ನೆಲ್ಯಾಡಿ ಮೆಸ್ಕಾಂ ಉಪಕೇಂದ್ರ ಮೇಲ್ದರ್ಜೆಗೆ

0

₹3.79 ಕೋಟಿ ವೆಚ್ಚದ ಕಾಮಗಾರಿಗೆ ಸಚಿವ ಎಸ್.ಅಂಗಾರ ಚಾಲನೆ

ಲೋವೋಲ್ಟೇಜ್ ಸಮಸ್ಯೆಗೆ ಪರಿಹಾರ, ಗುಣಮಟ್ಟದ ವಿದ್ಯುತ್ ಪೂರೈಕೆಗೆ ಆದ್ಯತೆ: ಎಸ್.ಅಂಗಾರ

ನೆಲ್ಯಾಡಿ: ಮೆಸ್ಕಾಂ ಕಡಬ ಉಪ ವಿಭಾಗದ ನೆಲ್ಯಾಡಿ ಶಾಖಾ ವ್ಯಾಪ್ತಿಯ ನೆಲ್ಯಾಡಿ 33/11 ಕೆವಿ ಉಪ ಕೇಂದ್ರದ 10 ಎಂವಿಎ ಸಾಮರ್ಥ್ಯವನ್ನು 17.5 ಎಂವಿಎ ಸಾಮರ್ಥ್ಯಕ್ಕೆ ಉನ್ನತ್ತೀಕರಣ ಮತ್ತು ಪ್ರಸ್ತುತ ಇರುವ ನಾಲ್ಕು 11 ಕೆವಿ ಫೀಡರ್‌ಗಳಿಗೆ ಹೆಚ್ಚುವರಿಯಾಗಿ ಹೊಸ ಮೂರು 11 ಕೆವಿ ಫೀಡರ್‌ಗಳ ಸ್ಥಾಪಿಸಿ ಒಟ್ಟು ಏಳು 11ಕೆವಿ ಫೀಡರ್‌ಗಳಾದ ಉನ್ನತ್ತೀಕರಣದ ಸುಮಾರು 3.79 ಕೋಟಿ ರೂ. ವೆಚ್ಚದ ಕಾಮಗಾರಿಗೆ ಜ.9ರಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಅವರು ಚಾಲನೆ ನೀಡಿದರು.

ನೆಲ್ಯಾಡಿ ಗ್ರಾಮದ ಮಾದೇರಿಯಲ್ಲಿರುವ ನೆಲ್ಯಾಡಿ ಉಪಕೇಂದ್ರದಲ್ಲಿ ಗಣಪತಿ ಪೂಜೆ ಸಲ್ಲಿಸಿ ಕಾಮಗಾರಿಗೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಎಸ್.ಅಂಗಾರ ಅವರು, ಜನರ ಬೇಡಿಕೆಗಳಿಗೆ ಒತ್ತು ನೀಡಿ ಆದ್ಯತೆ ನೆಲೆಯಲ್ಲಿ ಪೂರೈಸಲಾಗುತ್ತಿದೆ. ಲೋವೋಲ್ಟೇಜ್ ಸಮಸ್ಯೆ ಹಾಗೂ ಗುಣಮಟ್ಟದ ವಿದ್ಯುತ್ ಪೂರೈಕೆ ನಿಟ್ಟಿನಲ್ಲಿ ಮಾದೇರಿಯಲ್ಲಿರುವ ನೆಲ್ಯಾಡಿ ಶಾಖಾ ವ್ಯಾಪ್ತಿಯ ವಿದ್ಯುತ್ ಉಪಕೇಂದ್ರವನ್ನು ಮೇಲ್ದರ್ಜೆಗೇರಿಸಲಾಗಿದೆ. ಇಲ್ಲಿ ಈ ತನಕ ನಾಲ್ಕು ಪೀಡರ್‌ಗಳಿದ್ದು ಇದೀಗ ಮೂರು ಹೆಚ್ಚುವರಿ ಫೀಡರ್‌ಗಳ ಅಳವಡಿಕೆ ಆಗಲಿದೆ. ಇದರಿಂದ ಈ ಭಾಗದ ವಿದ್ಯುತ್ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದರು.

ಮೆಸ್ಕಾಂ ಕಡಬ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸಜಿಕುಮಾರ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ, ಬಿಜೆಪಿ ನೆಲ್ಯಾಡಿ ಮಹಾಶಕ್ತಿಕೇಂದ್ರದ ಅಧ್ಯಕ್ಷರೂ ಆಗಿರುವ ಭಾಸ್ಕರ ಎಸ್.ಗೌಡ ಇಚ್ಲಂಪಾಡಿ, ಜಿ.ಪಂ.ಮಾಜಿ ಸದಸ್ಯ ಬಾಲಕೃಷ್ಣ ಬಾಣಜಾಲು, ಗೋಳಿತ್ತೊಟ್ಟು ಗ್ರಾ.ಪಂ.ಅಧ್ಯಕ್ಷ ಜನಾರ್ದನ ಪಟೇರಿ, ಮೆಸ್ಕಾಂ ನೆಲ್ಯಾಡಿ ಶಾಖಾಽಕಾರಿ ರಮೇಶ್, ಆಲಂಕಾರು ಶಾಖಾಧಿಕಾರಿ ಪ್ರೇಮ್‌ಸಿಂಗ್, ನೆಲ್ಯಾಡಿ ಗ್ರಾ.ಪಂ.ಉಪಾಧ್ಯಕ್ಷ ಅಬ್ದುಲ್ ಜಬ್ಬಾರ್, ಸದಸ್ಯರಾದ ರವಿಪ್ರಸಾದ್ ಶೆಟ್ಟಿ, ಆನಂದ ಪಿಲವೂರು, ಜಯಾನಂದ ಬಂಟ್ರಿಯಾಲ್, ನೆಲ್ಯಾಡಿ ವರ್ತಕ ಸಂಘದ ಅಧ್ಯಕ್ಷ ರಫೀಕ್ ಸೀಗಲ್, ವಿದ್ಯುತ್ ಬಳಕೆದಾರರ ಹಿತರಕ್ಷಣಾ ವೇದಿಕೆಯ ಕಾರ್ಯದರ್ಶಿ ರವೀಂದ್ರ ಟಿ. ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

14 ಗ್ರಾಮಗಳ ಗ್ರಾಹಕರಿಗೆ ಪ್ರಯೋಜನ

ನೆಲ್ಯಾಡಿ ಮೆಸ್ಕಾಂ ಉಪಕೇಂದ್ರ ಮೇಲ್ದರ್ಜೆಗೇರಿರುವುದರಿಂದ ನೆಲ್ಯಾಡಿ, ಕೌಕ್ರಾಡಿ, ಇಚಿಲಂಪಾಡಿ, ಬಲ್ಯ, ಪೆರಾಬೆ, ಕೊಣಾಲು, ಆಲಂತಾಯ, ಗೋಳಿತೊಟ್ಟು, ಶಿರಾಡಿ, ಹಳೆನೇರೆಂಕಿ, ಆಲಂಕಾರು ಗ್ರಾಮಗಳ ಹಾಗೂ ನೆರೆಯ ಕೊಕ್ಕಡ, ಶಿಬಾಜೆ, ರೆಖ್ಯ ಸೇರಿದಂತೆ ಒಟ್ಟು 14 ಗ್ರಾಮಗಳ ಗ್ರಾಹಕರಿಗೆ ಪ್ರಾಯೋಜನ ಸಿಗಲಿದೆ.

LEAVE A REPLY

Please enter your comment!
Please enter your name here