ಅಂಗಳ ತುಂಬಾ ಸಾವಯವ ಕೃಷಿ ತೋಟ

0

ಮೂಡಂಬೈಲು ಸರವು ಅಂಗನವಾಡಿಯನ್ನು ನೋಡುವುದೇ ಖುಷಿ

@ ಸಿಶೇ ಕಜೆಮಾರ್

ಪುತ್ತೂರು: ಬಗೆ ಬಗೆಯ ಹೂವುಗಳ ಸ್ವಾಗತದೊಂದಿಗೆ ಈ ಅಂಗನವಾಡಿ ಕೇಂದ್ರದ ಅಂಗಳಕ್ಕೆ ಕಾಲಿಡುತ್ತಿದ್ದಂತೆ ನಮ್ಮನ್ನು ನಾವು ಮರೆತು ಬಿಡುತ್ತೇವೆ. ಇಕ್ಕೆಲಗಳಲ್ಲಿ ಬೆಳೆದ ವಿಧವಿಧದ ತರಕಾರಿಗಳು, ಬಾಳೆ, ಮಾವು, ಚಿಕ್ಕು, ಮಲೆಷಿಯನ್ ಆಪಲ್, ಹಲಸಿನ ಗಿಡಗಳನ್ನು ನೋಡಿದಾಗ ಇದು ಅಂಗನವಾಡಿಯೋ ಅಲ್ಲ ಮನೆಯೋ ಎಂಬ ಅನುಮಾನ ಮೂಡುತ್ತದೆ. ಹೌದು ಸಾವಯವ ಕೃಷಿಯಿಂದಲೇ ಗಮನ ಸೆಳೆದ ಬಂಟ್ವಾಳ ತಾಲೂಕು ಪುಣಚ ಗ್ರಾಮದ ಮೂಡಂಬೈಲು ಸರವು ಅಂಗನವಾಡಿ ಕೇಂದ್ರವನ್ನು ಒಂದ್ಸಲ ನೋಡಿಕೊಂಡು ಬರಲೇ ಬೇಕು…

1991 ರಲ್ಲಿ ಆರಂಭವಾದ ಈ ಅಂಗನವಾಡಿ ಕೇಂದ್ರ ಮೊದಲು ಒಂದು ಖಾಸಗಿ ಕಟ್ಟಡದಲ್ಲಿ ಇತ್ತು ಆ ಬಳಿಕ 2005 ರಲ್ಲಿ ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡಿತ್ತು. 2016 ರಿಂದ ಈ ಅಂಗನವಾಡಿ ಕೇಂದ್ರದಲ್ಲಿ ಸಾವಯವ ಕೃಷಿಯ ಮೂಲಕ ತರಕಾರಿಗಳನ್ನು ಬೆಳೆಯಲಾಗುತ್ತಿದೆ. ಇಲ್ಲಿ ಬೆಳೆದ ತರಕಾರಿಯಿಂದಲೇ ಅಂಗನವಾಡಿಯಲ್ಲಿರುವ ಮಕ್ಕಳಿಗೆ ಮಧ್ಯಾಹ್ನದ ಊಟಕ್ಕೆ ಪದಾರ್ಥ ಮಾಡಿ ಕೊಡಲಾಗುತ್ತಿದೆ. ಈ ಸಾಧನೆಯ ಹಿಂದೆ ಅಂಗನವಾಡಿ ಕಾರ್ಯಕರ್ತೆ ಹೇಮಮಾಲಿನಿ, ಸಹಾಯಕಿ ಕಮಲ, ಬಾಲವಿಕಾಸ ಸಮಿತಿ ಅಧ್ಯಕ್ಷೆ ನಿರೂಪ ಹಾಗೂ ಮಕ್ಕಳ ಪೋಷಕರು, ಸ್ತ್ರೀಶಕ್ತಿ ಸಂಘದ ಸದಸ್ಯರ ಶ್ರಮ ಇದೆ. ಅಂಗನವಾಡಿ ಕೇಂದ್ರದಲ್ಲಿ 13 ಪುಟಾಣಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ವಾರದಲ್ಲಿ ಮೂರು ದಿನ ಈ ಪುಟಾಣಿಗಳಿಗೆ ಚಂದನೆ ಯೂನಿಫಾರಂ ಕೂಡ ಇದೆ. ಅಂಗನವಾಡಿ ಗೋಡೆ ತುಂಬಾ ಪುಟಾಣಿಗಳ ಕಲಿಕೆಗೆ ಪೂರಕವಾದ ಚಿತ್ರಗಳು, ಬರಹಗಳು, ಆಟಿಕೆ ಸಾಮಾಗ್ರಿಗಳು ಎಲ್ಲವೂ ಇದೆ.

