ಜ.25:ಮೊಟ್ಟೆತ್ತಡ್ಕ ಮಣ್ಣಾಪು ಶ್ರೀ ಕೊರಗಜ್ಜ ಕ್ಷೇತ್ರದಲ್ಲಿ ವಾರ್ಷಿಕ ನೇಮೋತ್ಸವ-ಪೂರ್ವಭಾವಿ ಸಭೆ

0

ಪುತ್ತೂರು: ಸರಿಸುಮಾರು 380 ವರ್ಷಗಳ ಇತಿಹಾಸವಿರುವ ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ಶ್ರೀ ಕೊರಗಜ್ಜ ಮತ್ತು ಶ್ರೀ ಆದಿಬ್ರಹ್ಮ ಮೊಗೇರ್ಕಳ ದೈವಸ್ಥಾನದ ಶ್ರೀ ಕ್ಷೇತ್ರ ಮಣ್ಣಾಪು ಶ್ರೀ ಕೊರಗಜ್ಜ ದೈವಸ್ಥಾನದ ಮೂರನೇ ವರ್ಷದ ವಾರ್ಷಿಕ ನೇಮೋತ್ಸವವು ಜ.25 ರಂದು ಮಣ್ಣಾಪು ಶ್ರೀ ಕ್ಷೇತ್ರದಲ್ಲಿ ವಿಜ್ರಂಭಣೆಯಿಂದ ನಡೆಯಲಿದ್ದು, ಇದರ ಪೂರ್ವಭಾವಿ ಸಭೆಯು ಡಿ.1 ರಂದು ಶ್ರೀ ಕ್ಷೇತ್ರ ಮಣ್ಣಾಪುವಿನ ಗೌರವಾಧ್ಯಕ್ಷರಾದ ಎನ್.ರವೀಂದ್ರ ಶೆಟ್ಟಿ ನುಳಿಯಾಲುರವರ ಅಧ್ಯಕ್ಷತೆಯಲ್ಲಿ ಜರಗಿತು.


ಜ.23 ರಂದು ಗಣಹೋಮ, ಸತ್ಯನಾರಾಯಣ ಪೂಜೆ, ಅನ್ನಸಂತರ್ಪಣೆ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ಗ್ರಾಮದೇವರ ಅರ್ಚಕರ ನೇತೃತ್ವದಲ್ಲಿ ಜರಗಲಿರುವುದು. ಜ.24 ರಂದು ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ದೈವದ ಕಾಲಾವಧಿ ತಂಬಿಲ ನಡೆಯಲಿದೆ. ಜ.25 ರಂದು ಸೂರ್ಯೋದಯದಿಂದ ಸೂರ್ಯೋಸ್ತಮಾನದ ವರೆಗೆ ವಿವಿಧ ಭಜನಾ ಮಂಡಳಿಗಳಿಂದ ಅರ್ಧ ಏಕಾಹ ಭಜನೆ ನಡೆಯಲಿದೆ. ಜ.25 ರಂದು ರಾತ್ರಿ ಕೊರಗಜ್ಜ ದೈವದ ಭಂಡಾರ ತೆಗೆಯುವುದು ಹಾಗೂ ಶ್ರೀ ದೈವಕ್ಕೆ ಎಣ್ಣೆ ಕೊಡುವುದು, ಶ್ರೀ ಕೊರಗಜ್ಜ ದೈವದ ನೇಮೋತ್ಸವ ಬಳಿಕ ಅನ್ನ ಸಂತರ್ಪಣೆ ಜರಗಲಿದೆ.


