ಪತಾಕೆ, ಬಂಟಿಗ್ಸ್, ಬ್ಯಾನರ್, ವಿದ್ಯುತ್ ದೀಪಗಳಿಂದ ಶೃಂಗಾರಗೊಂಡ ಪೇಟೆ
ಪುತ್ತೂರು: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪುತ್ತೂರಿನಿಂದ 8 ಕಿ.ಮೀ ದೂರದ ಪರ್ಪುಂಜದಲ್ಲಿರುವ ಶ್ರೀ ರಾಮಜಾಲು ಗರಡಿಗೆ ತನ್ನದೇ ಆದ ಇತಿಹಾಸವಿದೆ. ರಾಮ ಲಕ್ಷ್ಮಣರು ನಡೆದಾಡಿದ ಭೂಮಿ ಎಂದೇ ಪ್ರಸಿದ್ಧಿ ಪಡೆದುಕೊಂಡಿರುವ ಈ ರಾಮಜಾಲು ಮಣ್ಣಿನಲ್ಲಿ ನೆಲೆನಿಂತು ಭಕ್ತರನ್ನು ಸಲಹುತ್ತಿರುವ ಶ್ರೀ ಕೋಟಿ ಚೆನ್ನಯರ ಕಾರಣಿಕತೆಯನ್ನು ತಿಳಿಯಬೇಕಾದರೆ ಇಲ್ಲಿ ನಡೆಯುವ ನೇಮೋತ್ಸವದಲ್ಲಿ ಪಾಲ್ಗೊಳ್ಳಬೇಕಾಗಿದೆ.
ಹತ್ತು ಹಲವು ಕಾರಣಿಕತೆಗಳ ಮೂಲಕ ಜಿಲ್ಲೆಯಾದ್ಯಂತ ಹೆಸರು ಗಳಿಸಿಕೊಂಡಿರುವ ಒಳಮೊಗ್ರು ಗ್ರಾಮದ ಪರ್ಪುಂಜ ರಾಮಜಾಲು ಶ್ರೀ ಬ್ರಹ್ಮಬೈದೇರ್ಕಳ ಗರಡಿಯಲ್ಲಿ ಶ್ರೀ ಬ್ರಹ್ಮಬೈದೇರುಗಳ ನೇಮೋತ್ಸವವು ಜ.7 ರಂದು ವಿಜೃಂಭಣೆಯಿಂದ ನಡೆಯಲಿದೆ. ಇದಕ್ಕೆ ಪೂರ್ವಭಾವಿಯಾಗಿ ಭರದ ಸಿದ್ಧತೆಗಳು ನಡೆಯುತ್ತಿದ್ದು ಪರ್ಪುಂಜ ಪೇಟೆ ಸೇರಿದಂತೆ ಗರಡಿಯುದ್ದಕ್ಕೂ ರಸ್ತೆ, ಪೇಟೆ ಶೃಂಗಾರಗೊಂಡಿದೆ.
ಈ ವರ್ಷ ನೇಮೋತ್ಸವದ ಪಂಚದಶ ಸಂಭ್ರಮ ನಡೆಯುತ್ತಿದ್ದು ಪ್ರತಿ ವರ್ಷದಂತೆ ಈ ವರ್ಷವೂ ಪೇಟೆಯನ್ನು ಕೇಸರಿ ಬಂಟಿಗ್ಸ್, ಬ್ಯಾನರ್, ಪತಾಕೆಗಳಿಂದ ಅಲಂಕಾರ ಮಾಡಲಾಗಿದೆ. ಗರಡಿಯನ್ನು ಸಂಪೂರ್ಣ ವಿದ್ಯುತ್ದೀಪಗಳಿಂದ ಅಲಂಕಾರ ಮಾಡಲಾಗಿದ್ದು ಪ್ರತಿ ವರ್ಷಕ್ಕಿಂತ ಈ ವರ್ಷ ಲೈಟಿಂಗ್ಸ್ಗೆ ಹೆಚ್ಚು ಒತ್ತು ನೀಡಲಾಗಿದ್ದು ಗರಡಿಯನ್ನು ವಿನೂತನ ರೀತಿಯಲ್ಲಿ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿದೆ. ಇದಲ್ಲದೆ ಗರಡಿಗೆ ಸಂಪೂರ್ಣ ಪೈಟಿಂಗ್ ಮಾಡಲಾಗಿದ್ದು ಆಕರ್ಷಕವಾಗಿ ಕಂಗೊಳಿಸುತ್ತಿದೆ.
