ಸಾವಿನಲ್ಲೂ ಮತ್ತೊಬ್ಬರಿಗೆ ನೆರವಾಗಬಹುದಲ್ಲವೇ?

0

ಅದೊಂದು ಸುಟ್ಟ ಗಾಯಾಳುಗಳ ವಾರ್ಡ್. ಒಂದೆಡೆ ಬೆಂಕಿಯ ಅನಾಹುತದಲ್ಲಿ ಮಕ್ಕಳಾದಿಯಾಗಿ ಹೆಂಗಸರು ಮತ್ತು ಪುರುಷರನೇಕರು ತಮ್ಮ ಮೈ ಕೈಗಳನ್ನು ಅರೆಬರೆಯಾಗಿ ಸುಟ್ಟುಕೊಂಡು ಉರಿ ಹಾಗೂ ನೋವಿನ ಯಾತನೆಯಿಂದ ನರಳಾಡುತ್ತಿದ್ದಾರೆ. ಇನ್ನೊಂದೆಡೆ ಯುವತಿಯೊಬ್ಬಳು ಆಸಿಡ್ ದಾಳಿಗೆ ಒಳಗಾಗಿ ಮುಖ ಹಾಗೂ ಎದೆಯ ಭಾಗವೆಲ್ಲಾ ಸುಟ್ಟುಹೋಗಿ ಸಾವು ಬದುಕಿನೊಂದಿಗೆ ಹೋರಾಡುತ್ತಿದ್ದಾಳೆ. ಮತ್ತೊಂದೆಡೆ ಗೃಹಿಣಿಯೊಬ್ಬಳು ಮನೆಯಲ್ಲಿ ಅಡುಗೆ ಮಾಡುವಾಗ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ದೇಹವೆಲ್ಲಾ ಸುಟ್ಟ ಗಾಯಗಳಿಂದ ಬೊಬ್ಬೆ ಎದ್ದು ತನ್ನ ಒಂದು ವರ್ಷದ ಮಗುವಿನೊಂದಿಗೆ ಅರೆ ಪ್ರಜ್ಞಾವಸ್ಥೆಯಲ್ಲಿ ಮುಲುಗುತ್ತಿದ್ದಾಳೆ. ಈ ಆರ್ತನಾದ ಕೇಳಿ ಅದನ್ನು ನೋಡಿದವರು ”ನರಕ ಎಂದರೆ ಇದೇನಾ!?, ಸಾಕಪ್ಪಾ.. ಸಾಕು ಈ ಯಾತನೆ” ಎನ್ನುವಂತಿದೆ.

