ನವದೆಹಲಿ :ಕಾರಿನ ಚಕ್ರದಡಿ ಸಿಲುಕಿ ಎಳೆದೊಯ್ಯಲ್ಪಟ್ಟು ಯುವತಿ ಸಾವನ್ನಪ್ಪಿದ ಘಟನೆಯ ಬಳಿಕ ರಾಜಧಾನಿಯಲ್ಲಿ ಮತ್ತೊಮ್ಮೆ ಮಹಿಳೆಯರ ಸುರಕ್ಷತೆಯ ಬಗ್ಗೆ ಪ್ರಶ್ನೆಗಳು ಹುಟ್ಟಿಕೊಂಡಿದೆ. ಮಾತ್ರವಲ್ಲ ಘಟನೆ ಸಂಭವಿಸಿದಾಗ ಅಂಜಲಿ ಸ್ನೇಹಿತೆ ಜತೆಗಿದ್ದಳು ಎಂದು ಮೂಲಗಳು ತಿಳಿಸಿದೆ.
ಬಲೇನೋ ಕಾರು ಸ್ಕೂಟರ್ ಗೆ ಡಿಕ್ಕಿ ಹೊಡೆದು 12 ಕಿಲೋ ಮಿ. ಎಳೆದುಕೊಂಡು ಹೋದ ಘಟನೆ ಸಂಭವಿಸಿದ ವೇಳೆ ಅಂಜಲಿ ಸ್ನೇಹಿತೆ ನಿಧಿ ಎಂಬವಳು ಜತೆಯಲ್ಲಿದ್ದರು ಎಂಬುವುದನ್ನು ತನಿಖಾ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಸಣ್ಣ ಪುಟ್ಟ ಗಾಯಗೊಂಡಿದ್ದ ಆಕೆ ಘಟನೆ ಬಳಿಕ ಸ್ಥಳದಿಂದ ಪರಾರಿಯಾಗಿದ್ದಳು. ಅಂಜಲಿಯ ಕಾಲು ಆಕ್ಸೆಲ್ ಗೆ ಸಿಕ್ಕಿಹಾಕಿಕೊಂಡು ಕಾರಿನಲ್ಲಿದ್ದ ಆರೋಪಿಗಳು ಆಕೆಯನ್ನು ಸ್ಕೂಟರ್ ನೊಂದಿಗೆ ಎಳೆದುಕೊಂಡು ಹೋಗಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಕಾಂಜವಾಲಾದಲ್ಲಿ ಕಾರು ಯೂಟರ್ನ್ ತೆಗೆದುಕೊಳ್ಳುವ ಸಂಧರ್ಭದಲ್ಲಿ ಕಾರಿನಲ್ಲಿದ್ದ ಆರೋಪಿ ಮಿಥುನ್ ಗೆ ಕೈ ಕಾಣಿಸಿತ್ತು. ಕಾರು ನಿಲ್ಲಿಸಿದಾಗ ಸಿಕ್ಕಿ ಹಾಕಿಕೊಂಡಿದ್ದ ಶವ ಕಳಚಿ ಬಿದ್ದಿದೆ. ಆ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತನಿಖೆ ಮುಂದುವರಿದಿದೆ