ಪುತ್ತೂರು: ಗ್ರಾಮ ಮತ್ತು ಪಟ್ಟಣಗಳಲ್ಲಿ ಹಲವಾರು ಪ್ರತಿಭಾನ್ವಿತ ವಿದ್ಯಾರ್ಥಿಗಳು ನಮ್ಮ ನಡುವೆ ಇದ್ದಾರೆ, ಅವರ ಸಾಮರ್ಥ್ಯ, ಆಸಕ್ತಿ ಮತ್ತು ಕನಸನ್ನು ಅರಿತು ಅವರಿಗೆ ಸರಿಯಾದ ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡಿ ಗುರಿ ತಲುಪಿಸುವ ಗುರುವಿನ ಅಗತ್ಯವಿತ್ತು. ಅದನ್ನು ಪುತ್ತೂರು ಕಮ್ಯೂನಿಟಿ ಸೆಂಟರ್ ಪರಿಣಾಮಕಾರಿಯಾಗಿ ಮಾಡಿದೆ ಎಂದು ಅನಿವಾಸಿ ಉದ್ಯಮಿ ಫಾರೂಕ್ ಪೊರ್ಟ್ ಫೊಲಿಯೋ ಅವರು ಹೇಳಿದರು.
ಪುತ್ತೂರು ಕಮ್ಯೂನಿಟಿ ಸೆಂಟರ್ನ ಯೋಜನೆಗಳ ಸಾಕ್ಷ್ಯಚಿತ್ರ ಆಂದೋಲನವನ್ನು ಪುತ್ತೂರಿನ ಯುವ ಉದ್ಯಮಿಗಳ ಜೊತೆ ಸೇರಿ ಬಿಡುಗಡೆ ಮಾಡಿದ ಅವರು ಮಾತನಾಡಿ ತಳಮಟ್ಟದಲ್ಲಿ ದುಡಿಯುವವರಲ್ಲಿ ವೈಜ್ಞಾನಿಕ ಮತ್ತು ದೂರದೃಷ್ಠಿಯ ಚಿಂತನೆಯ ಜೊತೆ ಕಾಳಜಿಯೂ ಬೇಕು, ಆರ್ಥಿಕ ಸಹಕಾರ ಅದನ್ನು ಪೊಷಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಹಾಗಾದರೆ ಸಮನ್ವಯ ಕೂಡುವಿಕೆಯಿಂದ ಅತ್ಯುತ್ತಮ ಫಲಿತಾಂಶ ಸಾಧ್ಯ ಎಂದರು. ಆಂದೋಲನ ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಿದ ಅನಿವಾಸಿ ಉದ್ಯಮಿ ಅಶ್ರಫ್ ಷಾ ಮಾಂತೂರುರವರು ಮಾತನಾಡಿ ನಮ್ಮ ಊರಿನ ಈ ಯೋಜನೆ ಈಗ ಎಲ್ಲರೂ ಮಾದರಿಯಾಗಿಸುತ್ತಿರುವುದು ತಿಳಿದು ಸಂತೋಷವಾಗಿದೆ ಎಂದರು.
ಅನಿವಾಸಿ ಉದ್ಯಮಿ ಪೈರೋಝ್ ಪರ್ಲಡ್ಕ ಮಾತನಾಡಿ ಆರಂಭದಿಂದಲೂ ಇದೊಂದು ಮಹತ್ವಾಕಾಂಕ್ಷೆಯ ಪ್ರಯತ್ನ ಎಂದು ತಿಳಿದಿದ್ದೆ. ಇಂದು ಸಾಕ್ಷ್ಯಚಿತ್ರ ನೋಡಿದ ನಂತರ ಇದು ಸಮುದಾಯದ ಅಭಿವೃದ್ದಿಗೆ ಇರುವ ಅತ್ಯುತ್ತಮ ಪದ್ದತಿಯೆಂದು ಅರ್ಥವಾಗಿದೆ. ಸಾವಿರಾರು ಮಕ್ಕಳೊಂದಿಗೆ ಸಂವಹನ ಮಾಡಿ ಅವರ ಗುರಿ ತಲುಪಿಸಲು ದುಡಿಯುವುದು ಸಣ್ಣ ಸಂಗತಿಯಲ್ಲ. ಕಮ್ಯೂನಿಟಿ ಸೆಂಟರ್ ವ್ಯವಸ್ಥಿತವಾದ ಪ್ರಗತಿಗೆ ಮಾದರಿ ಪದ್ದತಿ ನಿರ್ಮಿಸಿದೆ. ಇದು ಎಲ್ಲೆಡೆ ಅನ್ವಯಿಸಬೇಕು ಎಂದರು.