ಪ್ರತಿ ವರ್ಷದಂತೆ ಈ ವರ್ಷವೂ ಸುಮಾರು 20 ಸಾವಿರಕ್ಕೂ ಅಧಿಕ ಮಂದಿ ನೇಮೋತ್ಸವದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದ್ದು ಇದಕ್ಕೆ ಬೇಕಾದ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಲಾಗಿದೆ. ಭಕ್ತರಿಗೆ ಯಾವುದೇ ರೀತಿಯಲ್ಲೂ ಅನ್ನಪ್ರಸಾದದಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಲಾಗಿದ್ದು ಅನ್ನಸಂತರ್ಪಣೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ನೇಮೋತ್ಸವದಲ್ಲಿ ವಿಶೇಷವಾಗಿ ರಾಮಜಾಲು ಬೆಡಿ ಎಂದೇ ಪ್ರಸಿದ್ಧಿ ಪಡೆದುಕೊಂಡಿರುವ ಆಕರ್ಷಕ ಸುಡುಮದ್ದು ಪ್ರದರ್ಶನ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಸಂಜೆ ಭಂಡಾರ ತೆಗೆದ ಬಳಿಕ ಸ್ಥಳೀಯ ಪ್ರತಿಭೆಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ರಾತ್ರಿ 1 ಗಂಟೆಯ ಬಳಿಕ ತುಳು ನಾಟಕ ರಂಗದಲ್ಲಿ ಧೂಳೆಬ್ಬಿಸಿದ ಶಿವಧೂತ ಗುಳಿಗೆ ಎನ್ನುವ ತುಳು ನಾಟಕ ನಡೆಯಲಿದೆ. ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ವಿಶೇಷವಾಗಿ ಕೂರೇಲುಗುತ್ತು ಸುಬ್ಬಪ್ಪ ಪೂಜಾರಿ ಪ್ರಶಸ್ತಿಯನ್ನು ಈ ವರ್ಷ ಉದ್ಯಮಿ, ಸಮಾಜ ಸೇವಕ ರವಿ ಕಕ್ಕೆಪದವುರವರಿಗೆ ನೀಡಲಾಗುತ್ತಿದ್ದು, ಶ್ರೀ ರಾಮಜಾಲು ಗರಡಿ ಗೌರವ ಪ್ರತಿಭಾ ಪುರಸ್ಕಾರವನ್ನು ಎಂ.ಎಸ್ಸಿಯಲ್ಲಿ ರ್ಯಾಂಕ್ ಗಳಿಸಿದ ಹರ್ಷಿತ್ ಕೂರೇಲುರವರಿಗೆ ಮಾಡಲಾಗುತ್ತಿದೆ.
ಪ್ರತಿ ವರ್ಷದಂತೆ ಈ ವರ್ಷವೂ ನೇಮೋತ್ಸವ ಬಹಳ ಅದ್ಧೂರಿಯಾಗಿ ನಡೆಯಲಿದ್ದು ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಬೈದೇರುಗಳ ಗಂಧ ಪ್ರಸಾದ, ಅನ್ನ ಪ್ರಸಾದ ಸ್ವೀಕರಿಸಿ ಶ್ರೀ ದೈವ ದೇವರ ಕೃಪೆಗೆ ಪಾತ್ರರಾಗುವಂತೆ ರಾಮಜಾಲು ಗರಡಿಯ ಆಡಳಿತ ಮೊಕ್ತೇಸರ ಕೆ.ಸಂಜೀವ ಪೂಜಾರಿ ಕೂರೇಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.