ಏನೇನು ತರಕಾರಿ ಬೆಳೆಯಲಾಗುತ್ತಿದೆ

ಅಂಗನವಾಡಿಗೆ ಇರುವ ಅಲ್ಪ ಜಾಗದ ತುಂಬಾ ತರಕಾರಿ ಕೃಷಿಯನ್ನು ಬೆಳೆಯಲಾಗುತ್ತಿದೆ. ವಿಶೇಷವಾಗಿ ಬದನೆ, ಬೆಂಡೆಕಾಯಿ, ಅಲಸಂಡೆ, ಹರಿವೆ, ಕುಂಬಳ ಕಾಯಿ, ಬಸಳೆ, ಪಡುವಲ ಕಾಯಿ, ತೊಂಡೆಕಾಯಿ ಬೆಳೆಯಲಾಗುತ್ತಿದೆ. ಗೋಣಿ ಚೀಲಗಳ ಮೂಲಕ ಕೆಲವು ತರಕಾರಿ ಗಿಡಗಳನ್ನು ಬೆಳೆಸಿದರೆ ಇನ್ನುಳಿದಂತೆ ಮಣ್ಣನ್ನು ಅಗತೆ ಮಾಡಿ ಬೆಳೆಯಲಾಗುತ್ತಿದೆ.

8 ಬಗೆಯ ಬಾಳೆ ಗಿಡಗಳಿವೆ

ಕೇವಲ ತರಕಾರಿ ಮಾತ್ರವಲ್ಲ ಹಣ್ಣಿನ ಗಿಡಗಳನ್ನು ಬೆಳೆಸಲಾಗಿದೆ. ವಿಶೇಷವಾಗಿ 8 ಬಗೆಯ ಬಾಳೆ ಗಿಡಗಳು ಇಲ್ಲಿವೆ. ಇದಲ್ಲದೆ ಕೆಜಿ ಪೇರಳೆ, ಮಲೆಷಿಯನ್ ಆಪಲ್, ಚಿಕ್ಕು, ಚೆರ್ರಿ, ಲಿಂಬೆ, ಹಲಸಿನ ಮರ, ಮಾವಿನ ಗಿಡಗಳು ಇವೆ. ಇನ್ನು ಅಂಗನವಾಡಿಯ ಎದುರು ಭಾಗದಲ್ಲಿ ತುಳಸಿ ಗಿಡಗಳು,ಸಾಂಬ್ರಾಣಿ ಗಿಡಗಳು, ಒಂದೆಲೆಗ (ತಿಮರೆ) ಬೆಳೆಸಲಾಗಿದೆ. ಬಲಭಾಗದಲ್ಲಿ ಚೆಂದನೆಯ ತಾವರೆಯ ಕೊಳ ಇದ್ದು ಕೊಳ ತುಂಬಾ ತಾವರೆ ಹೂವಿನ ಗಿಡಗಳಿವೆ.

ಸಂಪೂರ್ಣ ಸಾವಯವ ಕೃಷಿ

ಇಲ್ಲಿ ಸಂಪೂರ್ಣವಾಗಿ ಸಾವಯವ ಗೊಬ್ಬರದಿಂದಲೇ ತರಕಾರಿ ಕೃಷಿ ಮಾಡಲಾಗುತ್ತಿದೆ. ಯಾವುದೇ ರೀತಿಯ ರಾಸಾಯನಿಕ ಗೊಬ್ಬರ, ಔಷಧಿಗಳನ್ನು ಬಳಕೆ ಮಾಡುತ್ತಿಲ್ಲ. ತರಕಾರಿಗೆ ಕೋಳಿ ಗೊಬ್ಬರ, ಹಟ್ಟಿ ಗೊಬ್ಬರ, ಸೆಗಣಿ ನೀರು, ನೆಲಗಡಲೆ ಹಿಂಡಿಯನ್ನು ನೀರಲ್ಲಿ ಕಲಸಿ ಕೊಡಲಾಗುತ್ತಿದೆ.

ಸಾವಯವ ಕೃಷಿಗೆ ಸಂದ ಗೌರವ

ಸರವು ಅಂಗನವಾಡಿಯ ಸಾವಯವ ಕೃಷಿಯನ್ನು ಕಂಡು ಹಲವು ಮಂದಿ ಅಭಿನಂದನೆ ಸಲ್ಲಿಸಿದ್ದಾರೆ. ದೇವಿನಗರ ಶಾರದೋತ್ಸವ ಸಮಿತಿಯವರು ಇಲ್ಲಿನ ಕಾರ್ಯಕರ್ತೆ ಹೇಮಮಾಲಿನಿಯವರಿಗೆ ‘ಗ್ರಾಮ ಗೌರವ’ ನೀಡಿ ಸನ್ಮಾನಿಸಿದ್ದಾರೆ. ಇದಲ್ಲದೆ ಮೈತ್ರಿ ಗುರುಕುಲದವರು ಗೌರವಿಸಿದ್ದಾರೆ. ಸಾವಯವ ಕೃಷಿಯ ಹಿಂದೆ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯ ಶ್ರಮ ಹಾಗೂ ಪೋಷಕರ ಪ್ರೋತ್ಸಾಹದೊಂದಿಗೆ ಇಲ್ಲಿರುವ ಭಾಗ್ಯನಿಧಿ ಮತ್ತು ಭಾಗ್ಯಶ್ರೀ ಸ್ತ್ರೀ ಶಕ್ತಿ ಸಂಘದ ಸದಸ್ಯರ ಶ್ರಮವೂ ಬಹಳಷ್ಟಿದೆ. ಭಾಗ್ಯನಿಧಿ ಸ್ತ್ರೀ ಶಕ್ತಿ ಸಂಘಕ್ಕೆ ಈಗಾಗಲೇ ರಾಜ್ಯ, ಜಿಲ್ಲೆ ಮತ್ತು ತಾಲೂಕು ಮಟ್ಟದ ಉತ್ತಮ ಸಂಘ ಪ್ರಶಸ್ತಿ ಲಭಿಸಿದರೆ, ಭಾಗ್ಯಶ್ರೀ ಸ್ತ್ರೀ ಶಕ್ತಿ ಸಂಘಕ್ಕೆ ತಾಲೂಕು ಮಟ್ಟದ ಉತ್ತಮ ಸಂಘ ಪ್ರಶಸ್ತಿ ಲಭಿಸಿದೆ.

