ನೆಲ್ಯಾಡಿ: ಕಾಂಚನ ಶ್ರೀ ಲಕ್ಷ್ಮೀನಾರಾಯಣ ಮ್ಯೂಸಿಕ್ ಅಕಾಡೆಮಿ ಟ್ರಸ್ಟ್ ಪ್ರಸ್ತುತ ಪಡಿಸುವ 69ನೇ ವರ್ಷದ ಕಲಾಸೇವೆಯ ’ಕಾಂಚನೋತ್ಸವ 2023’ ಜ.14 ಮತ್ತು 15ರಂದು ಬಜತ್ತೂರು ಗ್ರಾಮದ ಕಾಂಚನ ಶ್ರೀ ಲಕ್ಷ್ಮೀನಾರಾಯಣ ಸಂಗೀತ ಕಲಾಶಾಲೆಯಲ್ಲಿ ನಡೆಯಿತು. ಜೊತೆಗೆ 69ನೇ ವರ್ಷದ ಶ್ರೀ ತ್ಯಾಗರಾಜ, ಶ್ರೀ ಪುರಂದರದಾಸರ ಆರಾಧನಾ ಮಹೋತ್ಸವ, ಸ್ಥಾಪಕ ಗುರು ಸಂಗೀತರತ್ನ ಕಾಂಚನ ವೆಂಕಟಸುಬ್ರಹ್ಮಣ್ಯಂ ಹಾಗೂ ಕರ್ನಾಟಕ ಕಲಾಶ್ರೀ ಕಾಂಚನ ವಿ.ಸುಬ್ಬರತ್ನಂರವರ ಪುಣ್ಯ ದಿನಾಚರಣೆಯೂ ನಡೆಯಿತು.
ಜ.14ರಂದು ಮಧ್ಯಾಹ್ನ ಅತಿಥಿ ಕಲಾವಿದರು ಮತ್ತು ವಿದ್ಯಾರ್ಥಿಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳು ನಡೆಯಿತು. ಸಂಜೆ ಅಮೋಘ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಿತು. ವಿದ್ವಾನ್ ವಿಠಲ್ ರಾಮಮೂರ್ತಿ (ವಯೋಲಿನ್), ವಿದ್ವಾನ್ ವಿ.ವಿ.ಎಸ್.ಮುರಾರಿ( ವಯೊಲಾ). ಸಂಗೀತ ಕಲಾನಿಧಿ ವಿದ್ವಾನ್ ಟ್ರಿಚಿ ಶಂಕರನ್(ಮೃದಂಗ)ಹಾಗೂ ವಿದ್ವಾನ್ ಕೆ.ವಿ.ಗೋಪಾಲಕೃಷ್ಣನ್(ಖಂಜಿರ)ರವರು ಕಛೇರಿ ನಡೆಸಿಕೊಟ್ಟರು. ಜ.15ರಂದು ಬೆಳಿಗ್ಗೆ ’ಉಂಛವೃತ್ತಿ’ ಸಂತ ಶ್ರೀ ತ್ಯಾಗರಾಜರ ಉತ್ಸವ ಸಂಪ್ರದಾಯ ಮತ್ತು ದಿವ್ಯ ನಾಮ ಸಂಕೀರ್ತನೆಗಳ ವಾದ್ಯ-ಗಾಯನ ಭಜನೆಯೊಂದಿಗೆ ಸಂಗೀತ ನಡಿಗೆ ಕಾಂಚನ ಮನೆಯಿಂದ ಸಂಗೀತ ಶಾಲೆಯ ತನಕ ನಡೆಯಿತು. ಬಳಿಕ ಶ್ರೀ ಪುರಂದರ ದಾಸರ ಪಿಳ್ಳಾರಿ ಗೀತೆಗಳು ಮತ್ತು ಶ್ರೀ ತ್ಯಾಗರಾಜರ ಪಂಚರತ್ನ ಕೃತಿಗಳ ಗೋಷ್ಠಿಗಾನ ನಡೆಯಿತು. ನಂತರ ಅತಿಥಿ ಕಲಾವಿದರಿಂದ ಅಮೋಘ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಿತು. ವಿದ್ವಾನ್ ಸಂದೀಪ್ ನಾರಾಯಣ್(ಗಾಯನ), ವಿದ್ವಾನ್ ವಿ.ವಿ.ಎಸ್.ಮುರಾರಿ(ಪಿಟೀಲು), ಸಂಗೀತ ಕಲಾನಿಧಿ ವಿದ್ವಾನ್ ಟ್ರಿಚಿ ಶಂಕರನ್(ಮೃದಂಗ) ಹಾಗೂ ವಿದ್ವಾನ್ ಕೆ.ವಿ.ಗೋಪಾಲಕೃಷ್ಣನ್(ಖಂಜಿರ)ರವರು ಸಂಗೀತ ಕಛೇರಿ ನಡೆಸಿಕೊಟ್ಟರು.
ಧಾರ್ಮಿಕ ಕಾರ್ಯಕ್ರಮ:
ವೇದ ಬ್ರಹ್ಮ ನಾರಾಯಣ ಬಡಕಿಲ್ಲಾಯರ ನೇತೃತ್ವದಲ್ಲಿ ಜ.14ರಂದು ಸಂಜೆ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ಜ.15ರಂದು ಬೆಳಿಗ್ಗೆ ಗಣಹೋಮ, ಸಂಜೆ ದುರ್ಗಾನಮಸ್ಕಾರ ಪೂಜೆ ನಡೆದು ಮಹಾಪೂಜೆ, ಮಂತ್ರಾಕ್ಷತೆ ನೀಡಲಾಯಿತು. ಮಧ್ಯಾಹ್ನ ಹಾಗೂ ರಾತ್ರಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಎರಡು ದಿನ ನಡೆದ ಸಂಗೀತ ಕಾರ್ಯಕ್ರಮದಲ್ಲಿ ನೂರಾರು ಮಂದಿ ಸಂಗೀತಾಸಕ್ತರು ಪಾಲ್ಗೊಂಡಿದ್ದರು. ಕಾಂಚನ ಶ್ರೀ ಲಕ್ಷ್ಮೀನಾರಾಯಣ ಮ್ಯೂಸಿಕ್ ಅಕಾಡೆಮಿ ಟ್ರಸ್ಟ್ನ ಕಾರ್ಯದರ್ಶಿ ಕೆ.ರೋಹಿಣಿ ಸುಬ್ಬರತ್ನಂ, ಆಡಳಿತ ಮಂಡಳಿಯವರು, ಅಧ್ಯಾಪಕವೃಂದ, ಶಿಷ್ಯ ಹಾಗೂ ಪ್ರಶಿಷ್ಯವೃಂದದವರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.