ಇಚ್ಲಂಪಾಡಿ ಕರ್ತಡ್ಕದಲ್ಲಿ ಸಂಪರ್ಕ ಸೇತುವೆ ಉದ್ಘಾಟನೆ

0

ಜನಪರ ಯೋಜನೆಗಳಿಂದ ಗ್ರಾಮದ ಸಮಗ್ರ ಅಭಿವೃದ್ಧಿ; ಎಸ್. ಅಂಗಾರ

ನೆಲ್ಯಾಡಿ: ರಾಜ್ಯ, ಕೇಂದ್ರ ಸರಕಾರದ ಜನಪರ ಆಡಳಿತದಿಂದಾಗಿ ಸುಳ್ಯ ವಿಧಾನ ಸಭಾ ಕ್ಷೇತ್ರ ಸೇರಿದಂತೆ ಜಿಲ್ಲೆ, ರಾಜ್ಯ, ರಾಷ್ಟ್ರದ ಸಮಗ್ರ ಅಭಿವೃದ್ಧಿ ಕೆಲಸಗಳು ನಡೆಯುತ್ತಿದೆ. ಸರಕಾರಗಳು ಊರಿನ ಅಭಿವೃದ್ಧಿ ಜತೆಗೆ ಜನ ಸಾಮಾನ್ಯರಿಗೆ ಪ್ರಯೋಜನವಾಗುವಂತಹ ಯೋಜನೆಗಳನ್ನು ಜಾರಿಗೆ ತಂದಾಗ ಕೆಳ ಹಂತದಿಂದಲೇ ಸಮಗ್ರ ಅಭಿವೃದ್ಧಿ ಸಾಧ್ಯವಾಗಲಿದೆ. ಅದನ್ನು ಭಾರತೀಯ ಜನತಾ ಪಾರ್ಟಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮಾಡುತ್ತಿದೆ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಹೇಳಿದರು.

ಅವರು ಕಡಬ ತಾಲೂಕಿನ ಇಚ್ಲಂಪಾಡಿ ಗ್ರಾಮದ ಕೊರಮೇರು ಕರ್ತಡ್ಕ ಎಂಬಲ್ಲಿ ಲೋಕೋಪಯೋಗಿ ಇಲಾಖೆಯ ಗ್ರಾಮಬಂಧ ಸೇತು ಯೋಜನೆಯ 18 ಲಕ್ಷ ರೂ., ಅನುದಾನದಲ್ಲಿ ನಿರ್ಮಾಣಗೊಂಡ ಸಂಪರ್ಕ ಸೇತುವೆಯನ್ನು ಜ.9ರಂದು ಉದ್ಘಾಟಿಸಿ ಮಾತನಾಡಿದರು. ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಈಗಾಗಲೇ ಬೇಡಿಕೆಯ ಪ್ರಮುಖ ಸೇತುವೆಗಳು ನಿರ್ಮಾಣಗೊಂಡಿದ್ದು, ನಿರ್ಮಾಣ ಹಂತದಲ್ಲೂ ಇದೆ. ಜತೆಗೆ ರಸ್ತೆ ಅಭಿವೃದ್ಧಿ ಹಾಗೂ ಸ್ಥಳೀಯವಾಗಿ ಸಂಪರ್ಕ ಸೇತುವೆಗಳನ್ನೂ ಸರಕಾರದ ಅನುದಾನದಲ್ಲಿ ನಿರ್ಮಿಸಲು ಕ್ರಮಕೈಗೊಳ್ಳಲಾಗಿದೆ. ಈ ಮೂಲಕ ಜನತೆಯ ಬೇಡಿಕೆಗಳನ್ನು ಈಡೇರಿಸುವ ಕೆಲಸ ಮಾಡಲಾಗುತ್ತಿದೆ. ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಆಗಬೇಕಾದ ಕೆಲಸಗಳನ್ನು ಮುಂದೆಯೂ ನಿರಂತರವಾಗಿ ಮಾಡಲಾಗುತ್ತದೆ ಎಂದರು. ಭಾರತೀಯ ಜನತಾ ಪಾರ್ಟಿಯ ಪ್ರಮುಖರಾದ ಭಾಸ್ಕರ ಎಸ್.ಗೌಡ, ಬಾಲಕೃಷ್ಣ ಬಾಣಜಾಲು, ನೆಲ್ಯಾಡಿ ಗ್ರಾ.ಪಂ. ಸದಸ್ಯ ರವಿಪ್ರಸಾದ್ ಶೆಟ್ಟಿ, ಕೌಕ್ರಾಡಿ ಗ್ರಾ.ಪಂ. ಸದಸ್ಯರಾದ ವಿಶ್ವನಾಥ ಗೌಡ ಕೊರಮೇರು, ಸಂಧ್ಯಾ ಪಿ.ಆರ್. ಸೇರಿದಂತೆ ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಚಿವರಿಗೆ ಮನವಿ:

ಕಡಬ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75 ಹಾಗೂ ಉಡುಪಿ-ಕುಕ್ಕೆ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಸಂಪರ್ಕಿಸುವ ಕಾಯರ್ತಡ್ಕ-ಲಾವತ್ತಡ್ಕ ರಸ್ತೆ ತೀರಾ ಹದಗೆಟ್ಟಿದ್ದು, ಈ ರಸ್ತೆಯ ಅಭಿವೃದ್ಧಿಗೆ ಅನುದಾನ ಒದಗಿಸುವಂತೆ ಸ್ಥಳೀಯರು, ಗ್ರಾಮಸ್ಥರು ಸಚಿವ ಎಸ್.ಅಂಗಾರ ಅವರಿಗೆ ಈ ವೇಳೆ ಮನವಿ ಸಲ್ಲಿಸಿದರು.

LEAVE A REPLY

Please enter your comment!
Please enter your name here