ಜಗತ್ತಿಗೆ ಜ್ಞಾನದ ಬೆಳಕನ್ನು ಹರಿಸಿದ ಗುರುಗಳು ವಿವೇಕಾನಂದರು- ಆಂಟನಿ ಪ್ರಕಾಶ್
ಪುತ್ತೂರು: ಸ್ವಾಮಿ ವಿವೇಕಾನಂದರು ಎಲ್ಲರಿಗೂ ಸ್ಫೂರ್ತಿ, ದಾರಿ ದೀಪ. ಇವರ ಬದುಕಿನ ಮೌಲ್ಯ, ಸಂದೇಶಗಳು ಇಂದಿಗೂ ಪ್ರಸ್ತುತ. ಜಗತ್ತಿಗೆ ಜ್ಞಾನದ ಬೆಳಕನ್ನು ಹರಿಸಿದ ಗುರುಗಳು ವಿವೇಕಾನಂದರು ಎಂದು ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ಡಾ|ಆಂಟನಿ ಪ್ರಕಾಶ್ ಮೊಂತೇರೊರವರು ಹೇಳಿದರು.
ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ ಐಕ್ಯುಎಸಿ, ಎನ್.ಎಸ್.ಎಸ್, ಎನ್.ಸಿ.ಸಿ ಮತ್ತು ರೋವರ್ಸ್ ಆಂಡ್ ರೇಂಜರ್ಸ್ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಬೆಳ್ಳಿಹಬ್ಬದ ಸಭಾಂಗಣದಲ್ಲಿ ಜ.12 ರಂದು ರಾಷ್ಟ್ರೀಯ ಯುವ ದಿನದ ಅಂಗವಾಗಿ ಆಚರಿಸಲಿರುವ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸ್ವಾಮಿ ವಿವೇಕಾನಂದರ ವಿಚಾರಧಾರೆಗಳು ನಮ್ಮೆಲ್ಲರ ಜೀವನಕ್ಕೆ ಸ್ಫೂರ್ತಿ ತುಂಬುವಂತಹುದು ಆಗಿದೆ. ತನ್ನ ಜೀವನ, ಆದರ್ಶ, ಸಂದೇಶಗಳ ಮೂಲಕ ಎಲ್ಲರ ಹೃದಯ ಗೆದ್ದಿರುವ ವೀರ ಸನ್ಯಾಸಿ ವಿವೇಕಾನಂದರು ಆಗಿದ್ದಾರೆ. ಅದಕ್ಕಾಗಿ ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನವಾಗಿ ಆಚರಣೆ ಮಾಡಲಾಗುತ್ತಿದೆ ಎಂದ ಅವರು ವಿವೇಕಾನಂದರ ‘ಏಳಿ ಎದ್ದೇಳಿ… ಗುರಿ ಮುಟ್ಟುವ ತನಕ ನಿಲ್ಲದಿರಿ’. ಈ ಸಾಲುಗಳಲ್ಲಿಯೇ ಅದ್ಭುತ ಶಕ್ತಿ ಇದೆ. ಈ ಪದಗಳು ಕಿವಿಗೆ ಬೀಳುತ್ತಿದ್ದಂತೆಯೇ ದೇಹ ಮನಸ್ಸಿನಲ್ಲಿ ವಿದ್ಯುತ್ಸಂಚಾರವಾದಂತಾಗುತ್ತದೆ ಎಂದು ಅವರು ಹೇಳಿದರು.
