ಕಡಬ: ನಾವು ಎಷ್ಟೇ ದೊಡ್ಡ ಮನೆ ಕಟ್ಟಿದರೂ ಮನೆಯಲ್ಲಿ ವಾಸಿಸುವ ಮಂದಿಯಲ್ಲಿ ಪ್ರೀತಿ, ವಿಶ್ವಾಸ, ನಂಬಿಕೆ, ಸಹಬಾಳ್ವೆಯ ಅನ್ಯೋನ್ಯ ಜೀವನ ಇಲ್ಲದಿದ್ದರೆ ಆ ಮನೆ ಗೃಹ ಎಂದು ಕರೆಸಿಕೊಳ್ಳುವುದಿಲ್ಲ ಬದಲಿಗೆ ಕೇವಲ ಕಟ್ಟಡವಾಗಿ ಮಾತ್ರ ಇರುತ್ತದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ನ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು.
ಅವರು ಜ.23ರಂದು ಕಡಬದ ಉದ್ಯಮಿ ಸೋಮಪ್ಪ ನಾಯ್ಕ್ ಅವರ ನೂತನ ಗೃಹ ಶ್ರೀ ದುರ್ಗಾ ನಿಲಯದ ಗೃಹಪ್ರವೆಶ ಕಾರ್ಯಕ್ರಮದಲ್ಲಿ ಭಾಗವಹಿಸಿ ಇಲ್ಲಿ ನಡೆದ ಧರ್ಮ ಸಭೆಯಲ್ಲಿ ಆಶೀರ್ವಚನ ನೀಡಿದರು.
ಸಮಾಜಲ್ಲಿ ಬದುಕುವುದಕ್ಕೆ ತಾಳ್ಮೆ ಸಹನೆ ತುಂಬಾ ಅಗತ್ಯ, ಹಿರಿಯರ ಮನಸ್ಸಿಗೆ ನೋವಾಗುವಂತೆ ಬದುಕಿ ಎಷ್ಟೇ ಅನ್ನದಾನ, ವಸ್ತ್ರದಾನ, ಹೊನ್ನು ದಾನ , ಮಣ್ಣು ದಾನ ಮಾಡಿ ಪ್ರಯೋಜನವಿಲ್ಲ, ಮನೆಯಲ್ಲಿರುವ ತಂದೆ ತಾಯಿಯ ಕಣ್ಣೀರು ಒರೆಸುವ ದೊಡ್ಡಗುಣದಿಂದ ಬದುಕು ಸಾರ್ಥಕವಾಗುತ್ತದೆ, ಅಂತವರ ಭಾಗ್ಯದ ಬಾಗಿಲು ತೆರೆಯುತ್ತದೆ, ಭಜನೆ ಇದ್ದಲ್ಲಿ ಭಾವನಾತ್ಮಕ ಸಂಬಂಧ ಎನ್ನುವುದು ಸೋಮಪ್ಪ ನಾಯ್ಕ್ ಅವರಲ್ಲಿ ಮೈಗೂಡಿದೆ, ಅವರು ಉದ್ಯಮಿಯಾಗಿದ್ದುಕೊಂಡು ಕಳೆದ ಹಲವಾರು ವರ್ಷಗಳಿಂದ ಭಜನಾ ಸಂಘವನ್ನು ಕಟ್ಟಿಕೊಂಡು ಭಜನೆಯ ಮೂಲಕ ಧರ್ಮ ಜಾಗೃತಿಯನ್ನು ಮೂಡಿಸುತ್ತಾ ಎಲ್ಲರ ಪ್ರೀತಿ ಪಾತ್ರರಾಗಿ ಸಮಾಜದಲ್ಲಿ ಅಪಾರ ಬಂಧುಗಳನ್ನು ಸಂಪಾದಿಸಿದ್ದಾರೆ. ಹಿರಿಯರಿಗೆ ಗೌರವ ಕೊಡುವ ಅತಃಕರಣ ಇರುವ ಇಂತಹ ಸಂಸ್ಕಾರವಂತ ವ್ಯಕ್ತಿಯ ನೂತನ ಗೃಹ ಆದರ್ಶ ಮನೆಯಾಗಿ ಇತರರಿಗೆ ಮಾದರಿಯಾಗಲಿದೆ ಎಂದು ನುಡಿದ ಸ್ವಾಮೀಜಿ ವಿಶ್ವದ ದೇವರ ಕೋಣೆಯಾಗಿರುವ ಭಾರತದಲ್ಲಿ ಮಾತ್ರ ಧರ್ಮ ಅನುಷ್ಠಾನ ಮಾಡಲು ಸಾಧ್ಯ, ಈ ಹಿನ್ನೆಲೆಯಲ್ಲಿ ಪ್ರತೀ ಮನೆಯ ಮಕ್ಕಳು ಸಂಸ್ಕಾರವಂತರಾಗಿ ಬೆಳೆಯಲು, ದೇಶ ಪ್ರೇಮಿಗಳಾಗಿ ನವಭಾರತ ನಿರ್ಮಾಣ ಮಾಡಲು ಪ್ರೇರಣೆ ನೀಡಬೇಕು ಎಂದರು.
ಒಡಿಯೂರು ಗುರುದೇವಸಂಸ್ಥಾನಮ್ನ ಸಾಧ್ವಿ ಶ್ರೀ ಮಾತಾನಂದಮಯಿ ಸಾನಿಧ್ಯವಹಿಸಿದ್ದರು. ವೇದಿಕೆಯಲ್ಲಿ ಜ್ಯೋತಿಷಿ ರಾಜಶೇಖರ್ ನಾಯರ್ ಮಂಜೇಶ್ವರ, ಬಜಗೋಳಿ ಆದಿಶಕ್ತಿ ಧರ್ಮದೇವಿ ದೇವಸ್ಥಾನದ ಧರ್ಮದರ್ಶಿ ಸುಧಾಕರ ಸಾಲ್ಯಾನ್, ವಾಸ್ತು ತಜ್ಞ ರವಿನಾರಾಯಣ ಎಂ.ಪೆರ್ಲ, ಮಾತೃಶ್ರೀ ಕಿಟ್ಟಮ್ಮ ನಾಯ್ಕ್ ಉಪಸ್ಥಿತರಿದ್ದರು. ಸಮಾಜದ ವಿವಿಧ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸೋಮಪ್ಪ ನಾಯ್ಕ್ ಸ್ವಾಗತಿಸಿ, ವಂದಿಸಿದರು. ಕಡಬ ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಶಿವಪ್ರಸಾದ್ ರೈ ಮೈಲೇರಿ ನಿರೂಪಿಸಿದರು.