ಅನಿವಾಸಿ ಉದ್ಯಮಿ ಮಹಮ್ಮದ್ ಹಾರಿಸ್ ಅರಂಡ ಮಾತನಾಡಿ, ದತ್ತಾಂಶ ಮತ್ತು ಪ್ರಗತಿಯ ವರದಿ ಅಧಿಕೃತ ಆಗಿರಬೇಕು. ದಾಖಲೆಗಳು ಮತ್ತು ನೀತಿಗಳು ಇಲ್ಲದ ಯಾವುದೇ ಸಂಘ ಸಂಸ್ಥೆಗಳನ್ನು ನಾನು ಒಪ್ಪಿಕೊಳ್ಳುವುದಿಲ್ಲ. ಸಮುದಾಯದ ಬೇಡಿಕೆ ಮತ್ತು ಅಗತ್ಯತೆ ಕುರಿತು ವೈಜ್ಞಾನಿಕ ಅಧ್ಯಯನ ನಡೆಯಬೇಕು. ಅದಕ್ಕಾಗಿ ಕಮ್ಯೂನಿಟಿ ಸೆಂಟರ್ ಬುದ್ದಿಜೀವಿಗಳ-ಉಲೆಮಾಗಳ-ಚಿಂತಕರ ಮತ್ತು ವೃತ್ತಿಪರರ ಆಲೋಚನೆ ಸಂಗ್ರಹಿಸಿ ಸಮುದಾಯದ ಮುಂದಿಡುವ ಕೆಲಸ ಮಾಡಿದರೆ ನಾವೆಲ್ಲರೂ ಜೊತೆ ಇರುತ್ತೇವೆ ಎಂದರು.
ಅನಿವಾಸಿ ಉದ್ಯಮಿ ತಾಹಿರ್ ಸಾಲ್ಮರ ಮಾತನಾಡಿ ಬಹುದಿನಗಳ ಕನಸು ನನಸಾಗಿದೆ. ನಮ್ಮ ಊರಿನ ಎನ್.ಆರ್.ಐ ಉದ್ಯಮಿ, ಹಲವು ಸಂಘ ಸಂಸ್ಥೆಗಳ ಪೊಷಕರಾಗಿರುವ ಅಮ್ಜದ್ ಖಾನ್ ಪೊಳ್ಯರ ಸಾರಥ್ಯದಲ್ಲಿ, ಹಲವು ದೂರದೃಷ್ಠಿಯ ವ್ಯಕ್ತಿತ್ವ ಇರುವ ತಂಡದ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಈ ಸೆಂಟರ್ನಲ್ಲಿ ನಾವೆಲ್ಲರೂ ಸಹಯೋಗದಿಂದ ದುಡಿದು ದೇಶಕ್ಕೆ ಕೊಡುಗೆ ಕೊಡುವ ಸಮುದಾಯವನ್ನು ಸೃಷ್ಠಿಸಬೇಕು ಎಂದರು.
ಮೂಡಬಿದ್ರೆ ಅಳ್ವಾಸನಲ್ಲಿ ನಡೆದ ಸ್ಕೌಟ್ಸ್ ಎಂಡ್ ಗೈಡ್ಸ್ನಲ್ಲಿ ಅತ್ಯುತ್ತಮ ನಿರ್ವಹಣೆ ಮಾಡಿದ್ದ ಅದ್ದು ಪಡೀಲ್ರವರ ಪುತ್ರ ರಾಮಕೃಷ್ಣ ಸ್ಕೂಲ್ನ ವಿದ್ಯಾರ್ಥಿ ಮಹಮ್ಮದ್ ಅನ್ಸಾರ್ರವರನ್ನು ಇತ್ತೀಚೆಗೆ ಸನ್ಮಾನಿಸಿ ಗೌರವಿಸಲಾಯಿತು.
ಉದ್ಯಮಿಗಳಾದ ಮಹಮ್ಮದ್ ಕುಕ್ಕುವಳ್ಳಿ, ಅಶ್ರಫ್ ಮುಕ್ವೆ, ನಿಝಾಮ್ ಅರಂಡ, ಅಶ್ರಫ್ ಗೋಳಿಕಟ್ಟೆ, ಮಹಮ್ಮದ್ ಕಲಂದರ್, ಸಿರಾಜುದ್ದೀನ್ ಪರ್ಲಡ್ಕ, ತಾಸಿರ್, ವಕೀಲರಾದ ಶಾಕೀರ್ ಹಾಜಿ, ಇಸಾಕ್ ಕಡಬ, ರಿಯಾಝ್ ಪರ್ಲಡ್ಕ, ಹರ್ಷದ್ ದರ್ಬೆ, ಕಮ್ಯೂನಿಟಿ ರಿಸರ್ಚ್ ಎಂಡ್ ಡೆವಲಪ್ಪ್ ಮೆಂಟ್ ಫೌಂಡೇಶನ್ ಉಪಾಧ್ಯಕ್ಷ ಅಬ್ದುಲ್ಲಾ ಶೇಕ್, ಟ್ರಸ್ಟಿಗಳಾದ ಸತ್ತಾರ್ ವಲ್ತಡ್ಕ, ಮುನೀರ್ ವಿಟ್ಲ, ನಝೀರ್ ಮುಂತಾದ ಗಣ್ಯರು ಭಾಗವಹಿಸಿದ್ದರು. ಸೆಂಟರಿನ ಪ್ರಧಾನ ಕಾರ್ಯದರ್ಶಿ ಹನೀಫ್ ಪುತ್ತೂರು ಪ್ರಾಸ್ತಾವಿಕ ಮಾತನಾಡಿದರು, ಕೋಶಾಧಿಕಾರಿ ಇಮ್ತಿಯಾಝ್ ಪಾರ್ಲೆ ಕಾರ್ಯಕ್ರಮ ನಿರ್ವಹಿಸಿದರು.