ಕಡಬ: ಕಟ್ಟಡ ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಲು ಆಗ್ರಹಿಸಿ ಭಾರತೀಯ ಮಜ್ದೂರ್ ಸಂಘದ ಕಡಬ ತಾಲೂಕು ಘಟಕದ ವತಿಯಿಂದ ಮುಖ್ಯಮಂತ್ರಿಯವರಿಗೆ ಕಡಬ ತಹಸೀಲ್ದಾರ್ ಮೂಲಕ ಜ.2ರಂದು ಮನವಿ ಸಲ್ಲಿಸಲಾಯಿತು.
ಭಾರತೀಯ ಮಜ್ದೂರು ಸಂಘ ಹಲವು ವರ್ಷಗಳಿಂದ ದೇಶದ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಮತ್ತು ಅವರ ಶ್ರೇಯೋಭಿವೃದ್ಧಿಗೆ ಹೋರಾಟ ಮಾಡುತ್ತಿರುವ ಅತೀ ದೊಡ್ಡ ಕಾರ್ಮಿಕ ಸಂಘಟನೆಯಾಗಿದೆ. ಅದರ ಜೊತೆಯಲ್ಲಿ ಕಾರ್ಮಿಕರಲ್ಲಿ ರಾಷ್ಟ್ರೀಯತೆ ಹಾಗೂ ಸಾಮಾಜಿಕ ಕಳಕಳಿಯನ್ನು ಮೂಡಿಸುವ ಕೆಲಸ ಮಾಡುತ್ತಿದೆ. ಕರ್ನಾಟಕ ರಾಜ್ಯದಲ್ಲಿ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಗಮನ ಹರಿಸದೇ ಉದಾಸೀನ ಮಾಡುತ್ತಿರುವುದು ಮತ್ತು ಹಲವು ಕಾರ್ಮಿಕ ವಿರೋಧಿ ನೀತಿಗಳನ್ನು ಅನುಸರಿಸುತ್ತಿರುವುದನ್ನು ಭಾರತೀಯ ಮಜ್ದೂರು ಸಂಘ ತೀವ್ರವಾಗಿ ಖಂಡಿಸುತ್ತದೆ. ಕರ್ನಾಟಕ ರಾಜ್ಯದಲ್ಲಿ ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಕಾರ್ಮಿಕ ವಿರೋಧಿ ನೀತಿಗಳನ್ನು ಕೈ ಬಿಡಬೇಕು. ಇಲ್ಲವಾದಲ್ಲಿ ಮುಂದಿನ ಹೋರಾಟವನ್ನು ರೂಪಿಸಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.
ಕಡಬ ಉಪತಹಸೀಲ್ದಾರ್ ಕೆ.ಟಿ ಮನೋಹರ್ರವರು ಮನವಿ ಸ್ವೀಕರಿಸಿ ಮುಖ್ಯಮಂತ್ರಿಗೆ ಕಳಿಸುವ ಭರವಸೆ ನೀಡಿದರು. ಮನವಿ ನೀಡುವ ವೇಳೆ ಮರ್ದಾಳ ಗ್ರಾಮ ಪಂಚಾಯತ್ ಸದಸ್ಯರಾದ ಹರೀಶ್ ಕೋಡಂದೂರು, ಗಂಗಾಧರ ರೈ ಬಸವನಪಾಳು, ಬಿಎಮ್ಎಸ್ ಕಡಬ ತಾಲೂಕು ಘಟಕದ ಅಧ್ಯಕ್ಷ ತು.ಚಂದ್ರಶೇಖರ, ಕಾರ್ಯದರ್ಶಿ ಜನಾರ್ದನ ಬಲ್ಯ, ಗೌರವಾಧ್ಯಕ್ಷ ರಾಧಾಕೃಷ್ಣ ಕೋಲ್ಪೆ, ಕೋಶಾಧಿಕಾರಿ ಸುಧೀರ್ ರಾವ್ ಕಳಾರ, ಸಂಘಟನಾ ಕಾರ್ಯದರ್ಶಿ ಉದಯಕುಮಾರ್ ಪೂವಾಳ, ಜೊತೆ ಕಾರ್ಯದರ್ಶಿ ಜಗನ್ನಾಥ ಬಲ್ಯ, ಉಪಾಧ್ಯಕ್ಷರಾದ ದೇಜಪ್ಪ ಬಲ್ಯ, ಕೇಶವ ಕೊಣಾಲು ಉಪಸ್ಥಿತರಿದ್ದರು.