ಪುತ್ತೂರು:ಕಾರು ಮತ್ತು ರಿಕ್ಷಾವೊಂದರ ನಡುವೆ ಭೀಕರ ಅಪಘಾತ ಸಂಭವಿಸಿ ಮಹಿಳೆ ಮತ್ತು ನಾಲ್ಕರ ಹರೆಯದ ಮೊಮ್ಮಗಳು ದಾರುಣ ಸಾವಿಗೀಡಾದ ಘಟನೆ ಕುಂಬ್ರ ಸಮೀಪದ ಪರ್ಪುಂಜ ಕೊಯಿಲತ್ತಡ್ಕ ಅಬ್ರೋಡ್ ಹಾಲ್ ಬಳಿ ನಡೆದಿದೆ.ಆಟೋ ರಿಕ್ಷಾದಲ್ಲಿದ್ದ ಮಗು ಸ್ಥಳದಲ್ಲೇ ಮತಪಟ್ಟಿದ್ದರೆ,ಗಂಭೀರ ಗಾಯಗೊಂಡಿದ್ದ ವೃದ್ದೆ ಮಂಗಳೂರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.ಘಟನೆ ನ.1ರಂದು ಸಂಜೆ ನಡೆದಿದೆ.
ಪಡೀಲು ನಿವಾಸಿಯಾಗಿರುವ ಆಟೋ ರಿಕ್ಷಾ ಚಾಲಕ ಹನೀಫ್ ಬನ್ನೂರು ಅವರ 4 ವರ್ಷ ಆರು ತಿಂಗಳು ಪ್ರಾಯದ ಪುತ್ರಿ ಸಜ್ವಾ ಫಾತೀಮಾರವರು ಘಟನಾ ಸ್ಥಳದಲ್ಲೇ ಮೃತಪಟ್ಟಿದ್ದು, ಗಂಭೀರ ಗಾಯಗೊಂಡಿದ್ದ ಹನೀಫ್ ಅವರ ಅತ್ತೆ ಝುಲೈಕಾ ಅವರು ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.ಹನೀಫ್ ಅವರ ಬಾವ ಗಲ್ಫ್ ಉದ್ಯೋಗಿ ರಿಯಾಝ್‌ರವರ ಪತ್ನಿ ಮತ್ತು ಮಗು ಮಂಗಳೂರಿನ ಯುನಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಹನೀಫ್ ಅವರಿಗೂ ಗಾಯವಾಗಿದೆ.
ಹನೀಫ್ ಬನ್ನೂರು ಅವರು ಸಂಜೆ ಪತ್ನಿ, ಅತ್ತೆ ಮತ್ತು ಬಾವನ ಹೆಂಡತಿ ಹಾಗೂ ಮೂರು ಮಕ್ಕಳೊಂದಿಗೆ ಆಟೋ ರಿಕ್ಷಾ(ಕೆ.ಎ.21ಸಿ-3491) ದಲ್ಲಿ ಬೊಳ್ವಾರ್‌ನಿಂದ ಹೊರಟು ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಒಳಮೊಗ್ರು ಗ್ರಾಮದ ಪರ್ಪುಂಜ ಅಬ್ರಾಡ್ ಹಾಲ್ ಬಳಿ ತಲುಪಿದಾಗ,ಎದುರಿನಿಂದ ಬಂದ ಕಾರು (ಟಿಎನ್-72ಬಿಎಲ್-1759)ಹನೀಫ್ರವರು ಚಲಾಯಿಸುತ್ತಿದ್ದ ರಿಕ್ಷಾಗೆ ಡಿಕ್ಕಿಯಾಗಿದೆ.ಡಿಕ್ಕಿಯ ರಭಸಕ್ಕೆ ರಿಕ್ಷಾ ಉರುಳಿ ಬಿದ್ದು ಹನೀಫ್ ಮತ್ತು ರಿಕ್ಷಾದಲ್ಲಿದ್ದರು ಗಾಯಗೊಂಡಿದ್ದಾರೆ.ರಿಕ್ಷಾ ಜಖಂಗೊಂಡಿದೆ.ಗಂಭೀರ ಗಾಯಗೊಂಡಿದ್ದ ಹನೀಫ್ ಅವರ ಪುತ್ರಿ ಸಜ್ವಾ ಫಾತಿಮಾರವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಗಂಭೀರ ಗಾಯಗೊಂಡಿದ್ದ ಹನೀಫ್ ಅವರ ಅತ್ತೆ ಝುಲೈಕಾರವರು ಚಿಕಿತ್ಸೆಗೆ ಸ್ಪಂದಿಸದೆ ಮಂಗಳೂರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.ಕಾರು ಚಾಲಕ ಲಕ್ಷ್ಮೀಬದಿರಾಜು ಅವರು ಸಣ್ಣಪುಟ್ಟ ಗಾಯದೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.ಕಾರಿನ ಎದುರುಭಾಗಕ್ಕೆ ಹಾನಿಯಾಗಿದೆ.ಕಾರು ಚಾಲಕ ಬ್ಯಾಂಕ್ ಅಧಿಕಾರಿ ಎಂದು ತಿಳಿದು ಬಂದಿದೆ.ಕಾರು ಚಾಲಕ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಕಾರನ್ನು ತಪ್ಪು ಬದಿಯಲ್ಲಿ ಚಲಾಯಿಸಿಕೊಂಡು ಬಂದು ರಿಕ್ಷಾಗೆ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಉರುಳಿ ಬಿದ್ದಿರುವುದಾಗಿ ರಿಕ್ಷಾ ಚಾಲಕ ಬನ್ನೂರು ಹನೀಫ್ ಅವರು ನೀಡಿದ ದೂರಿನಂತೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ 281,125(ಎ),125(ಬಿ),106 ಬಿ.ಎನ್.ಎಸ್ 2023 ರಂತೆ ಪ್ರಕರಣ(ಅ.ಕ್ರ.121/2025) ದಾಖಲಾಗಿದೆ.
