ಪುತ್ತೂರು:ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿತನಕ್ಕೆ ಅವಕಾಶ ಕೋರಿ 14 ಮಂದಿ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಇವರಲ್ಲಿ ಹೈಕಮಾಂಡ್ ಯಾರಿಗೆ ಟಿಕೆಟ್ ಕೊಟ್ಟರೂ ನಾವೆಲ್ಲ ಅವರ ಗೆಲುವಿಗೆ ಶ್ರಮಿಸುತ್ತೇವೆ. ಆದರೆ ಪಕ್ಷಕ್ಕೆ ಹೊಸದಾಗಿ ಬರುವವರು ಯಾವುದೇ ನಿರೀಕ್ಷೆ ಇಟ್ಟುಕೊಂಡು ಬರಬಾರದು ಎಂಬುದು ನಮ್ಮ ಆಶಯ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ ಅವರು ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನೂ ಸೇರಿದಂತೆ 14 ಮಂದಿ ಆಕಾಂಕ್ಷಿಗಳಿದ್ದೇವೆ.ಇ ವರಲ್ಲಿ ಕೋಡಿಂಬಾಡಿ ಅಶೋಕ್ ಕುಮಾರ್ ರೈ ಕೂಡ ಇದ್ದಾರೆ. ಅವರು ಜ.22ರಂದು ಮಂಗಳೂರಿನ ಜನಧ್ವನಿ ಸಮಾವೇಶದಲ್ಲಿ ಪಕ್ಷ ಸೇರಲಿದ್ದಾರೆ. ನಮ್ಮ ಪಕ್ಷದ ಸಿದ್ಧಾಂತವನ್ನು ನಂಬಿಕೊಂಡು ಬಂದವರಿಗೆ ಸ್ವಾಗತ ನೀಡುವುದು ನಮ್ಮ ಧರ್ಮ. ಆದರೆ ಬರುವವರು ಯಾವುದೇ ನಿರೀಕ್ಷೆ ಇಟ್ಟುಕೊಂಡು ಬರಬಾರದು ಎಂಬುದು ಆಶಯ. ಅಂತಿಮವಾಗಿ ಹೈಕಮಾಂಡ್ ಯಾರಿಗೆ ಟಿಕೆಟ್ ಕೊಟ್ಟರೂ ನಾವು ಕೆಲಸ ಮಾಡುತ್ತೇವೆ. ನಮಗೆ ವ್ಯಕ್ತಿ ಮುಖ್ಯವಲ್ಲ. ನಾವು ಪಕ್ಷದ ಚಿಹ್ನೆ ಪರವಾಗಿ ಕೆಲಸ ಮಾಡುತ್ತೇವೆ ಎಂದರು. ಜ.22ರಂದು ನಡೆಯುವ ಮಂಗಳೂರಿನ ಜನಧ್ವನಿ ಸಮಾವೇಶದಲ್ಲಿ 50 ಸಾವಿರ ಜನ ಭಾಗವಹಿಸುವ ನಿರೀಕ್ಷೆ ಇದೆ. ಪುತ್ತೂರು ಬ್ಲಾಕ್ನಿಂದ 5 ಸಾವಿರ ಮಂದಿ ತೆರಳಲಿದ್ದೇವೆ. ಪ್ರತೀ ಬೂತ್ನಿಂದ ಕನಿಷ್ಠ 20 ಜನ ತೆರಳಲಿದ್ದಾರೆ. 40 ಬಸ್ಗಳು ಮತ್ತು ನೂರಾರು ವಾಹನಗಳು ತೆರಳಲಿವೆ. ಮಧ್ಯಾಹ್ನ 2 ಗಂಟೆಗೆ ಪುತ್ತೂರಿನಿಂದ ಕಾರ್ಯಕರ್ತರು ಹೊರಡಲಿದ್ದಾರೆ ಎಂದರು. 2 ವರ್ಷಗಳಿಂದ ಪುತ್ತೂರು ಕ್ಷೇತ್ರ ಮತ್ತು ಪುತ್ತೂರು ಬ್ಲಾಕ್ನಲ್ಲಿ ಪಕ್ಷ ಸಂಘಟನೆ ಕಾರ್ಯ ವ್ಯವಸ್ಥಿತವಾಗಿ ನಡೆದಿದೆ. ಇಡೀ ಕ್ಷೇತ್ರದಲ್ಲಿ 22 ಸಾವಿರ ಮತದಾರರ ನೋಂದಣಿ ನಡೆದಿದೆ. ಪುತ್ತೂರಿನಲ್ಲಿ ಈ ಬಾರಿ ಕಾಂಗ್ರೆಸ್ ಗೆಲ್ಲೋದು ಶತಃಸಿದ್ಧ ಎಂದರು. ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ, ಜಿಲ್ಲಾ ಕಾರ್ಮಿಕ ಕಾಂಗ್ರೆಸ್ ಉಪಾಧ್ಯಕ್ಷ ರವೀಂದ್ರ ರೈ ನೆಕ್ಕಿಲು, ಅಲ್ಪಸಂಖ್ಯಾತ ವಿಭಾಗದ ಪ್ರಮುಖರಾದ ಶಕೂರ್ ಹಾಜಿ, ಎಸ್.ಟಿ. ವಿಭಾಗದ ಅಧ್ಯಕ್ಷರಾದ ಮಹಾಲಿಂಗ ನಾಯ್ಕ ಉಪಸ್ಥಿತರಿದ್ದರು.