ರಾಮಕುಂಜ: ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ಮತ್ತು ಪದವಿ ಪೂರ್ವ ವಿಭಾಗಗಳಲ್ಲಿ ವಿದ್ಯಾರ್ಜನೆಗೈದ ಹಿರಿಯ ವಿದ್ಯಾರ್ಥಿಗಳ ಸಮಲೋಚನಾ ಸಭೆ ಕಾಲೇಜಿನ ಸಭಾಂಗಣದಲ್ಲಿ ಜ.15ರಂದು ನಡೆಯಿತು.
ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿ ರಾಧಕೃಷ್ಣ ಕುವೆಚ್ಚಾರು ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿರಿಯ ವಿದ್ಯಾರ್ಥಿಗಳು ಕಲಿತ ಶಾಲೆಯೊಂದಿಗೆ ನಿರಂತರ ಸಂಪರ್ಕವಿಟ್ಟುಕೊಂಡಾಗ ಸಂಸ್ಥೆಯ ಬೆಳವಣಿಗೆಗೆ ಪೂರಕವಾಗುತ್ತದೆ. ಆರ್ಥಿಕ ಸಹಾಯವನ್ನು ನಿರೀಕ್ಷಿಸದೆ ಸಂಘವನ್ನು ಗಟ್ಟಿಗೊಳಿಸುವುದು ಮೂಲ ಉದ್ದೇಶವಾಗಿದೆ. ಈ ನಿಟ್ಟ್ಟಿನಲ್ಲಿ ಹಿರಿಯ ವಿದ್ಯಾರ್ಥಿ ಸಂಘವನ್ನು ಬಲಗೊಳಿಸಲು ಸನ್ನದ್ದರಾಗಿದ್ದೇವೆ. ವಿವಿಧ ಕ್ಷೇತ್ರದಲ್ಲಿ ತಮ್ಮ ಬದುಕು ಕಟ್ಟಿಕೊಂಡ ಹಿರಿಯ ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಯನ್ನು ಪ್ರಸಕ್ತ ವಿದ್ಯಾರ್ಜಣೆಗೈಯುವ ವಿದ್ಯಾರ್ಥಿಗಳಿಗೆ ಸ್ವಯಂ ಪ್ರೇರಿತರಾಗಿ ಬೋಧಿಸಲು ಕಾಲೇಜು ಅವಕಾಶ ಮಾಡಿಕೊಡುತ್ತದೆ. ಸಂಘದ ಕಾರ್ಯಚಟುವಟಿಕೆ ಸಂಸ್ಥೆಗೆ ಸೀಮಿತಗೊಳಿಸದೆ ಮುಂದಿನ ದಿನಗಳಲ್ಲಿ ಸಾರ್ವಜನಿಕ ಕ್ಷೇತ್ರದಲ್ಲೂ ತೊಡಗಿಸಿಕೊಳ್ಳವ ನಿಟ್ಟಿನಲ್ಲಿ ಕಾರ್ಯಯೋಜನೆ ರೂಪಿಸಲಾಗುವುದು. ಮುಂದಿನ ಸಭೆಯನ್ನು ಜ.29ರಂದು ಕಾಲೇಜಿನ ಸಭಾಂಗಣದಲ್ಲಿ ಅಯೋಜಿಸಲಾಗುವುದು ಎಂದರು.
ಹಿರಿಯ ವಿದ್ಯಾರ್ಥಿಗಳಾದ ಪ್ರಶಾಂತ್ ಆರ್.ಕೆ ರಾಮಕುಂಜ, ಲೋಕನಾಥ್ ರಾಮಕುಂಜ, ಚೇತನ್ ಆನೆಗುಂಡಿ, ರಾಧಾಕೃಷ್ಣ ಆನ, ನವೀನ್ ಕುಂತೂರು ಮೊದಲಾದವರು ಸಲಹೆ ಸೂಚನೆ ನೀಡಿದರು. ಶ್ರೀ ರಾಮಕುಂಜೇಶ್ವರ ವಿದ್ಯಾರ್ವಕ ಸಭಾದ ಸದಸ್ಯ ಲಕ್ಷ್ಮೀನಾರಾಯಣ ರಾವ್ ಆತೂರು, ಕಾಲೇಜು ಪ್ರಾಂಶುಪಾಲ ಚಂದ್ರಶೇಖರ ಕೆದ್ದೊಟೆ, ಕನ್ನಡ ಮಾಧ್ಯಮ ಪ್ರೌಢಶಾಲಾ ವಿಭಾಗದ ಮುಖ್ಯಗುರು ಸತೀಶ್ ಭಟ್, ಹಿರಿಯ ವಿದ್ಯಾರ್ಥಿ ಸಂಘದ ಕೋಶಾಧಿಕಾರಿ ಕೃಷ್ಣಮೂರ್ತಿ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಸತೀಶ್ ಕುಮಾರ್ ಬಲ್ಯ ಸ್ವಾಗತಿಸಿ , ನಿರೂಪಿಸಿದರು. ಅಧ್ಯಕ್ಷ ಗಣೇಶ್ ಕಟ್ಟಪುಣಿ ವಂದಿಸಿದರು.