ಬೆಳ್ತಂಗಡಿ: ರವಿವಾರ ಬೆಳ್ತಂಗಡಿಯ ಗರ್ಡಾಡಿ ಸಮೀಪ ನಡೆದ ರಸ್ತೆ ಅಪಘಾತದಲ್ಲಿ ನಿಧನರಾದ ಸಾಮಾಜಿಕ ಮತ್ತು ಧಾರ್ಮಿಕ ಮುಂದಾಳು ನೌಷಾದ್ ಹಾಜಿ ಅವರ ಅಂತ್ಯ ಸಂಸ್ಕಾರವು ಸೂರಲ್ಪಾಡಿ ಜುಮಾ ಮಸೀದಿ ದಫನ ಭೂಮಿಯಲ್ಲಿ ನಡೆಯಿತು.
ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯ ಬಳಿಕ ಬೆಳ್ತಂಡಿಯ ದಾರುಸ್ಸಲಾಂ ಶಿಕ್ಷಣ ಸಂಸ್ಥೆಗೆ ಒಯ್ದು ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಬಳಿಕ ಮೃತದೇಹವನ್ನು ಅವರ ನಿವಾಸಕ್ಕೆ ಕೊಂಡೊಯ್ದು ಆ ಬಳಿಕ ಜುಮಾ ಮಸೀದಿಗೆ ಕೊಂಡೊಯ್ಯಲಾಯಿತು. ಅಲ್ಲಿಯೂ ಸಾರ್ವಜನಿಕ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಈ ವೇಳೆ ಸಾವಿರಾರು ಮಂದಿ ಜಾತಿ ಧರ್ಮ ಮತ ಮರೆತು ಅಂತಿಮ ದರ್ಶನ ಪಡೆದರು. 1ಕೀ.ಮೀ ವರೆಗೂ ರಸ್ತೆಯಲ್ಲಿ ಜನಸಂದಣಿ ನೆರೆದಿತ್ತು. ಎಸ್ಕೆಎಸ್ಎಸ್ಎಫ್ ನ ವಿಖಾಯ ಸದಸ್ಯರು ಪೊಲೀಸರೊಂದಿಗೆ ಟ್ರಾಫಿಕ್ ನಿಯಂತ್ರಣಕ್ಕೆ ಸಹಕರಿಸಿದರು. ರಾತ್ರಿ ಸೂರಲ್ಪಾಡಿ ಮಸೀದಿಯ ದಫನ ಭೂಮಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿತು. ಇನ್ನಾಲಿಲ್ಲಾಹಿ ವ ಇನ್ನಾಇಲೈಹೀ ರಾಜೀವೂನ್ .