ಪುತ್ತೂರು:5 ವರ್ಷಗಳ ಹಿಂದೆ ಉಪ್ಪಿನಂಗಡಿಯಲ್ಲಿ ನಡೆದ ಬೈಕ್ಗಳೆರಡರ ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ತ್ರಿಬಲ್ ರೈಡ್ ಬೈಕ್ ಸವಾರ ಆರೋಪಿ ಉಪ್ಪಿನಂಗಡಿ ರಾಮನಗರ ನಿವಾಸಿ ಮಹಮ್ಮದ್ ಶೌಪಾನ್ ಅವರಿಗೆ ಪುತ್ತೂರು ನ್ಯಾಯಾಲಯ ಜೈಲು ಶಿಕ್ಷೆ ತೀರ್ಪು ನೀಡಿದೆ.
2017ರ ಜ.2ರಂದು ರಾತ್ರಿ ಉಪ್ಪಿನಂಗಡಿಯ ಪದ್ಮವಿದ್ಯಾ ಪೆಟ್ರೋಲ್ ಪಂಪ್ ಬಳಿ ಉಪ್ಪಿನಂಗಡಿ ರಾಮನಗರ ನಿವಾಸಿ ಮಹಮ್ಮದ್ ಶೌಪನ್ ಎಂಬವರು ಮಹಮ್ಮದ್ ಅಜೀಜ್, ಮಹಮ್ಮದ್ ಇರ್ಫಾನ್ ಎಂಬವರನ್ನು ಕುಳ್ಳಿರಿಸಿಕೊಂಡು ತ್ರಿಬಲ್ ರೈಡ್ ಮಾಡಿಕೊಂಡು ಬೈಕ್(ಕೆ.ಎ21ಯು 4920)ರಲ್ಲಿ ಸವಾರಿ ಮಾಡುತ್ತಿದ್ದ ವೇಳೆ ವಿರುದ್ಧ ದಿಕ್ಕಿನಿಂದ ಉರುವಾಲು ಗ್ರಾಮದ ರಂಜಿತ್ ಎಂಬವರು ಚಲಾಯಿಸುತ್ತಿದ್ದ ಬೈಕ್(ಕೆ.ಎ 21 ಡಬ್ಲೂ 3108)ನಡುವೆ ಡಿಕ್ಕಿ ಸಂಭವಿಸಿತ್ತು. ಡಿಕ್ಕಿಯ ರಭಸಕ್ಕೆ ಮಹಮ್ಮದ್ ಶೌಪಾನ್ ಎಂಬವರು ಚಲಾಯಿಸುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ಮುಂದಕ್ಕೆ ಚಲಿಸಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿತ್ತು.ಬೈಕ್ನಲ್ಲಿದ್ದ ನೆಕ್ಕಿಲಾಡಿ ಗ್ರಾಮದ ಯು.ಟಿ.ಕಂಪೌಂಡ್ನ ಯು.ಟಿ.ಹಾರೂನ್ ರಶೀದ್ ಎಂಬವರ ಪುತ್ರ ಮಹಮ್ಮದ್ ಅಜೀಜ್(20ವ)ರವರು ಸ್ಥಳದಲ್ಲೇ ಮೃತಪಟ್ಟಿದ್ದರು.ಬೈಕ್ನಲ್ಲಿದ್ದ ಇತರರು ಗಾಯಗೊಂಡಿದ್ದರು.ಇನ್ನೊಂದು ಬೈಕ್ ಸವಾರ ರಂಜಿತ್ರವರು ನೀಡಿದ ದೂರಿನ ಮೇರೆಗೆ ಪುತ್ತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆಗಿನ ಇನ್ಸ್ಪೆಕ್ಟರ್ ಮಹೇಶ್ಪ್ರಸಾದ್ ಅವರು ತನಿಖಾಧಿಕಾರಿಯಾಗಿ ಮತ್ತು ಹೆಡ್ಕಾನ್ಸ್ಟೇಬಲ್ ಸತೀಶ್ ಅವರು ಸಹಾಯಕ ತನಿಖಾಧಿಕಾರಿಯಾಗಿದ್ದು, ಆರೋಪಿ ತ್ರಿಬೈಲ್ ರೈಡ್ ಸವಾರ ಮಹಮ್ಮದ್ ಶೌಪಾನ್ ಅವರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.ವಿಚಾರಣೆ ನಡೆಸಿದ ಪುತ್ತೂರು ಜೆ.ಎಮ್.ಎಫ್ಸಿ ನ್ಯಾಯಾಲಯದ ನ್ಯಾಯಾಧೀಶ ಗೌಡ ಆರ್.ಪಿ ಅವರು ಆರೋಪಿ ಮಹಮ್ಮದ್ ಶೌಪಾನ್ ಅವರಿಗೆ 1 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದ್ದಾರೆ.ಪ್ರಾಸಿಕ್ಯೂಷನ್ ಪರ ಸಹಾಯಕ ಸರಕಾರಿ ಅಭಿಯೋಜಕಿ ಕವಿತಾ ವಾದಿಸಿದ್ದರು.