ಅಕ್ಷಯ ಕಾಲೇಜಿನ ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ

ಕ್ರೀಡೆಯಿಂದ ಮಾನಸಿಕ ಆರೋಗ್ಯ, ಹೋರಾಡುವ ಛಲ ಇಮ್ಮಡಿಗೊಳಿಸುತ್ತದೆ-ಗಿರೀಶ್ ನಂದನ್

ಚಿತ್ರ: ನವೀನ್ ರೈ ಪಂಜಳ

ಪುತ್ತೂರು: ಪ್ರಸ್ತುತ ವಿದ್ಯಾಮಾನದಲ್ಲಿ ಶೈಕ್ಷಣಿಕ ವಿದ್ಯಾಭ್ಯಾಸದ ಜೊತೆಗೆ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ ಕ್ರೀಡೆಯಲ್ಲೂ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕು. ಕ್ರೀಡೆಯಿಂದ ಮಾನಸಿಕ ಆರೋಗ್ಯ ಹಾಗೂ ಗೆಲ್ಲಬೇಕೆಂಬ ಹೋರಾಡುವ ಛಲಗಾರಿಕೆ ವೃದ್ಧಿಸುತ್ತದೆ ಮಾತ್ರವಲ್ಲ ನಮ್ಮಲ್ಲಿ ಪರಸ್ಪರ ಏಕತೆಯ ಬಾಂಧವ್ಯವನ್ನು ಮೂಡಿಸುವಂತೆ ಮಾಡುತ್ತದೆ ಎಂದು ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್‌ರವರು ಹೇಳಿದರು.

ಅಕ್ಷಯ ಎಜ್ಯುಕೇಶನಲ್ ಆಂಡ್ ಚ್ಯಾರಿಟೇಬಲ್ ಟ್ರಸ್ಟ್‌ನಡಿ ಸಂಪ್ಯದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನ ವಾರ್ಷಿಕ ಕ್ರೀಡಾಕೂಟ ‘ಸ್ಪೈರೋ-ಆತ್ಮಬಲ 2023’ ಜ.24 ರಂದು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಜರಗಿದ್ದು ಇದರ ಉದ್ಘಾಟನೆಯನ್ನು ದೀಪ ಬೆಳಗಿಸುವ ಮೂಲಕ ನೆರವೇರಿಸಿ ಅವರು ಮಾತನಾಡಿದರು. ಅಕ್ಷಯ ಕಾಲೇಜಿನಲ್ಲಿ ವೃತ್ತಿಪರ ಕೋರ್ಸ್‌ಗಳನ್ನು ಆರಂಭಿಸಿ ಪುತ್ತೂರಿಗೆ ದೊಡ್ಡ ಅನುಕೂಲತೆಯನ್ನು ಅಕ್ಷಯ ಕಾಲೇಜು ಕಲ್ಪಿಸಿಕೊಟ್ಟಿದೆ. ಮಂಗಳೂರು ವಿ.ವಿ ಸಂಯೋಜಿತ ವೃತ್ತಿಪರ ಕೋರ್ಸ್‌ಗಳು ವಿದ್ಯಾರ್ಥಿಗಳ ಮುಂಬರುವ ಭವಿಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಹೇಳಿ ಶುಭ ಹಾರೈಸಿದರು.

ಮುಖ್ಯ ಅತಿಥಿ, ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಧರಣಪ್ಪ ಗೌಡ ಕೆ. ಮಾತನಾಡಿ, ಕ್ರೀಡೆಯು ಪರಂಪರೆ, ಸಂಸ್ಕೃತಿ, ದೈಹಿಕ ಶ್ರಮ, ಒಗ್ಗಟ್ಟು, ಬಲಾಢ್ಯತೆಯನ್ನು ಹೊಂದಿದೆ. ಜೀವನದಲ್ಲಿ ಒಂದಲ್ಲ ಒಂದು ಕ್ರೀಡೆಯಲ್ಲಿ ಅಳವಡಿಸಿಕೊಳ್ಳದೇ ಇದ್ದರೆ ಮಧ್ಯಮ ವಯಸ್ಸಿನಲ್ಲಿ ಉದ್ವೇಗ ಹಾಗೂ ಒತ್ತಡಕ್ಕೆ ಒಳಗಾಗುತ್ತಾರೆ ಎಂಬುದು ನಿಜ. ಜೀವನದುದ್ದಕ್ಕೂ ದೈಹಿಕ ಬಲಾಢ್ಯತೆ ಪಡೆಯಬೇಕಾದರೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದು ಮುಖ್ಯ ಎಂದರು.

