ಪುತ್ತೂರು: ಅರಿಯಡ್ಕ ಗ್ರಾಮದ ಕೌಡಿಚ್ಚಾರು ಪುನರ್ ನಿರ್ಮಿತ ಭಜನಾ ಮಂದಿರದಲ್ಲಿ ಜ.6ರಿಂದ 9ರವರೆಗೆ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಯವರ ಮಾರ್ಗದರ್ಶನದಲ್ಲಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ಶ್ರೀಕೃಷ್ಣ ದೇವರ ರಜತ ಛಾಯಾಫಲಕ ಪ್ರತಿಷ್ಠೆ, ಶ್ರೀಕೃಷ್ಣ ಸಭಾಭವನ ಲೋಕಾರ್ಪಣೆ ಹಾಗೂ ಭಜನಾ ಮಂಗಲೋತ್ಸವ ನಡೆಯಲಿದೆ.
ಹಸಿರುವಾಣಿ:
ಜ.6 ರಂದು ಬೆಳಿಗ್ಗೆ 10 ರಿಂದ ಹಸಿರುವಾಣಿ ಹೊರೆಕಾಣಿಕೆ ನಡೆಯಲಿದೆ. ವಿವಿಧ ಕಡೆಗಳಿಂದ ಬೆಳಿಗ್ಗೆ ಹೊರೆಕಾಣಿಕೆಯ ಶೋಭಾಯಾತ್ರೆ ಹೊರಟು ಮಧ್ಯಾಹ್ನ ಶ್ರೀಕೃಷ್ಣ ಭಜನಾ ಮಂದಿರಕ್ಕೆ ತಲುಪಲಿದೆ. ಬಳಿಕ ಉಗ್ರಾಣ ಮುಹೂರ್ತ, ಮಾಣಿಲ ಶ್ರೀಧಾಮ ಕ್ಷೇತ್ರದ ಮೋಹನದಾಸ ಸ್ವಾಮೀಜಿ ಮತ್ತು ಕಟೀಲು ಕ್ಷೇತ್ರದ ಪ್ರಧಾನ ಅರ್ಚಕ ಕಮಲಾದೇವಿ ಪ್ರಸಾದ ಆಸ್ರಣ್ಣರವರು ಆಶೀರ್ವಚನ ನೀಡಲಿದ್ದಾರೆ. 12.30ರಿಂದ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಶ್ರೀಕೃಷ್ಣ ಭಜನಾ ಮಂದಿರದ ಭಜನಾ ಸಂಕೀರ್ತನ ಸಮಿತಿ ಗೌರವಾಧ್ಯಕ್ಷ ಸದಾಶಿವ ಮಣಿಯಾಣಿ ಕುತ್ಯಾಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಅನ್ನಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ ತಂತ್ರಿಗಳ ಆಗಮನ, ಪೂರ್ಣಕುಂಭ ಸ್ವಾಗತ, ಸಾಮೂಹಿಕ ಪ್ರಾರ್ಥನೆ, ವೈದಿಕ ಕಾರ್ಯಕ್ರಮ, ರಾಕ್ಷೆಘ್ನ ಹೋಮ, ವಾಸ್ತು ಹೋಮ, ಅನ್ನಸಂತರ್ಪಣೆ ನಡೆಯಲಿದೆ.