ಇವರುಗಳು ಗುಣಮುಖರಾಗಿ ಆಸ್ಪತ್ರೆಯಿಂದ ಹೊರಬಂದರೂ ಸುಟ್ಟ ಗಾಯಗಳ ಕಲೆಯಿಂದಲೊ, ಚರ್ಮ ಸುಕ್ಕುಗಟ್ಟಿ ಮುದುಡಿ ತಿರುಚಿಕೊಂಡ ಮುಖ ಕೈ ಕಾಲುಗಳಿಂದಲೊ ಬದುಕನ್ನು ಸಾಗಿಸಬೇಕಿದೆ. ಹೀಗೆ ಇವರು ತಮ್ಮದಲ್ಲದ ತಪ್ಪಿನಿಂದಾದ ಅವಘಡದಿಂದ ನೋಡುಗರಿಗೆ ವಿಕಾರವೆಂಬಂತೆಯೇ ಜೀವಿಸಬೇಕೆ? ಮರಳಿ ಮೊದಲಿನ ಸಹಜ ಸುಂದರತೆಯನ್ನು ಪಡೆಯುವಂತಾದರೆ ಅದೆಷ್ಟು ಚೆನ್ನವಲ್ಲವೆ? ಹೌದು ಆದರೀಗ ಅದು ಸಾಧ್ಯವಿದೆ! ಅವರಿಗೆ ಬೇಕಾಗಿರುವುದು ಸುಸ್ಥಿತಿಯಲ್ಲಿರುವ ಆರೋಗ್ಯವಂತ ಚರ್ಮದ ಒಂದು ಹೊದಿಕೆ. ನಾವು ಸತ್ತ ಮೇಲೆ ನಮ್ಮ ಉಪಯೋಗಕ್ಕೆ ಬಾರದ ನಮ್ಮ ಚರ್ಮವನ್ನು ಅವರಿಗೆ ನೀಡಿದರೆ ಅವರೂ ಮೊದಲಿನಂತೆಯೇ ಕಂಗೊಳಿಸಬಲ್ಲರು. ಹೀಗೆ ಇನ್ನೂ ಹಲವು ಅಂಗಾಂಗಗಳಿಲ್ಲದೆಯೊ ಅಥವಾ ಊನದಿಂದಾಗಿಯೊ ಇಲ್ಲವೆ ಸಮರ್ಪಕವಾಗಿ ತನ್ನ ಕೆಲಸವನ್ನು ಮಾಡುವ ಸಾಮರ್ಥ್ಯವನ್ನು ಕಳೆದುಕೊಂಡ ಅಂಗಗಳಿಂದ ಬದುಕಿನಲ್ಲಿ ನೋವನ್ನೂ ಕಷ್ಟವನ್ನೂ ಅನುಭವಿಸುತ್ತಾ ಬಾಳುತ್ತಿರುವವರಿಗೆ ನಾವು ಸತ್ತ ನಂತರ ನಮ್ಮ ದೇಹದ ವಿವಿಧ ಅಂಗಗಳನ್ನು (ಹೇಗಿದ್ದರೂ ನಮಗಾಗ ಅವು ಉಪಯೋಗಕ್ಕೆ ಬಾರದವು) ಅಂತಹವರಿಗೆ ಅಳವಡಿಸುವುದರ ಮೂಲಕ ಅವರಲ್ಲಿ ಬೆಳಕನ್ನೂ, ಸೌಂದರ್ಯವನ್ನೂ ಹಾಗೂ ಶಕ್ತಿಯನ್ನು ತುಂಬಬಹುದಾದರೆ ನಾವು ಆ ದಿಕ್ಕಿನಲ್ಲಿ ಯೋಚಿಸಬಾರದೇಕೆ? ನಮ್ಮಂತೆಯೇ ಅವರೂ ಇರಲೆಂದು ನಮ್ಮ ದೇಹದ ಅಂಗಗಳನ್ನು ಕೊಟ್ಟು ಸಹಕರಿಸಬಾರದೇಕೆ? ಧಾರ್ಮಿಕ ಅಥವಾ ಭಾವನಾತ್ಮಕ ಕಟ್ಟುಪಾಡುಗಳಂತೆ ನಮ್ಮ ದೇಹವನ್ನು ಹಿಡಿ ಬೂದಿಯಾಗಿಯೊ ಅಥವಾ ಮಣ್ಣ ಗುಪ್ಪೆಯಾಗಿಸುವ ಬದಲು ಮತ್ತೊಬ್ಬನ ಆನಂದಕ್ಕೆ ಕಾರಣವಾಗಬಾರದೇಕೆ? ನಮ್ಮ ಪೂರ್ವಜರಾದ ದಧೀಚಿ ಮಹರ್ಷಿಯು ತನ್ನ ಬೆನ್ನೆಲುಬನ್ನೂ ಮತ್ತು ಶಿಬಿ ಚಕ್ರವರ್ತಿಯು ತನ್ನ ತೊಡೆಯ ಮಾಂಸ ಖಂಡವನ್ನೂ ದಾನ ಮಾಡಿದುದರಿಂದ ಪ್ರೇರಣೆಗೊಳ್ಳಬಾರದೇಕೆ? ಇನ್ನೂ ನಮ್ಮ ಮನ ಒಪ್ಪದಿದ್ದರೆ, ಅವರ ಸ್ಥಾನದಲ್ಲಿ ನಮ್ಮನ್ನು ನಾವೇ ಇರಿಸಿ, ಮತ್ತೊಬ್ಬನಾರೊ ನಮಗದನ್ನು ಕೊಟ್ಟಾಗ ನಮಗಾಗುವ ಆನಂದವನ್ನಾದರೂ ಕಲ್ಪಿಸಿಕೊಳ್ಳಬಾರದೇಕೆ?

ಹೀಗೆ ನಮ್ಮ ಮೆದುಳು, ಕಣ್ಣು, ಶ್ವಾಸಕೋಶ, ಹೃದಯ, ಯಕೃತ್, ಕರುಳು, ಮೂತ್ರಪಿಂಡ, ಅಸ್ಥಿ ಮಜ್ಜೆ ಹಾಗೂ ಚರ್ಮವನ್ನಷ್ಟೇ ಅಲ್ಲದೆ ಇಡೀ ದೇಹವನ್ನೇ ದಾನ ಮಾಡಿ ಹಲವರ ದೈಹಿಕ ನ್ಯೂನತೆಗಳನ್ನು ತುಂಬಿ ಅವರ ಬದುಕಿಗೆ ನೆರವಾಗಬಾರದೇಕೆ? “ಪರೋಪಕಾರಾರ್ಥಂ ಇದಂ ಶರೀರಂ” ಎಂಬುದನ್ನು ನಮ್ಮ ಸಾವಿನ ನಂತರವೂ ನೆರವೇರಿಸಬಾರದೇಕೆ? ಅಂಗಾಂಗಗಳನ್ನು ಸ್ವೀಕರಿಸುವ ಕೇಂದ್ರಗಳು ಈಗ ಎಲ್ಲಾ ಜಿಲ್ಲಾ ಮಟ್ಟದ ಆಸ್ಪತ್ರೆಗಳಲ್ಲೂ ಲಭ್ಯವಿದೆ. ಕೊಡುವವನು ಇಚ್ಛಿಸಿದ್ದರೂ ಅದನ್ನು ನೆರವೇರಿಸುವ ಜವಾಬ್ದಾರಿಯು ಆತನ ಸಮೀಪವಿರುವ ಆಪ್ತವಲಯದ್ದಾಗಿರುತ್ತದೆ. ನಾವು ಇವೆರಡೂ ಆಗುವಂತೆ ಬದಲಾಗಬಾರದೇಕೆ?

ಡಾ. ವರ್ಷಿಣಿ ಶೆಣೈ

ಡಾ. ವರ್ಷಿಣಿ ಶೆಣೈ, BHMS, SCPH plus
ವಿಜಯ ಹೋಮಿಯೋ ಕ್ಲಿನಿಕ್, ಪುತ್ತೂರು ಮತ್ತು ಬೆಳ್ಳಾರೆ
Ph. 9740681381
E-mail: drvarshinishenoy@gmail.com

LEAVE A REPLY

Please enter your comment!
Please enter your name here