ಉಪ್ಪಿನಂಗಡಿ ಸರಕಾರಿ ಪದವಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪ್ರವೀಣ್ ಕುಮಾರ್ ಕೂಡಮರ ಮಾತನಾಡಿ, ಅಕ್ಷಯ ಕಾಲೇಜು ದೂರದೃಷ್ಟಿತ್ವದ ಯೋಜನೆಯನ್ನು ಇಟ್ಟುಕೊಂಡು ಪುತ್ತೂರಿನ ಗ್ರಾಮೀಣ ಪ್ರದೇಶದಲ್ಲಿ ವೃತ್ತಿಪರ ಕೋರ್ಸ್‌ಗಳನ್ನು ಪರಿಚಯಿಸಿರುವುದು ಶ್ಲಾಘನೀಯ. ಪ್ರತಿಯೋರ್ವ ಕ್ರೀಡಾಪಟುಗಳು ವೃತ್ತಿಪರ ಕ್ರೀಡಾಪಟುಗಳು ಆಗಲು ಸಾಧ್ಯವಿಲ್ಲ, ಅದಕ್ಕೆ ಕಠಿಣ ಪರಿಶ್ರಮ ಬೇಕು. ಸ್ವಸ್ಥ ಹಾಗೂ ಸಾಮರಸ್ಯದ ಸಮಾಜಕ್ಕೆ ಕ್ರೀಡಾಕೂಟಗಳು ಬಹಳ ಸಹಕಾರಿ ಎನಿಸುತ್ತವೆ ಎಂದರು.

ಅಧ್ಯಕ್ಷತೆ ವಹಿಸಿದ ಅಕ್ಷಯ ಕಾಲೇಜಿನ ಅಧ್ಯಕ್ಷ ಜಯಂತ್ ನಡುಬೈಲು ಮಾತನಾಡಿ, ಕ್ರೀಡೆಯಲ್ಲಿ ಪ್ರಣಮ್ಯ ಅಗಳಿ ಗಿನ್ನೆಸ್ ದಾಖಲೆ, ಯೋಗದಲ್ಲಿ ಹಾಗೂ ಡಾಡ್ಜ್‌ಬಾಲ್‌ನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಅಕ್ಷಯ ಕಾಲೇಜಿನ ವಿದ್ಯಾರ್ಥಿಗಳು ಮಿಂಚು ಹರಿಸಿರುವುದು ಅಭಿನಂದನೀಯ. ವಿದ್ಯಾರ್ಥಿಗಳು ಅವಕಾಶಗಳು ಬಂದಾಗ ತಮ್ಮ ಪ್ರತಿಭೆಯನ್ನು ತೋರ್ಪಡಿಸಿ, ಸೋಲು ಎದುರಾದ್ರೆ ಅದೇ ಗೆಲುವು ಎಂದು ಭಾವಿಸಿ ಮುಂದಡಿ ಇಟ್ಟಾಗ ಮುಂದೊಂದು ದಿನ ಗೆಲುವು ಖಂಡಿತಾ ದಕ್ಕುವುದು ಎಂದರು.

ತಾಲೂಕು ಕ್ರೀಡಾಂಗಣದ ಯುವ ಸಬಲೀಕರಣ ಹಾಗೂ ಕ್ರೀಡೆ ಇದರ ಸೂಪರ್‌ವೈಸರ್ ಶ್ರೀಕಾಂತ್ ಪೂಜಾರಿ ಬಿರಾವು, ಪಟ್ಟೆ ಎಜ್ಯುಕೇಶನಲ್ ವಿದ್ಯಾಸಂಸ್ಥೆಯ ದೈಹಿಕ ಶಿಕ್ಷಣ ನಿರ್ದೇಶಕ ಮೋನಪ್ಪ ಎಂ, ಕಾಲೇಜಿನ ವ್ಯವಸ್ಥಾಪಕಿ ನಿರ್ದೇಶಕಿ ಕಲಾವತಿ ಜಯಂತ್, ಆಡಳಿತ ಮಂಡಳಿ ಸದಸ್ಯ ನಾರಾಯಣ್, ಪ್ರಾಂಶುಪಾಲ ಸಂಪತ್ ಕೆ.ಪಕ್ಕಳ, ಆಡಳಿತಾಧಿಕಾರಿ ಅರ್ಪಿತ್ ಟಿ.ಎ, ಕ್ರೀಡಾ ಸಂಯೋಜಕರಾದ ಸತೀಶ್ ನಾಯ್ಕ್ ಸಿ.ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕಿ ಪ್ರಭಾವತಿ ಪ್ರಾರ್ಥಿಸಿದರು. ಕಾಲೇಜು ವಿದ್ಯಾರ್ಥಿ ಸಂಘದ ನಾಯಕ ಗಗನ್‌ದೀಪ್ ಸ್ವಾಗತಿಸಿ, ಕ್ರೀಡಾ ಕಾರ್ಯದರ್ಶಿ ನವೀನ್ ವಂದಿಸಿದರು. ಅಂತರ್ರಾಷ್ಟ್ರೀಯ ಕ್ರೀಡಾಪಟು ಪ್ರಣಮ್ಯ ಅಗಳಿ ಕ್ರೀಡಾಪಟುಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಉಪನ್ಯಾಸಕಿ ಆಶಿಕಾ ಫರ್ಝಾನ ಕಾರ್ಯಕ್ರಮ ನಿರೂಪಿಸಿದರು.

