ಪಾಣಾಜೆ: ಇಲ್ಲಿನ ಗುರಿಕ್ಕೇಲು ಅಂಗನವಾಡಿಯಲ್ಲಿ ಬಾಲಮೇಳ ಕಾರ್ಯಕ್ರಮವು ಬಾಲವಿಕಾಸ ಸಮಿತಿ ಅಧ್ಯಕ್ಷೆ ಮಮತಾ ರವರ ಅಧ್ಯಕ್ಷತೆಯಲ್ಲಿ ಜ. 7 ರಂದು ಜರುಗಿತು.

ಪಾಣಾಜೆ ಪಂಚಾಯತ್ ಅಧ್ಯಕ್ಷೆ ಭಾರತಿ ವೆಂಕಟರಮಣ ಭಟ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ‘ಮಕ್ಕಳು ದೇವರ ಸಮಾನ ಅವರ ಸಂಭ್ರಮ ನೋಡುವುದೇ ಖುಷಿ’ ಎಂದರು. ಪಂಚಾಯತ್ ಸದಸ್ಯೆ ವಿಮಲಾರವರು ಮಾತನಾಡಿ ‘ನಮ್ಮ ಒತ್ತಡದ ಜೀವನದ ನಡುವೆಯೂ ಸ್ವಲ್ಪ ಹೊತ್ತು ಮಕ್ಕಳ ಕಲರವ ದೊಂದಿಗೆ ಕಳೆಯಲು ಅವಕಾಶ ಸಿಕ್ಕಿರುವುದು ಖುಷಿ ನೀಡಿದೆ’ ಎಂದರು. ಆರೋಗ್ಯ ಸಹಾಯಕಿ ಜ್ಯೋತಿ ಅವರು ಮಾತನಾಡಿ ‘ಆರೋಗ್ಯಕ್ಕೆ ಸಂಬಂಧಪಟ್ಟಂತೆ ಈ ಅಂಗನವಾಡಿಯ ಕಾರ್ಯಕರ್ತೆ ಯಾವಾಗಲೂ ನಮ್ಮೊಂದಿಗೆ ಉತ್ಸಾಹದಿಂದ ಸಹಕರಿಸುತ್ತಾರೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಮತಾ ರವರು ಮಾತನಾಡುತ್ತಾ ಈ ಕಾರ್ಯಕ್ರಮದ ಯಶಸ್ಸಿಗೆ ಇಲ್ಲಿರುವ ಸ್ತ್ರೀಶಕ್ತಿ ಗುಂಪು, ಪೋಷಕರು ಹಾಗೂ ದಾನಿಗಳು ಕಾರಣ ಅವರಿಗೆಲ್ಲರಿಗೂ ಈ ಮೂಲಕ ಅಭಿನಂದನೆಯನ್ನು ಸಲ್ಲಿಸುತ್ತೇನೆ ಎಂದರು. ಈ ಸಂದರ್ಭದಲ್ಲಿ ಅಂಗನವಾಡಿಯ ಮೈದಾನವನ್ನು ಸಮತಟ್ಟು ಮಾಡಿಕೊಟ್ಟ ಸತ್ಯನಾರಾಯಣ ಶರ್ಮ ಅವರನ್ನು ನೆನಪಿಸಿಕೊಳ್ಳಲಾಯಿತು.
ವೇದಿಕೆಯಲ್ಲಿ ಪಾಣಾಜೆ ಗ್ರಾ.ಪಂ. ಸದಸ್ಯ ಕೃಷ್ಣಪ್ಪ ಪೂಜಾರಿ ಉಪಸ್ಥಿತರಿದ್ದರು.
ನಂತರ ಅಂಗನವಾಡಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಅಂಗನವಾಡಿ ಕಾರ್ಯಕರ್ತೆ ಸುಮಿತ್ರ ಶೆಟ್ಟಿ ಅವರು ವಂದಿಸಿದರು. ಕಕ್ಕೂರು ಅಂಗನವಾಡಿಯ ಕಾರ್ಯಕರ್ತೆ ಶ್ಯಾಮಲಾ ಮಾಧವ ಪೂಜಾರಿ ಸ್ವಾಗತಿಸಿ ನಿರೂಪಿಸಿದರು.
ಅಂಗನವಾಡಿ ಸಹಾಯಕಿ ಶೀಲಾ ಸಹಕರಿಸಿದರು.