ಶ್ರೀಕೃಷ್ಣ ದೇವರ ರಜತ ಛಾಯಾಫಲಕ ಪ್ರತಿಷ್ಠೆ:
ಜ.7 ರಂದು ಬೆಳಿಗ್ಗೆ ಗಣಪತಿ ಹೋಮ, ನಾಗನ ಕಟ್ಟೆಯಲ್ಲಿ ತಂಬಿಲ, ಭಜನಾ ಸೇವೆ, ಶ್ರೀಕೃಷ್ಣ ದೇವರ ರಜತ ಛಾಯಾಫಲಕ ಪ್ರತಿಷ್ಠೆ, ಮಹಾಪೂಜೆ, ನಿತ್ಯ ನೈಮಿತ್ಯಾದಿಗಳ ನಿರ್ಣಯ, ಪ್ರಸಾದ ವಿತರಣೆ ನಡೆಯಲಿದೆ. ಪುತ್ತೂರು ಶಾಸಕ ಸಂಜೀವ ಮಠಂದೂರುರವರು ನೂತನ ಶ್ರೀಕೃಷ್ಣ ಸಭಾಭವನ ಲೋಕಾರ್ಪಣೆ ಮಾಡಲಿದ್ದಾರೆ. ಬಳಿಕ ನಡೆಯುವ ಸಭಾಕಾರ್ಯಕ್ರಮದಲ್ಲಿ ಎಡನೀರು ಕ್ಷೇತ್ರದ ಶ್ರೀ ಸಚ್ಚಿದಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಶ್ರೀಕೃಷ್ಣ ಭಜನಾ ಮಂದಿರದ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್ ದೀಪಪ್ರಜ್ವಲನೆ ಮಾಡಲಿದ್ದಾರೆ. ಕುಂಟಾರು ರವೀಶ ತಂತ್ರಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ವಾಸ್ತುತಜ್ಞ ಎಸ್.ಎಂ.ಪ್ರಸಾದ್ ಮುನಿಯಂಗಳರವರನ್ನು ಪುತ್ತೂರು ಆದರ್ಶ ಆಸ್ಪತ್ರೆ ವೈದ್ಯ ಡಾ.ಎಂ.ಕೆ.ಪ್ರಸಾದ್ ಸನ್ಮಾನಿಸಲಿದ್ದಾರೆ. ಮಧ್ಯಾಹ್ನ ಅನ್ನಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಂಜೆ ನಡೆಯುವ ಸಭಾಕಾರ್ಯಕ್ರಮದಲ್ಲಿ ಮೀನುಗಾರಿಕೆ ಮತ್ತು ಒಳನಾಡು ಸಾರಿಗೆ ಸಚಿವ ಅಂಗಾರ ಎಸ್. ದೀಪ ಪ್ರಜ್ವಲನೆ ಮಾಡಲಿದ್ದಾರೆ. ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ಆರ್.ನಿರಾಣಿ ದಾನಿಗಳನ್ನು ಸನ್ಮಾನಿಸಲಿದ್ದಾರೆ. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಾಸು ಪೂಜಾರಿ ಗುಂಡ್ಯಡ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಬಳಿಕ ಅನ್ನಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ.
ಅರ್ಧಏಕಾಹ ಭಜನೆ, ಮಂಗಲೋತ್ಸವ:
ಜ.8 ರಂದು ಬೆಳಿಗ್ಗೆಯಿಂದ ವಿವಿಧ ಭಜನಾ ಮಂಡಳಿಯವರಿಂದ ಭಜನಾ ಸಂಕೀರ್ತನೆ, ಅರ್ಧ ಏಕಾಹ ಭಜನಾ ಮಂಗಳೋತ್ಸವ ನಡೆಯಲಿದೆ. ದೈವ ನರ್ತಕ ಕೃಷ್ಣಪ್ಪ ಅಜಲಾಯ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ನಡೆಯುವ ಸಭಾಕಾರ್ಯಕ್ರಮದಲ್ಲಿ ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಶ್ರೀಕೃಷ್ಣ ಭಜನಾ ಮಂದಿರದ ಆಡಳಿತ ಸಮಿತಿ ಅಧ್ಯಕ್ಷ ಎ.ರಾಮದಾಸರೈ ಮದ್ಲ ಅಧ್ಯಕ್ಷತೆ ವಹಿಸಲಿದ್ದಾರೆ. ವಾಗ್ಮಿ ಶಶಿಕಾಂತ ಶೆಟ್ಟಿ ಕಾರ್ಕಳ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಬೀಳರ್ಗಿ ಶುಗರ್ಸ್ನ ನಿರ್ದೇಶಕ ಲಕ್ಷ್ಮಣ ಆರ್.