





ಪುತ್ತೂರು: ಬಂಟ್ವಾಳ ತಾಲೂಕಿನ ಮಾಣಿ ಸಮೀಪದ ಬುಡೋಳಿ-ಗಡಿಯಾರ ಪ್ರದೇಶದಲ್ಲಿನ ಪ್ರತಿಷ್ಠಿತ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.



ಕನ್ನಡ ರಾಜ್ಯೋತ್ಸವವನ್ನು ಇಲ್ಲಿನ ವಿದ್ಯಾರ್ಥಿಗಳು ಕನ್ನಡದ ವೈವಿಧ್ಯಮಯ ಸಾಹಿತ್ಯ, ಸಂಗೀತ, ಭಾಷಣ, ಪ್ರಾರ್ಥನೆ ಮತ್ತು ಕವನ ವಾಚನದ ಮೂಲಕ ಕಲಾತ್ಮಕವಾಗಿ ಆಚರಿಸಿಕೊಂಡರು.






ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಶಾಲಾ ಸಂಚಾಲಕ ಅಬ್ದುಲ್ ಖಾದರ್ ಕುಕ್ಕಾಜೆ ರವರು ಸಸಿಗೆ ನೀರೆರೆಯುವುದರೊಂದಿಗೆ ಸಾಂಕೇತಿಕವಾಗಿ ಉದ್ಘಾಟಿಸಿ, ಕನ್ನಡ ಭಾಷೆಯ ಇತಿಹಾಸ ಹಾಗೂ ಭಾಷಾ ಸಿರಿತನವನ್ನು ವಿವರಿಸುತ್ತಾ ನಮ್ಮ ಕನ್ನಡ ನಾಡಿನ ಸಂಸ್ಕೃತಿಯ ಭಾವನಾತ್ಮಕ ಹಾಗೂ ಕನ್ನಡ ಭಾಷೆಯ ಸೊಬಗಿನ ಆಂತರ್ಯವನ್ನು ಹೊರ ಹೊಮ್ಮಿಸಲು ಆಂಗ್ಲ ಸೇರಿದಂತೆ ಇನ್ನಾವ ಭಾಷೆಗೂ ಅಸಾಧ್ಯ ಅಲ್ಲಿನ ವ್ಯಾಕರಣ, ಛಂದಸ್ಸು, ಪ್ರಾಸ, ಸಂಧಿಗಳು ಹೀಗೆ ಹಲವಾರು ವೈವಿಧ್ಯಮಯ ಸಾಹಿತ್ಯ ರಚನೆಗಳ ಭಾವಗಳನ್ನು ಇತರ ಭಾಷೆಯಲ್ಲಿ ಮೂಡಿಸಲಾಗದು ಹೀಗೆ ಕನ್ನಡಕ್ಕೆ ಕನ್ನಡವೇ ಸರಿಸಾಟಿ ಎಂದು ಹೇಳಿದರು. ತಮ್ಮ ಆಂಗ್ಲ ಮಾಧ್ಯಮ ಶಾಲೆಯಲ್ಲಿನ ವಿದ್ಯಾರ್ಥಿಗಳ ಕನ್ನಡದಲ್ಲಿನ ಇಷ್ಟೊಂದು ಆಸಕ್ತಿ ಈ ರಾಜ್ಯೋತ್ಸವದಲ್ಲಿ ಹೊರಹೊಮ್ಮಿದೆ ಎಂದು ತಮ್ಮ ವಿದ್ಯಾರ್ಥಿಗಳನ್ನು ಪ್ರಶಂಸಿಸಿ ಶುಭ ಹಾರೈಸಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಮುಖ್ಯ ಶಿಕ್ಷಕಿ ಆಮಿನಾ ಬಾನು ಹಾಗೂ ಅವರ ಸಹಾಯಕ ಶಿಕ್ಷಕಿ ಅಲಿಮತ್ ಸಅದಿಯಾ ವಿದ್ಯಾರ್ಥಿಗಳಿಗೆ ಕನ್ನಡ ರಾಜ್ಯೋತ್ಸವದ ಶುಭಕೋರಿದರು. ಕನ್ನಡ ಶಿಕ್ಷಕಿ ಮೀನಾಕ್ಷಿ ಸ್ವಾಗತಿಸಿದರು. ಶಿಕ್ಷಕಿ ಸಮ್ರೀನಾ ಧನ್ಯವಾದವಿತ್ತರು ಹಾಗೂ ಶಿಕ್ಷಕಿ ಮುಬೀನಾ ಕಾರ್ಯಕ್ರಮ ನಿರೂಪಿಸಿದರು.










