ಪುತ್ತೂರು:ಪಡ್ನೂರು ಗ್ರಾಮದ ಕುಂಜಾರು ಮದಗ ಶ್ರೀ ಜನಾರ್ದನ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ ಹಾಗೂ ಮನ್ಮಹಾರಥೋತ್ಸವವು ಜ.9ರಂದು ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು.
ಜಾತ್ರೋತ್ಸವದ ಅಂಗವಾಗಿ ಜ.8ರಂದು ಸಂಜೆ ಭಜನೆ, ಚೆಂಡೆ ಸೇವೆ, ಮಹಾಪೂಜೆ, ದೇವರ ಬಲಿ ಹೊರಟು ಉತ್ಸವ ಹಾಗೂ ಕಟ್ಟೆಪೂಜೆ ನಡೆಯಿತು. ಜ.9ರಂದು ಬೆಳಿಗ್ಗೆ ಮಹಾಗಣಪತಿ ಹೋಮ, ದೇವರ ಬಲಿ ಹೊರಟು ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ನವಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಚೆಂಡೆ ಸೇವೆ, ಶ್ರೀ ದೇವರ ಬಲಿ ಹೊರಟು ಉತ್ಸವ ಕಟ್ಟೆಪೂಜೆ, ಶ್ರೀ ಮನ್ಮಹಾರಥೋತ್ಸವ ನಡೆದ ಬಳಿಕ ಕ್ಷೇತ್ರದ ದೈವಗಳ ಭಂಡಾರ ತೆಗೆದು ಹುಲಿಭೂತ, ಪಂಜುರ್ಲಿ ಹಾಗೂ ಗುಳಿಗ ದೈವಗಳ ನೇಮೋತ್ಸವ ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮಗಳು: ಜಾತ್ರೋತ್ಸವ ಸಂದರ್ಭದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜ.8ರಂದು ಸಂಜೆ ಸ್ಥಳೀಯ ಗ್ರಾಮಸ್ಥರಿಂದ ವಿವಿಧ ವಿನೋದಾವಳಿಗಳು, ಜ.9ರಂದು ರಾತ್ರಿ ಪುತ್ತೂರು ಕಲಾವಿದರು ಅರ್ಪಿಸುವ ‘ರಡ್ಡೆಟ್ ಒಂಜಿ’ ಎಂಬ ಸಾಂಸಾರಿಕ ನಾಟಕ ನಡೆಯಿತು.
ಶಾಸಕ ಸಂಜೀವ ಮಠಂದೂರು, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳೀಕೃಷ್ಣ ಹಸಂತಡ್ಕ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹಾರಕರೆ ವೆಂಕಟ್ರಮಣ ಭಟ್, ಸದಸ್ಯರಾದ ಬಾಲಕೃಷ್ಣ ಜೋಯಿಷ, ಚೈತ್ರನಾರಾಯಣ ಸೇಡಿಯಾಪು, ಯಶೋಧರ ಕುಂಜಾರು, ಮಧುಸೂದನ ಪಡ್ಡಾಯೂರು, ಲೋಕೇಶ್ ಮುಂಡಾಜೆ, ಜಯಂತಿ ಪಳ್ಳ, ಪುಷ್ಪಾ ದೇಂತಡ್ಕ ಸೇರಿದಂತೆ ಸಾವಿರಾರು ಮಂದಿ ಭಕ್ತಾದಿಗಳು ಜಾತ್ರೋತ್ಸವದಲ್ಲಿ ಪಾಲ್ಗೊಂಡು ಪುಣೀತರಾದರು.
ಪಡ್ನೂರು ಗೌಡ ಸಮಾಜದಿಂದ ಮಜ್ಜಿಗೆ ವಿತರಣೆ: ಜಾತ್ರೋತ್ಸವದಲ್ಲಿ ಪ್ರತಿವರ್ಷ ಗೌಡ ಸಮಾಜ ಪಡ್ನೂರು ಗ್ರಾಮ ಸಮಿತಿಯಿಂದ ಮಜ್ಜಿಗೆ ವಿತರಿಸಲಾಗುತ್ತಿದ್ದು 34ನೇ ವರ್ಷದ ಮಜ್ಜಿಗೆ ಹಾಗೂ ಪಾನಕ ವಿತರಣೆಗೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹಾರಕರೆ ವೆಂಕಟ್ರಮಣ ಭಟ್ ಚಾಲನೆ ನೀಡಿದರು. ಗೌಡ ಸಮಾಜದ ಅಧ್ಯಕ್ಷ ಶಿವರಾಮ ಮತಾವು, ಸಂಕಪ್ಪ ಗೌಡ, ಆನಂದ ಗೌಡ ಮೊದಲಾದವರು ಉಪಸ್ಥಿತರಿದ್ದರು.