ಆಲಂಕಾರು: ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರ

0

ಈಗಿನ ಆಹಾರ ಪದ್ಧತಿಯಿಂದಲೇ ಆರೋಗ್ಯ ಸಮಸ್ಯೆ; ಕೃಷ್ಣಪ್ಪ ಪೂಜಾರಿ

ಆಲಂಕಾರು: ಗ್ರಾಮ ಪಂಚಾಯತ್ ಆಲಂಕಾರು, ಮೂರ್ತೆದಾರರ ಸೇವಾ ಸಹಕಾರಿ ಸಂಘ ನಿ.ಆಲಂಕಾರು ಮತ್ತು ಕಂಪಾನಿಯೋ ಪುತ್ತೂರು ಇದರ ಜಂಟಿ ಆಶ್ರಯದಲ್ಲಿ ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರದ ಮಾಹಿತಿ ಕಾರ್ಯಾಗಾರ ಜ.6 ರಂದು ಆಲಂಕಾರು ಗ್ರಾಮ ಪಂಚಾಯತ್‌ನ ಸಭಾಂಗಣದಲ್ಲಿ ನಡೆಯಿತು.


ಡಿ.28 ರಿಂದ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರ ನಡೆಯುತ್ತಿದ್ದು ಇದರ ಮುಂದುವರಿದ ಭಾಗವಾಗಿ ಜ.6 ರಂದು ಮಾಹಿತಿ ಕಾರ್ಯಾಗಾರ ನಡೆಯಿತು.

ಬೆಳ್ತಂಗಡಿ ಶ್ರೀ ಗುರುದೇವ ಪ.ಪೂ.ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಕೃಷ್ಣಪ್ಪ ಪೂಜಾರಿಯವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಈಗಿನ ಆಹಾರ ಪದ್ಧತಿಯಿಂದಾಗಿ ಜನರಿಗೆ ಅನಾರೋಗ್ಯ ಸಮಸ್ಯೆ ಕಾಡುತ್ತಿದೆ. ಸಿಕ್ಕದನ್ನೆಲ್ಲಾ ತಿನ್ನುವ ಮೂಲಕ ದೇಹದ ಆರೋಗ್ಯ ಸಂರಕ್ಷಣೆಯಲ್ಲೂ ನಿರ್ಲಕ್ಷಿಸುತ್ತಿದ್ದೇವೆ. ಮಾಂಸ, ತರಕಾರಿಗಳಿಗೂ ರಾಸಾಯನಿಕ ಬೆರೆಯುತ್ತಿದೆ. ಈಗಿನ ಮೆಡಿಕಲ್ ವಿಭಾಗವೂ ವ್ಯಾಪಾರೀಕರಣ ಆಗುತ್ತಿದೆ. ಇಂತಹ ಸಂದರ್ಭದಲ್ಲಿ ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಹಾಗೂ ಆಲಂಕಾರು ಗ್ರಾಮ ಪಂಚಾಯತ್ ಫೂಟ್ ಪಲ್ಸ್ ಥೆರಪಿ ಉಚಿತ ಶಿಬಿರ ಆಯೋಜಿಸಿರುವುದು ಅತ್ಯಂತ ಉಪಯುಕ್ತವಾಗಿದೆ ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಕಂಪಾನಿಯೋ ಇದರ ಪ್ರವರ್ತಕರಾದ ಸೀತಾರಾಮ ಶೆಟ್ಟಿಯವರು ಮಾತನಾಡಿ, ದೇಹದಲ್ಲಿ ರಕ್ತ ಸಂಚಲನ ಚೆನ್ನಾಗಿದ್ದಲ್ಲಿ ರೋಗಗಳಿಂದ ದೂರವಿರಬಹುದು. ಆದ್ದರಿಂದ ಮನುಷ್ಯನ ದೇಹದಲ್ಲಿ ರಕ್ತ ಸಂಚಲನ ಬಹಳ ಮುಖ್ಯವಾಗಿದೆ. ಸುಖ ನಿದ್ರೆಯಿಂದ ಜೀರ್ಣಕ್ರಿಯೆಯೂ ಚೆನ್ನಾಗಿ ಆಗಿ ಆರೋಗ್ಯವೂ ಸುಧಾರಣೆಯಾಗಲಿದೆ ಎಂದು ಹೇಳಿ, ಮಧುಮೇಹ, ಅಧಿಕ ರಕ್ತದೊತ್ತಡ, ಸ್ನಾಯುಸೆಳೆತ, ಪಾರ್ಕಿನ್‌ಸನ್, ಸಯಾಟಿಕ್, ಥೈರಾಯಿಡ್, ಪಾರ್ಶ್ವವಾಯು, ಬೆನ್ನು ನೋವು ಸೇರಿದಂತೆ ಜನರನ್ನು ಕಾಡುವ ವಿವಿಧ ರೋಗಗಳಿಗೆ ಕಾರಣಗಳನ್ನು ತಿಳಿಸಿ ಫೂಟ್ ಪಲ್ಸ್ ಥೆರಪಿಯಿಂದ ಆಗುವ ಪ್ರಯೋಜನೆಗಳ ಬಗ್ಗೆ ತಿಳಿಸಿದರು.

ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮುತ್ತಪ್ಪ ಪೂಜಾರಿ ನೆಯ್ಯಲ್ಗ ಮಾತನಾಡಿ, ವಯಸ್ಸಾದಂತೆ ಆರೋಗ್ಯದಲ್ಲಿ ಏರುಪೇರು ಆಗುವುದು ಸಹಜ. ಜನ ಸಾಮಾನ್ಯರಿಗೆ ನೆರವಾಗುವ ನಿಟ್ಟಿನಲ್ಲಿ ಗ್ರಾಮ ಪಂಚಾಯತ್ ಹಾಗೂ ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಆಶ್ರಯದಲ್ಲಿ ಡಿ.28 ರಿಂದ ಜ.11 ರ ತನಕ ಉಚಿತ ಫೂಟ್ ಪಲ್ಸ್ ಥೆರಲಿ ಶಿಬಿರ ಆಯೋಜಿಸಲಾಗಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಫೂಟ್ ಥೆರಪಿ ಯಂತ್ರಕ್ಕೆ ಸುಮಾರು 18,500ರೂ.,ಇದೆ. ಈ ಯಂತ್ರ ಖರೀದಿಗೆ ಸಂಘದಿಂದ ಸಾಲ ಸೌಲಭ್ಯ ನೀಡುವ ಬಗ್ಗೆ ಆಡಳಿತ ಮಂಡಳಿ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದರು.

ಆಲಂಕಾರು ಗ್ರಾ.ಪಂ.ಪಿಡಿಒ ಜಗನ್ನಾಥ ಶೆಟ್ಟಿ ಶುಭಹಾರೈಸಿದರು. ಅಧ್ಯಕ್ಷ ಸದಾನಂದ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ರಮೇಶ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ನಿರ್ದೇಶಕ ಚಂದ್ರಶೇಖರ ಆಲಂಕಾರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಂಪಾನಿಯೋ ನೆಮ್ಮದಿ ವೆಲ್‌ನೆಸ್ ಸೆಂಟರ್‌ನ ಕೆ.ಪ್ರಭಾಕರ್ ಸಾಲ್ಯಾನ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಆಲಂಕಾರು ಮೂ.ಸೇ.ಸ.ಸಂಘದ ನಿರ್ದೇಶಕ ಸೇಸಪ್ಪ ಪೂಜಾರಿ ವಂದಿಸಿದರು. ಸ್ವಾತಿ ಪ್ರಾರ್ಥಿಸಿದರು. ವೆಲ್‌ನೆಸ್ ಸೆಂಟರ್‌ನ ಸಿಬ್ಬಂದಿ ಸಂಧ್ಯಾ ಸಹಕರಿಸಿದರು.

 ಆರೋಗ್ಯದಲ್ಲಿ ಸುಧಾರಣೆ:
ಕಳೆದ 10 ದಿನದಿಂದ ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರದ ಪ್ರಯೋಜನ ಪಡೆದುಕೊಂಡಿರುವ ಸುಭಾನು ರೈ, ಗೋಪಾಲಕೃಷ್ಣ ರೈ ಮನವಳಿಕೆ, ಫರಿದಾ, ಸುಮಲತಾ, ನಿವೃತ್ತ ಮುಖ್ಯಶಿಕ್ಷಕ ನಾಗಪ್ಪ ಗೌಡ ಮರುವಂತಿಲ, ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ನಿರ್ದೇಶಕಿ ಗಂಗಾರತ್ನ ವಸಂತ್‌ರವರು ಅನಿಸಿಕೆ ವ್ಯಕ್ತಪಡಿಸಿ, 10 ದಿನ ಫೂಟ್ ಪಲ್ಸ್ ಥೆರಪಿ ಚಿಕಿತ್ಸೆ ಪಡೆದುಕೊಂಡ ಬಳಿಕ ಆರೋಗ್ಯದಲ್ಲಿ ಬಹಳಷ್ಟು ಸುಧಾರಣೆಯಾಗಿದೆ ಎಂದರು.

LEAVE A REPLY

Please enter your comment!
Please enter your name here