ನೆಲ್ಯಾಡಿ: ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ನೆಲ್ಯಾಡಿ-ಕೌಕ್ರಾಡಿ ಇಲ್ಲಿ 45ನೇ ವರ್ಷದ ಮಕರ ಜ್ಯೋತಿ ಉತ್ಸವ ಹಾಗೂ ಭಜನಾ ಮಹೋತ್ಸವದ ಸಮಾರೋಪ ಸಮಾರಂಭ ಜ.14ರಂದು ನಡೆಯಲಿದೆ ಎಂದು ಆಡಳಿತ ಸಮಿತಿ ಅಧ್ಯಕ್ಷ ಡಾ.ಸದಾನಂದ ಕುಂದರ್, ಕಾರ್ಯದರ್ಶಿ ಸುಧೀರ್ ಕುಮಾರ್ ಕೆ.ಎಸ್. ಹಾಗೂ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜ.14ರಂದು ಬೆಳಿಗ್ಗೆ ದೇವಸ್ಥಾನದ ಪ್ರಧಾನ ಅರ್ಚಕರಾದ ಸುರೇಶ್ ಮುಚ್ಚಿಂತಾಯರಿಂದ ಶ್ರೀ ಅಯ್ಯಪ್ಪ ಸ್ವಾಮಿ ದೇವರಿಗೆ ಉಷಾಪೂಜೆ ನಡೆಯಲಿದೆ. ನಂತರ ಶ್ರೀಧರ ನೂಜಿನ್ನಾಯರ ನೇತೃತ್ವದಲ್ಲಿ ಮಕರ ಸಂಕ್ರಾಂತಿಯ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಬೆಳಿಗ್ಗೆ 7ರಿಂದ ಶ್ರೀ ಮಹಾಗಣಪತಿ ಹೋಮ, ಸೀಯಾಳಾಭಿಷೇಕ, ತುಪ್ಪಾಭಿಷೇಕ, ಅಶ್ವತ್ಥ ಕಟ್ಟೆಯಲ್ಲಿ ಅಶ್ವತ್ಥ ಪೂಜೆ, ಮಧ್ಯಾಹ್ನ ಮಹಾರಂಗಪೂಜೆ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6.30ರಿಂದ ನೀಲಾಂಜನ ದೀಪದರ್ಶನ ಮೆರವಣಿಗೆ, ದೀಪಾರಾಧನೆ, ಪುಷ್ಪಾಭಿಷೇಕ ನಡೆಯಲಿದೆ. ರಾತ್ರಿ 8 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಯಕ್ಷಗಾನ ಅರ್ಥದಾರಿ, ಸಾಹಿತಿ ರಾಧಾಕೃಷ್ಣ ಕಲ್ಚಾರು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಅತಿಥಿಗಳಾಗಿ ಯಕ್ಷಗಾನ ಸಂಘಟಕ ಭುಜಬಲಿ ಧರ್ಮಸ್ಥಳ, ಉದ್ಯಮಿ ಬಾಲಕೃಷ್ಣ ನೈಮಿಷ ಭಾಗವಹಿಸಲಿದ್ದಾರೆ. ರಾತ್ರಿ ಮಹಾಪೂಜೆ ನಡೆಯಲಿದೆ. ಜ.15ರಂದು ಬೆಳಿಗ್ಗೆ ಭಜನಾ ಮಂಗಳೋತ್ಸವ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮ:
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಜ.14ರಂದು ಮಧ್ಯಾಹ್ನ ವಿದುಷಿ ಸುರೇಖಾ ಹರೀಶ್ರವರ ಶಿಷ್ಯವೃಂದ ಉಕ್ಷಿಪ್ತ ನೃತ್ಯ ಕಲಾ ಶಾಲೆ ನೆಲ್ಯಾಡಿ-ಮಂಗಳೂರು ಇವರಿಂದ ಭರತನಾಟ್ಯ ನಡೆಯಲಿದೆ. ರಾತ್ರಿ ಹಿರಿಯಡ್ಕ ಶ್ರೀ ವೀರಭದ್ರಸ್ವಾಮಿ ದಶಾವತಾರ ಯಕ್ಷಗಾನ ಮಂಡಳಿಯವರಿಂದ ’ಮಹಿಮೆದ ಮಾಣಿಕ್ಯ ’ಯಕ್ಷಗಾನ ನಡೆಯಲಿದೆ.