ಅತಿಥಿಗಳಾಗಿ ಆಗಮಿಸಿದ ಫಿಲೋಮಿನಾ ಕಾಲೇಜಿನ ವ್ಯವಹಾರ ನಿರ್ವಹಣಾ ವಿಭಾಗದ ಉಪನ್ಯಾಸಕ ಪ್ರಶಾಂತ್ ರೈ ಮುಂಡಾಳಗುತ್ತುರವರು ‘ಯುವಜನಾಂಗದ ಪ್ರಗತಿಯಲ್ಲಿ ಸ್ವಾಮಿ ವಿವೇಕಾನಂದರ ವ್ಯಕ್ತಿತ್ವ ಮತ್ತು ಬೋಧನೆಗಳ ಅಗತ್ಯತೆ’ ಕುರಿತು ಮಾತನಾಡಿ, ನಮ್ಮ ದೇಶ ಕಂಡ ಅಪ್ರತಿಮ ಆಧ್ಯಾತ್ಮಿಕ ನಾಯಕ, ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು. ವಿಶ್ವವನ್ನೇ ಬೆರಗುಗೊಳಿಸಿದ ಮಹಾನ್ ಸಂತರಿವರು. ಅದ್ಭುತ ತತ್ವಜ್ಞಾನಿ, ಸಮಾಜ ಸುಧಾರಕ, ಮಹಾನ್ ದೇಶಭಕ್ತ ಮತ್ತು ಶ್ರೇಷ್ಠ ವಾಗ್ಮಿ. ವಿವೇಕಾನಂದರ ಮಾತುಗಳು ಇಂದಿಗೂ ಪ್ರಸ್ತುತ. ಇವರ ಮಾತುಗಳು ಎಲ್ಲರಿಗೂ ಸ್ಫೂರ್ತಿ. 1893ರಲ್ಲಿ ಚಿಕಾಗೋದಲ್ಲಿ ನಡೆದ ವರ್ಲ್ಡ್ಸ್ ಪಾರ್ಲಿಮೆಂಟ್ ಆಫ್ ರಿಲಿಜನ್ಸ್ನಲ್ಲಿ ಇವರು ಮಾಡಿದ್ದ ಭಾಷಣ ಇಂದಿಗೂ ಪ್ರಸಿದ್ಧ ಎಂದ ಅವರು ವೇದಾಂತ ಮತ್ತು ಯೋಗದ ಭಾರತೀಯ ತತ್ತ್ವ ಚಿಂತನೆಗಳನ್ನು ವಿಶ್ವ ಭೂಪಟದಲ್ಲಿ ರಾರಾಜಿಸುವಂತೆ ಮಾಡಿದವರಲ್ಲಿ ವಿವೇಕಾನಂದರು ಕೂಡಾ ಪ್ರಮುಖರಲ್ಲಿ ಒಬ್ಬರು. ತಮ್ಮ ಪ್ರಖರ ಭಾಷಣಗಳು ಮತ್ತು ಉಪನ್ಯಾಸಗಳ ಮೂಲಕ ಜನರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಜಾಗೃತಗೊಳಿಸಲು ವಿವೇಕಾನಂದರು ಪ್ರಯತ್ನಿಸಿದವರು ಎಂದು ಅವರು ಹೇಳಿದರು.
ಕಾಲೇಜಿನ ಎನ್.ಸಿ.ಸಿ ಅಧಿಕಾರಿ ಲೆಪ್ಟಿನೆಂಟ್ ಜೋನ್ಸನ್ ಡೇವಿಡ್ ಸಿಕ್ವೇರಾ, ಎನ್.ಎಸ್.ಎಸ್ ಸಂಯೋಜಕಿ ಪುಷ್ಪಾ ಎನ್, ರೋವರ್ಸ್ ಆಂಡ್ ರೇಂಜರ್ಸ್ ಸಂಯೋಜಕ ಧನ್ಯ ಪಿ.ಟಿರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಂತಿಮ ಬಿ.ಎ ವಿದ್ಯಾರ್ಥಿನಿ ಹಿತಾಶ್ರೀ ಹಾಗೂ ಅಂತಿಮ ಬಿಸಿಎ ವಿದ್ಯಾರ್ಥಿನಿ ಅನುಶ್ರೀ ಪ್ರಾರ್ಥಿಸಿದರು. ನೇವಿ ಅಧಿಕಾರಿ ತೇಜಸ್ವಿ ಸ್ವಾಗತಿಸಿ, ವಂದಿಸಿದರು. ಅಂತಿಮ ಬಿಕಾಂನ ವಿದ್ಯಾರ್ಥಿನಿ ನೂತನ ಕಾರ್ಯಕ್ರಮ ನಿರೂಪಿಸಿದರು.
ಭಾವಚಿತ್ರಕ್ಜೆ ಪುಷ್ಪಾರ್ಚನೆ..
ಕಾರ್ಯಕ್ರಮದ ಆರಂಭದಲ್ಲಿ ವೇದಿಕೆಯಲ್ಲಿನ ಅತಿಥಿ ಗಣ್ಯರು ವೇದಿಕೆಯಲ್ಲಿ ಇರಿಸಲಾಗಿದ್ದ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವಾರ್ಪಣೆಯನ್ನು ಸಲ್ಲಿಸಲಾಯಿತು.