ನಿರಾಣಿ, ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಹಾಗೂ ಶ್ರೀ.ಕ್ಷೇ.ಧ.ಗ್ರಾ.ಯೋಜನೆ ಬಿ.ಸಿ.ಟ್ರಸ್ಟ್ ನಿರ್ದೇಶಕ ಪ್ರವೀಣ್ ಕುಮಾರ್ ದಾನಿಗಳನ್ನು ಸನ್ಮಾನಿಸಲಿದ್ದಾರೆ. ರಾತ್ರಿ 8 ರಿಂದ ಅನ್ನಸಂತರ್ಪಣೆ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಜ.9 ರಂದು ಬೆಳಿಗ್ಗೆ 9 ರಿಂದ ತಾಲೂಕು ಅತ್ಯುತ್ತಮ ಯುವ ಪ್ರಶಸ್ತಿ ಪುರಸ್ಕೃತ ಕೌಡಿಚ್ಚಾರು ವಿವೇಕಾನಂದ ಯುವಕ ವೃಂದದ ದಶಸಂಭ್ರಮ ಕಾರ್ಯಕ್ರಮ, ಬಡಗನ್ನೂರು ಆಲಂತಡ್ಕ ಶ್ರೀವನಶಾಸ್ತಾರ ಮಕ್ಕಳ ಕುಣಿತ ಭಜನಾ ತಂಡದಿಂದ ಕುಣಿತ ಭಜನೆ, ಪಾಪೆಮಜಲು ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಕಾರ್ಯಕ್ರಮ ವೈವಿಧ್ಯ, ದಶಸಂಭ್ರಮ ಸಭಾಕಾರ್ಯಕ್ರಮ, ಮಹಾಪೂಜೆ, ಅನ್ನಸಂತರ್ಪಣೆ, ಜೈಗುರುದೇವ್ ಆರ್ಟ್ ಆಫ್ ಲಿವಿಂಗ್ ಅಡೂರ್ರವರಿಂದ ತಿರುವಾಧಿರ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಸಾಂಸ್ಕೃತಿಕ ಕಾರ್ಯಕ್ರಮ
ಜ.6 ರಂದು ಅಪರಾಹ್ನ 2.30ರಿಂದ ವಾಗ್ದೇವಿ ಸಂಗೀತ ಶಾಲೆ ಪುತ್ತೂರು, ವಿದುಷಿ ಸವಿತಾ ಪುತ್ತೂರು ಬಳಗದವರಿಂದ ಶಾಸ್ತ್ರೀಯ ಸಂಗೀತ ಕಚೇರಿ, ಕೌಡಿಚ್ಚಾರು ಶ್ರೀಕೃಷ್ಣ ಯಕ್ಷಗಾನ ಕಲಾಸಂಘದ ಬಾಲಕಲಾವಿದರ ರಂಗಪ್ರವೇಶ ಪ್ರಸಂಗ ಗುರುದಕ್ಷಿಣೆ ನಡೆಯಲಿದೆ.
ಜ.7 ರಂದು ಅಪರಾಹ್ನ 3 ರಿಂದ ಭವ್ಯಶ್ರೀ ಕುಲ್ಕುಂದ ಕಂಠಸಿರಿಯಲ್ಲಿ ಅತಿಥಿ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ತಾಳಮದ್ದಲೆ ಜಾಂಬವತಿ ಕಲ್ಯಾಣ ನಡೆಯಲಿದೆ. ರಾತ್ರಿ 9.30ರಿಂದ ವಿಜಯಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದಲ್ಲಿ ಕಲಾಸಂಗಮ ಕಲಾವಿದರಿಂದ ಪೌರಾಣಿಕ ನಾಟಕ ಶಿವದೂತೆ ಗುಳಿಗೆ ನಡೆಯಲಿದೆ.
ಜ.8 ರಂದು ರಾತ್ರಿ 8.30ರಿಂದ ವಿಠಲ ನಾಯಕ್ ಕಲ್ಲಡ್ಕರವರಿಂದ ವಿನೂತನ ಶೈಲಿಯ ಗೀತಾ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ನಡೆಯಲಿದೆ
ಜ.9ರಂದು ಸಂಜೆ 5.30ರಿಂದ ಶ್ರೀ ಜ್ಙಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ಕೃಪಾ ಪೋಷಿತ ಯಕ್ಷಗಾನ ಮಂಡಳಿ, ನಾಗವೃಜ ಕ್ಷೇತ್ರ ಪಾವಂಜೆ, ಯಕ್ಷದ್ರುವ ಪಟ್ಲ ಸತೀಶ್ ಶೆಟ್ಟಿಯವರ ಸಾರಥ್ಯದ ಶ್ರೀ ದೇವಿ ಮಹಾತ್ಮೆ ಕಾರ್ಯಕ್ರಮ ನಡೆಯಲಿದೆ.