ಒಂದು ಪುಟ್ಟ ಅಂಗನವಾಡಿಯ ವರಾಂಡ ತುಂಬಾ ಸಾವಯವ ಕೃಷಿಯನ್ನು ಬೆಳೆಸಿ ಅದರಿಂದಲೇ ಪುಟಾಣಿಗಳಿಗೆ ಮಧ್ಯಾಹ್ನದ ಊಟಕ್ಕೆ ಪದಾರ್ಥ ಮಾಡಿ ಕೊಡುವ ಮೂಲಕ ವಿಷಯುಕ್ತ ಆಹಾರದಿಂದ ಪುಟಾಣಿಗಳನ್ನು ದೂರವಿಡಿ ಎಂಬ ಸಂದೇಶವನ್ನು ಸಾರುವ ಸರವು ಅಂಗನವಾಡಿ ತಾಲೂಕಿಗೆ ಒಂದು ಮಾದರಿ ಅಂಗನವಾಡಿ ಎಂದರೆ ತಪ್ಪಗಲಾರದು. ರಜಾ ದಿನಗಳಲ್ಲೂ ಬಂದು ಗಿಡಗಳಿಗೆ ನೀರು ಹಾಕುವ ಇಲ್ಲಿನ ಕಾರ್ಯಕರ್ತೆ, ಸಹಾಯಕಿಯ ಕೆಲಸಕ್ಕೆ ಹ್ಯಾಟ್ಸಫ್ ಹೇಳಲೇಬೇಕಾಗಿದೆ.

ಮೂಡಂಬೈಲು ಸರವು ಅಂಗನವಾಡಿ ಕೇಂದ್ರ ಸಾವಯವ ಕೃಷಿಯಿಂದಲೇ ಗಮನ ಸೆಳೆದಿದೆ. ಇಲ್ಲಿ ಹಲವು ಬಗೆಯ ತರಕಾರಿಗಳು, ಹಣ್ಣಿನ ಗಿಡಗಳು, ಬಾಳೆಗಿಡ ಎಲ್ಲವೂ ಇದೆ. ಇಲ್ಲಿ ಬೆಳೆದ ತರಕಾರಿಯಿಂದಲೇ ಪುಟಾಣಿಗಳಿಗೆ ಮಧ್ಯಾಹ್ನದ ಊಟಕ್ಕೆ ಪದಾರ್ಥ ಮಾಡಿ ಕೊಡಲಾಗುತ್ತಿದೆ. ಇದು ಗ್ರಾಮಕ್ಕೆ ಹೆಮ್ಮೆ ಹಾಗೂ ಎಲ್ಲಾ ಅಂಗನವಾಡಿಗೆ ಒಂದು ಮಾದರಿಯಾಗಿದೆ.

ರಾಮಕೃಷ್ಣ ಮೂಡಂಬೈಲು, ಅಧ್ಯಕ್ಷರು ಪುಣಚ ಗ್ರಾಪಂ

ಅಂಗನವಾಡಿ ಸಹಾಯಕಿ, ಸ್ತ್ರೀ ಶಕ್ತಿ ಸಂಘದ ಸದಸ್ಯರುಗಳು, ಪುಟಾಣಿಗಳ ಪೋಷಕರು ಇವರಿಂದಲೇ ಇದು ಸಾಧ್ಯವಾಗಿದೆ. 2016 ರಿಂದ ಸಾವಯವ ಕೃಷಿ ತೋಟವನ್ನು ಮಾಡುತ್ತಿದ್ದೇವೆ. ಮಕ್ಕಳಿಗೆ ಇಲ್ಲಿ ಬೆಳೆದ ತರಕಾರಿಯಿಂದಲೇ ಪದಾರ್ಥ ಮಾಡಿ ಕೊಡುತ್ತಿದ್ದೇವೆ. ತರಕಾರಿಯೊಂದಿಗೆ ಹಣ್ಣಿನ ಗಿಡ, ಬಾಳೆಗಿಡಗಳನ್ನು ಕೂಡ ಬೆಳೆಸಿದ್ದೇವೆ.

ಹೇಮಮಾಲಿನಿ, ಅಂಗನವಾಡಿ ಕಾರ್ಯಕರ್ತೆ

LEAVE A REPLY

Please enter your comment!
Please enter your name here