ಆಕರ್ಷಕ ಪಥಸಂಚಲನ…

ಕೊಂಬೆಟ್ಟು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ವಿದ್ಯಾರ್ಥಿಗಳ ಬ್ಯಾಂಡ್ ವಾದ್ಯದೊಂದಿಗೆ ಅಕ್ಷಯ ಕಾಲೇಜಿನ ಶೌರ್ಯ, ಅಸ್ತ್ರ, ಸಂಘರ್ಷ, ವಿಕ್ರಮ, ಅಮೋಘ ಹಾಗೂ ಚಾಣಕ್ಯ ಹೀಗೆ ಆರು ವಿದ್ಯಾರ್ಥಿಗಳ ತಂಡ ಸಹಾಯಕ ಆಯುಕ್ತ ಗಿರೀಶ್ ನಂದನ್ ಹಾಗು ಅತಿಥಿ ಗಣ್ಯರಿಂದ ಗೌರವ ವಂದನೆ ಸ್ವೀಕಾರದೊಂದಿಗೆ ಆಕರ್ಷಕ ಪಥಸಂಚಲನ ನಡೆಸಿದರು. ಈ ಪಥಸಂಚಲನದಲ್ಲಿ ನೂರು ಅಂಕ ಗಳಿಸಿದ ವಿಕ್ರಂ ತಂಡ ಪ್ರಥಮ, 90 ಅಂಕ ಗಳಿಸಿದ ಸಂಘರ್ಷ ತಂಡ ದ್ವಿತೀಯ, ತಲಾ 80 ಅಂಕ ಗಳಿಸಿದ ಅಸ್ತ್ರ ಹಾಗೂ ಚಾಣಕ್ಯ ತಂಡ ಜಂಟಿಯಾಗಿ ತೃತೀಯ ಸ್ಥಾನ ಪಡೆಯಿತು. ಸುಮಾರು 300ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಆಯಾ ತಂಡಗಳ ಕ್ರೀಡಾ ಸಮವಸ್ತ್ರದೊಂದಿಗೆ ಪಥಸಂಚಲನದಲ್ಲಿ ಭಾಗವಹಿಸಿದರು.

ಕ್ರೀಡಾ ಜ್ಯೋತಿ ಮೆರವಣಿಗೆ…

ಅಂತರ್ರಾಷ್ಟ್ರೀಯ ಯೋಗ ಕ್ರೀಡಾಪಟು ಹಾಗೂ ಗಿನ್ನೆಸ್ ಬುಕ್ ದಾಖಲೆಗಾರ್ತಿ ಪ್ರಣಮ್ಯ ಅಗಳಿರವರ ನೇತೃತ್ವದಲ್ಲಿ ರಾಷ್ಟ್ರೀಯ ಯೋಗಪಟು ಪ್ರತೀಕ್ಷಾ ರೈ, ಡಾಡ್ಜ್‌ಬಾಲ್‌ನಲ್ಲಿ ಕರ್ನಾಟಕ ತಂಡಕ್ಕೆ ಆಯ್ಕೆಯಾಗಿರುವ ದೇವಿಕಾ, ಕಬಡ್ಡಿ, ವಾಲಿಬಾಲ್, ಕ್ರಿಕೆಟ್ ಪ್ರತಿಭೆ ನವೀನ್, ರಾಜ್ಯಮಟ್ಟದ ಡಾಡ್ಜ್‌ಬಾಲ್‌ನಲ್ಲಿ ಭಾಗವಹಿಸಿದ ಹಸ್ತಿಕ್ ಪಿ.ಕೆರವರು ಕ್ರೀಡಾಜ್ಯೋತಿಯೊಂದಿಗೆ ಕ್ರೀಡಾಂಗಣಕ್ಕೆ ಒಂದು ಸುತ್ತಿನ ಪ್ರದಕ್ಷಿಣೆ ಬಳಿಕ ಪ್ರಣಮ್ಯ ಅಗಳಿಯವರು ಕ್ರೀಡಾಜ್ಯೋತಿಯನ್ನು ಸಹಾಯಕ ಆಯುಕ್ತ ಗಿರೀಶ್ ನಂದನ್‌ರವರ ಕೈಗಿತ್ತು ಬಳಿಕ ಗಿರೀಶ್ ನಂದನ್‌ರವರು ಕ್ರೀಡಾಜ್ಯೋತಿಯನ್ನು ಮೇಲಕ್ಕೆತ್ತಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.