ಶ್ರೀ ಕ್ಷೇತ್ರದಲ್ಲಿ ಅನ್ನದಾನ ಸೇವೆ ಮಾಡಲು ಬಯಸುವ ಭಕ್ತರು ರೂ.2000 ನೀಡಿ ಸಹಕರಿಸುವುದು. ವಾರ್ಷಿಕ ನೇಮೋತ್ಸವದ ಆಮಂತ್ರಣ ಪತ್ರಿಕೆ ರಚನೆಯ ಜವಾಬ್ದಾರಿಯನ್ನು ಚಿತ್ರಕಲಾವಿದ ಕೇಶವ ಮಣ್ಣಾಪುರವರಿಗೆ ವಹಿಸಿಕೊಡಲಾಯಿತು ಜೊತೆಗೆ ನೇಮೋತ್ಸವಕ್ಕೆ ಹೊರೆ ಕಾಣಿಕೆಯನ್ನು ಸಮರ್ಪಿಸುವ ಭಕ್ತರು ಹೊರೆ ಕಾಣಿಕೆಯನ್ನು ಶ್ರೀ ಕ್ಷೇತ್ರಕ್ಕೆ ಆಗಮಿಸಿ ಸಮರ್ಪಿಸತಕ್ಕದ್ದು. ಶ್ರೀ ಕ್ಷೇತ್ರದಲ್ಲಿ ತಿಂಗಳಿಗೊಮ್ಮೆ ಮಕರ ಸಂಕ್ರಮಣ ದಿನದಂದು ನಡೆಯುವ ಅಗೇಲು ಸೇವೆಯು ನಿರಂತರ ನಡೆಯುವಂತಾಗಬೇಕು. ಶ್ರೀ ಕ್ಷೇತ್ರದ ಕೊರಗಜ್ಜನ ಕಟ್ಟೆಗೆ ಬಣ್ಣ ಬಳಿದು ವಾರ್ಷಿಕ ನೇಮೋತ್ಸವಕ್ಕೆ ಸಕಲ ಸಿದ್ಧತೆಗಳನ್ನು ಮಾಡುವಂತೆ ಸಭೆಯಲ್ಲಿ ನಿರ್ಧರಿಸಲಾಯಿತು.

ಶ್ರೀ ಕ್ಷೇತ್ರದ ಅರ್ಚಕರಾದ ಕುಂಡ ಮೊಗೇರ, ಅಣ್ಣು ಮಣ್ಣಾಪು, ರವಿ ಮಣ್ಣಾಪು, ಮಧ್ಯಸ್ತರಾದ ಗಣೇಶ್ ಪೂಜಾರಿ ಕೆಮ್ಮಿಂಜೆ, ಶ್ರೀ ಕ್ಷೇತ್ರದ ಅಧ್ಯಕ್ಷ ವಿಶ್ವನಾಥ್ ಮಣ್ಣಾಪು, ಆರ್ಟಿಸ್ಟ್ ಕೇಶವ ಮಣ್ಣಾಪು, ಉಮೇಶ್ ಮಣ್ಣಾಪು, ಸುಧೀರ್ ಅತ್ತಾಳ, ಸುಜೀರ್ ಕುಮಾರ್ ಶೆಟ್ಟಿ ನುಳಿಯಾಲು, ಪುತ್ತೂರು ನಗರಸಭೆಯ ಲಕ್ಷ್ಮಿ, ಯಶವಂತ ಪೆರಾಜೆ, ವಿಶ್ವನಾಥ ನಾಯ್ಕ್, ಪಂಜಳ ಶ್ರೀರಾಮ್ ಫ್ರೆಂಡ್ಸ್‌ನ ಚೆನ್ನಪ್ಪ ಗೌಡ, ರವಿಚಂದ್ರ ನಾಯ್ಕ, ಪ್ರಮೋದ್ ಬೊಳ್ಳಗುಡ್ಡೆ, ಪ್ರಶಾಂತ್ ಪಂಜಳ ಸಹಿತ ಹಲವರು ಉಪಸ್ಥಿತರಿದ್ದು ಸಲಹೆ ಸೂಚನೆಯನ್ನು ನೀಡಿ ಸಹಕರಿಸಿದರು. ಶ್ರೀ ಕ್ಷೇತ್ರದ ಉಪಾಧ್ಯಕ್ಷ ವಿಶ್ವನಾಥ್ ಪೂಜಾರಿ ಮೊಟ್ಟೆತ್ತಡ್ಕ ಸ್ವಾಗತಿಸಿ, ಗಂಗಾಧರ್ ಮಣ್ಣಾಪು ವಂದಿಸಿದರು.

