ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಮತ್ತು ಪ್ರಗತಿ ಸ್ಪೆಶಾಲಿಟಿ ಆಸ್ಪತ್ರೆ ಪುತ್ತೂರು ಇದರ ಸಹಯೋಗದೊಂದಿಗೆ ನಿರಂತರ ಮಾಸಿಕ ಉಚಿತ ಆರೋಗ್ಯ ತಪಾಸಣಾ ಶಿಬಿರವು ನ.1 ರಂದು ಆದಿತ್ಯವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಬೊಳ್ವಾರು ಪ್ರಗತಿ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಜರಗಿದ್ದು ಈ ಶಿಬಿರದಲ್ಲಿ ನೂರಕ್ಕೂ ಮಿಕ್ಕಿ ಫಲಾನುಭವಿಗಳು ಭಾಗವಹಿಸಿದ್ದರು.
ರಕ್ತದೊತ್ತಡ, ಬಿ.ಪಿ ಪರೀಕ್ಷೆ, ಮಧುಮೇಹ, ಸಕ್ಕರೆ ಕಾಯಿಲೆ ತಪಾಸಣೆ, ಥೈರಾಯಿಡ್, ಮಕ್ಕಳ ಆರೋಗ್ಯ ತಪಾಸಣೆ, ಹೃದಯದ ತಪಾಸಣೆಗಾಗಿ ಇಸಿಜಿ, ಸೇವ್ ಹಾರ್ಟ್ ಪರೀಕ್ಷೆ,, ಕ್ಯಾಲ್ಸಿಯಂ ಪರೀಕ್ಷೆ, ಸ್ತನ ಕಾಯಿಲೆ ತಪಾಸಣೆ, ನರ ಸೂಕ್ಷ್ಮತೆ ಪರೀಕ್ಷೆ ನಡೆದಿದ್ದು ಆಸ್ಪತ್ರೆಯ ಮ್ಯಾನೇಜಿಂಗ್ ಡೈರೆಕ್ಟರ್ ಡಾ.ಶ್ರೀಪತಿ ರಾವ್ ರವರು ಫಲಾನುಭವಿಗಳಿಗೆ ಸೂಕ್ತ ಚಿಕಿತ್ಸಾ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಡಾ.ಶ್ರೀಪ್ರಕಾಶ್ ಬಿ, ಕಾರ್ಯದರ್ಶಿ ಪ್ರೊ|ಸುಬ್ಬಪ್ಪ ಕೈಕಂಬ, ಸಮುದಾಯ ಸೇವಾ ವಿಭಾಗದ ನಿರ್ದೇಶಕ ಗುರುರಾಜ್ ಕೊಳತ್ತಾಯ, ಪೂರ್ವಾಧ್ಯಕ್ಷ ರಫೀಕ್ ಎಂ.ಜಿ, ಮಾಜಿ ಕಾರ್ಯದರ್ಶಿ ಮನೋಜ್ ಟಿ.ವಿರವರು ಉಪಸ್ಥಿತರಿದ್ದರು.
