಳೆಸುವಲ್ಲಿ ಸಫಲರಾಗಿದ್ದಾರೆ. ವಿದ್ಯಾರ್ಥಿ ವೇತನ ಪಡೆದುಕೊಂಡ ವಿದ್ಯಾರ್ಥಿಗಳು ದಾನ ಮಾಡಿದವರ ಕಾಳಜಿ ಅರ್ಥ ಮಾಡಿಕೊಂಡು ಸದ್ವಿನಿಯೋಗ ಮಾಡಿಕೊಳ್ಳುವಂತೆ ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಕೆ.ಧರ್ಮಪಾಲ ರಾವ್ ಕಜೆ ಮಾತನಾಡಿ, ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆಯೂ ಬಹಳಷ್ಟು ಎತ್ತರಕ್ಕೆ ಬೆಳೆದು ನಿಂತಿದ್ದು ಇದರ ಕೀರ್ತಿ ಸಂಸ್ಥೆಯ ಕಾರ್ಯದರ್ಶಿಯಾಗಿರುವ ಕೆ.ಸೇಸಪ್ಪ ರೈಯವರಿಗೆ ಸಲ್ಲಬೇಕು. ನಮ್ಮಲ್ಲಿ ಇಚ್ಛಾಶಕ್ತಿ ಇದ್ದಲ್ಲಿ ಏನನ್ನೂ ಸಾಧಿಸಬಹುದು. ಇದಕ್ಕೆ ಮನಸ್ಸು ಬೇಕಿದೆ. ವಿದ್ಯಾರ್ಥಿಗಳು ಮೊಬೈಲ್‌ನಿಂದ ದೂರವಿದ್ದು ವಿದ್ಯಾಭ್ಯಾಸದ ಕಡೆಗೆ ಗಮನಕೊಡಬೇಕು. ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಬೆಳೆಯಲು ವಿದ್ಯಾಭ್ಯಾಸದ ಜೊತೆಗೆ ಸಂಸ್ಕಾರವೂ ಕಲಿಯಬೇಕು. ವಿದ್ಯಾರ್ಥಿಗಳ ಸಂಸ್ಕಾರ, ನಡವಳಿಕೆ ಬಗ್ಗೆಯೂ ಶಿಕ್ಷಕರು ಗಮನಹರಿಸಬೇಕೆಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈಯವರು, ಸಂಸ್ಥೆಯ ಹಾಗೂ ರಾಮಕುಂಜ ಅಸುಪಾಸಿನ 6 ಶಾಲೆಗಳಲ್ಲಿ ಕಲಿಯುತ್ತಿರುವ ಪ್ರತಿಭಾವಂತ ಹಾಗೂ ಕ್ರೀಡೆಯಲ್ಲಿ ಸಾಧನೆ ಮಾಡಿರುವ ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ಉತ್ತೇಜನ ಕೊಡುವ ಉದ್ದೇಶದಿಂದ ಒಟ್ಟು 3 ಲಕ್ಷ ರೂ., ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಕ್ರೀಡಾ ಟ್ರಸ್ಟ್, ಬಡವಿದ್ಯಾರ್ಥಿ ದತ್ತಿನಿಧಿ, ಕರಾವಳಿ ಗಣೇಶ್‌ರಾವ್‌ರವರು ನೀಡಿದ 1 ಲಕ್ಷ ರೂ., ಠೇವಣಿಯಿಂದ ಬಂದ ಬಡ್ಡಿಹಣದಲ್ಲಿ ಮತ್ತು ಪಿ.ಸಿ.ರಾಮ್ ಎಂಬವರು ಕಳೆದ 12 ವರ್ಷಗಳಿಂದ ಪ್ರತಿವರ್ಷ 60 ಸಾವಿರ ರೂ., ನೀಡುತ್ತಿದ್ದು ಇವೆಲ್ಲವನ್ನೂ ವಿದ್ಯಾರ್ಥಿ ವೇತನ ರೂಪದಲ್ಲಿ ನೀಡಲಾಗುತ್ತಿದೆ. ವಿದ್ಯಾರ್ಥಿಗಳೂ ಮುಂದೆ ದೊಡ್ಡ ದಾನಿಗಳಾಗಿ ಸಮಾಜಕ್ಕೆ ಒಳ್ಳೆಯ ಪ್ರಜೆಗಳಾಗಿ ಬೆಳೆಯಬೇಕು. ಕಷ್ಟದಲ್ಲಿರುವ ಮಕ್ಕಳನ್ನು ಗುರುತಿಸುವಂತೆ ಆಗಬೇಕೆಂದು ಹೇಳಿದರು. ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲಾ ಮುಖ್ಯಶಿಕ್ಷಕ ಸತೀಶ್ ಭಟ್, ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲಾ ಆಡಳಿತಾಧಿಕಾರಿ ಆನಂದ ಎಸ್.ಟಿ., ತಾಂತ್ರಿಕ ಸಲಹೆಗಾರ ಜಯೇಂದ್ರ, ಸಂಸ್ಥೆಯ ಮೇನೇಜರ್ ರಮೇಶ್ ರೈ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಜನಾರ್ದನ ಬಿ.ಎಲ್. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರೌಢಶಾಲಾ ವಿಭಾಗದ ಮುಖ್ಯಶಿಕ್ಷಕಿ ಗಾಯತ್ರಿ ಯು.ಎನ್., ಸ್ವಾಗತಿಸಿ, ಪ್ರಾಥಮಿಕ ಶಾಲಾ ವಿಭಾಗದ ಮುಖ್ಯಶಿಕ್ಷಕಿ ಲೋಹಿತಾ ವಂದಿಸಿದರು. ಶಿಕ್ಷಕ ಸುಬ್ರಹ್ಮಣ್ಯ ಸಿ.ಕೆ.ಕಾರ್ಯಕ್ರಮ ನಿರೂಪಿಸಿದರು.

3 ಲಕ್ಷ ರೂ.ವಿದ್ಯಾರ್ಥಿ ವೇತನ:

ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆಯ ಆಶ್ರಯದಲ್ಲಿ ರಾಮಕುಂಜ ಅಸುಪಾಸಿನ 6 ಗ್ರಾಮಗಳ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಕಲಿಯುತ್ತಿರುವ 100ಕ್ಕೂ ಹೆಚ್ಚು ಪ್ರತಿಭಾವಂತ ಹಾಗೂ ಕ್ರೀಡೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಶ್ರೀ ವಿದ್ಯಾಪ್ರಸನ್ನ ಸ್ವಾಮೀಜಿಯವರು ವಿದ್ಯಾರ್ಥಿ ವೇತನ ವಿತರಿಸಿ ಆಶೀರ್ವಚಿಸಿದರು. ಶಿಕ್ಷಕ ರಾಧಾಕೃಷ್ಣ ಅವರು ವಿದ್ಯಾರ್ಥಿಗಳ ಹೆಸರು ವಾಚಿಸಿದರು.

LEAVE A REPLY

Please enter your comment!
Please enter your name here