ವರ ಸಿದ್ಧಿಸುವ ಕ್ಷೇತ್ರ…
ಶ್ರೀ ಕ್ಷೇತ್ರ ಮಣ್ಣಾಪು ಕೊರಗಜ್ಜ ದೈವಸ್ಥಾನವು ವರ್ಷದಿಂದ ವರ್ಷಕ್ಕೆ ಭಕ್ತರ ಭಕ್ತಿಯಿಂದ ಅಭಿವೃದ್ಧಿ ಹೊಂದುತ್ತಿದೆ. ಶ್ರೀ ಕ್ಷೇತ್ರಕ್ಕೆ ಆಗಮಿಸಿ ಭಕ್ತಿಯಿಂದ ಪ್ರಾರ್ಥಿಸುವ ಭಕ್ತರಿಗೆ ಶ್ರೀ ಕೊರಗಜ್ಜ ವರವ ನೀಡಿ ಆಶೀರ್ವದಿಸುತ್ತಿದ್ದಾನೆ. ಶ್ರೀ ಮಣ್ಣಾಪು ಕ್ಷೇತ್ರದ ಹೃದಯವಂತ ಭಕ್ತರು ಶ್ರೀ ಕ್ಷೇತ್ರದ ಪ್ರಮುಖ ಶಕ್ತಿಯಾಗಿ ಕ್ಷೇತ್ರದ ಬೆಳವಣಿಗೆಯಲ್ಲಿ ಸಹಕರಿಸುತ್ತಿದ್ದಾರೆ. ಶ್ರೀ ಕ್ಷೇತ್ರದಲ್ಲಿ ಕಳೆದ ಎರಡು ವರ್ಷಗಳಿಂದ ನಡೆಯುತ್ತಿರುವ ಪ್ರತಿಯೊಂದು ಕಾರ್ಯಕ್ರಮಗಳು ಬಹಳ ಶಿಸ್ತುಬದ್ಧವಾಗಿ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಶ್ರೀ ಕ್ಷೇತ್ರದಲ್ಲಿ ನಡೆಯುವ ವಾರ್ಷಿಕ ನೇಮೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿ ಕೊರಗಜ್ಜನ ಕೃಪೆಗೆ ಪಾತ್ರರಾಗಬೇಕು.

-ಎನ್.ರವೀಂದ್ರ ಶೆಟ್ಟಿ ನುಳಿಯಾಲು, ಗೌರವಾಧ್ಯಕ್ಷರು, ಶ್ರೀ ಕ್ಷೇತ್ರ ಮಣ್ಣಾಪು

ಶಾಶ್ವತ ದ್ವಾರ ಲೋಕಾರ್ಪಣೆ..

ಮಣ್ಣಾಪು ಶ್ರೀ ಕೊರಗಜ್ಜ ಕ್ಷೇತ್ರದಲ್ಲಿ ಪಂಜಳ ಜೈ ಶ್ರೀರಾಂ ಗೆಳೆಯರ ಬಳಗದ ವತಿಯಿಂದ  ಶಾಶ್ವತ ದ್ವಾರವನ್ನು ನಿರ್ಮಿಸಿಕೊಡಲಾಗುತ್ತಿದ್ದು, ಈ ಶಾಶ್ವತ ದ್ವಾರದ ಲೋಕಾರ್ಪಣೆಯು ವಾರ್ಷಿಕ ನೇಮೋತ್ಸವದ ದಿನದಂದು ನಡೆಯಲಿದೆ. ಅಲ್ಲದೆ ಇದೇ ಗೆಳೆಯರ ಬಳಗದಿಂದ `ಮಣ್ಣಾಪುದ ಮಣ್ಣಸಿರಿ’ ಎಂಬ ಭಕ್ತಿಗೀತೆಯ ಅನಾವರಣವೂ ಶ್ರೀ ಕ್ಷೇತ್ರದಲ್ಲಿ ಜರಗಲಿದೆ.

LEAVE A REPLY

Please enter your comment!
Please enter your name here