ಪುತ್ತೂರಿನಿಂದ ವಾಹನದ ವ್ಯವಸ್ಥೆ ಇದೆ- ಎಂ.ಬಿ ವಿಶ್ವನಾಥ
ಪುತ್ತೂರು; ಜ.22 ರಂದು ಮಂಗಳೂರಿನಲ್ಲಿ ನಡೆಯಲಿರುವ ಕಾಂಗ್ರೆಸ್ನ ಪ್ರಜಾಧ್ವನಿ ಸಮಾವೇಶದ ಬಗ್ಗೆ ಕಾರ್ಯಕರ್ತರ ಸಭೆ ಕುಂಬ್ರ ಕಾಂಗ್ರೆಸ್ ಕಾರ್ಯಕರ್ತ ಖಾದರ್ ರವರ ಮನೆಯಲ್ಲಿ ನಡೆಯಿತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಜಾಧ್ವನಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಲ್ಲಿ ಈಗಾಗಲೇ ಪುತ್ತೂರು ವಿಧಾನಸಭಾ ಕ್ಷೇತ್ರದ ಎಲ್ಲಾ ವಲಯ ಕೇಂದ್ರಗಳಲ್ಲಿ ಸಭೆಗಳನ್ನು ಕರೆಯಲಾಗಿದೆ. ಪ್ರತಿಯೊಬ್ಬ ಕಾರ್ಯಕರ್ತನೂ ಸಮಾವೇಶದಲ್ಲಿ ಭಾಗವಹಿಸುವಂತೆ ಮನವಿ ಮಾಡಿದ ಅವರು ಪುತ್ತೂರು ನಗರದಿಂದ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು. ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಪ್ರತೀ ಕುಟುಂಬಗಳಿಗೆ ತಲಾ 2000 ಮಾಸಿಕ ಪಿಂಚಣಿ ಮತ್ತು 500 ರೂ. ಅಡುಗೆ ಅನಿಲ ವಿತರಣೆ ನಡೆಯಲಿದೆ. ಈ ವಿಚಾರವನ್ನು ಕಾರ್ಯಕರ್ತರು ಮನೆ ಮನೆಗೆ ತಲುಪಿಸುವ ಕೆಲಸವನ್ನು ಮಾಡಬೇಕು ಎಂದು ಹೇಳಿದರು.
ಒಳಮೊಗ್ರು ವಲಯ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರಿ ಬೊಳ್ಳಾಡಿ ಮಾತನಾಡಿ ಕೇಂದ್ರ ಹಾಗೂ ರಾಜ್ಯದಲ್ಲಿರುವ ಬಿಜೆಪಿ ಸರಕಾರ ಜನರನ್ನು ಲೂಟಿ ಮಾಡುತ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಬಡವರನ್ನು ಹಸಿವಿನಿಂದ ನರಳಿ ಸಾಯುವಂತೆ ಮಾಡುವ ಹುನ್ನಾರ ನಡೆಸುತ್ತಿದೆ. ದೇಶದಲ್ಲಿ ಬಡವ ಸ್ವಾಭಿಮಾನದಿಂದ ಬದುಕಬೇಕಾದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಾದರೆ ಪ್ರತಿಯೊಬ್ಬ ಕಾರ್ಯಕರ್ತರೂ ಪ್ರತಿಜ್ಞೆ ಮಾಡುವ ಮೂಲಕ ಸೇವಾ ಕಾರ್ಯಕ್ಕೆ ಇಳಿಯಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರಾದ ಶಕೂರ್ ಹಾಜಿ, ಮೌರಿಸ್ ಮಸ್ಕರೇನಸ್, ಸಂತೋಷ್ ಭಂಡಾರಿ, ಶಶಿಕುಮಾರ್, ಸಿದ್ದಿಕ್ ಕೂಡುರಸ್ತೆ, ಮಹಮ್ಮದ್ ಕಡ್ತಿಮಾರ್, ಅಬ್ದುಲ್ ಖಾದರ್ ಕುಂಬ್ರ, ಸ್ವಾಬಿರ್ ಕುಂಬ್ರ, ಒಳಮೊಗ್ರು ಗ್ರಾಪಂ ಸದಸ್ಯರಾದ ಚಿತ್ರಾ ಬಿಸಿ, ಶಾರದಾ, ಗ್ರಾಪಂ ಉಪಾಧ್ಯಕ್ಷೆ ಸುಂದರಿ, ಶೀನಪ್ಪ ನಾಯ್ಕ, ವಿನೋದ್, ಅಶ್ರಫ್ ಉಜಿರೋಡಿ, ಮಹಮ್ಮದ್ ಬೊಳ್ಳಾಡಿ ಮತ್ತಿತರರು ಉಪಸ್ಥಿತರಿದ್ದರು.