ಪುತ್ತೂರು:ಕೆಮ್ಮಿಂಜೆ ಗ್ರಾಮದ ಕುದ್ಕೋಳಿ ಎಂಬಲ್ಲಿ ನಾಲ್ಕು ಕುಟುಂಬಕ್ಕೆ ಹೋಗುವ ದಾರಿಯನ್ನು ಅಕ್ರಮ ಸಕ್ರಮದ ಮೂಲಕ ಪಹಣಿ ಮಾಡಿಸಿಕೊಂಡು ದಾರಿಗೆ ಹಾಕಿರುವ ಬೇಲಿ ತೆರವು ಮಾಡಿ ನಮಗೆ ಗಡಿ ಗುರುತು ಮಾಡಿಕೊಡಬೇಕೆಂದು ಆಗ್ರಹಿಸಿ ಆ ಭಾಗದ ನಾಲ್ಕು ಕುಟುಂಬದವರು ಅಂಬೇಡ್ಕರ್ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಪುತ್ತೂರು ತಾಲೂಕು ಆಡಳಿತ ಸೌಧದ ಮುಂದೆ ಜ.2ರಂದು ಧರಣಿ ನಡೆಸಿದರು.
ಕೆಮ್ಮಿಂಜೆ ಗ್ರಾಮದ ಕುದ್ಕೋಳಿ ಎಂಬಲ್ಲ ನಾಲ್ಕು ದಲಿತ ಕುಟಂಬದವರು ಕಳೆದ 40 ವರ್ಷಗಳಿಂದ ಬಳಸುತ್ತಿದ್ದ ರಸ್ತೆಯೊಂದನ್ನು ಜಯಲತಾ ಎಂಬವರು ಅಕ್ರಮ ಸಕ್ರಮದ ಮೂಲಕ ಪಹಣಿ ಮಾಡಿಸಿಕೊಂಡು ರಸ್ತೆ ಬಂದ್ ಮಾಡಿದ್ದಾರೆ. ಈ ಹಿಂದೆ ಒಮ್ಮೆ ರಸ್ತೆ ಇರುವ ಕಾರಣ ಪಹಣಿ ಪತ್ರ ರದ್ದಾಗಿತ್ತು. ಆದರೆ ಇದೀಗ ಮತ್ತೆ ಪಹಣಿ ಪತ್ರ ಮಾಡಿಸಿಕೊಂಡಿದ್ದಾರೆ. ನಮಗೆ ನ್ಯಾಯ ಸಿಗುವ ತನಕ ನಾವು ಧರಣಿಯಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದು ದಲಿತ ಕುಟುಂಬದವರು ನಡೆಸುತ್ತಿರುವ ಧರಣಿಯ ನೇತೃತ್ವ ವಹಿಸಿರುವ ಅಂಬೇಡ್ಕರ್ ರಕ್ಷಣಾ ವೇದಿಕೆಯ ಸುಂದರ ಪಾಟಾಜೆ ಅವರು ತಿಳಿಸಿದ್ದಾರೆ. ರಸ್ತೆಯ ಫಲಾನುಭವಿಗಳಾದ ಲಲಿತಾ, ರತ್ನಾ, ಶೀನಪ್ಪ, ರಾಮು, ಕೃಷ್ಣಪ್ಪ, ಪರಮೇಶ್ವರ, ಶೇಷಪ್ಪ, ತನಿಯಪ್ಪ ಅವರು ಧರಣಿಯಲ್ಲಿ ಭಾಗವಹಿಸಿದ್ದರು.