ಉಪ್ಪಿನಂಗಡಿ: ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ (ಗ್ರಾಮಾಂತರ) ಇದರ ಪ್ರಧಾನ ಕಾರ್ಯದರ್ಶಿಯನ್ನಾಗಿ 34 ನೆಕ್ಕಿಲಾಡಿಯ ಅನಿ ಮಿನೇಜಸ್ ಅವರನ್ನು ನೇಮಕಗೊಳಿಸಿ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯ ರೆಡ್ಡಿ ಆದೇಶಿಸಿದ್ದಾರೆ.

ಸಾಮಾಜಿಕ ಹೋರಾಟಗಾರರಾಗಿ ಗುರುತಿಸಿಕೊಂಡಿರುವ ಅನಿ ಮಿನೇಜಸ್ ಅವರು ಒಂದು ಅವಧಿಗೆ 34 ನೆಕ್ಕಿಲಾಡಿ ಗ್ರಾಮ ಪಂಚಾಯತ್ ಸದಸ್ಯೆಯಾಗಿ ಆಯ್ಕೆಯಾಗಿದ್ದು, ಈ ಸಂದರ್ಭ ತನಗೆ ಬರುವ ತಿಂಗಳ ಗೌರವ ಧನವನ್ನು ಬಡ ಕುಟುಂಬಗಳಿಗೆ ನೀಡುವ ಮೂಲಕ ಸಾಮಾಜಿಕ ಕಳಕಳಿ ಮೆರೆದಿದ್ದರು. ನಮ್ಮೂರು ನೆಕ್ಕಿಲಾಡಿ ಸಂಘಟನೆಯ ಕಾರ್ಯದರ್ಶಿಯಾಗಿ ಹಲವು ಸಮಾಜಮುಖಿ ಕೆಲಸಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು.
34 ನೆಕ್ಕಿಲಾಡಿ ಗ್ರಾಮದ ಬೀತಲಪ್ಪುವಿನಲ್ಲಿ ಸುಶೀಲಾ ಅವರ ಮನೆ ಕುಸಿದು ಬಿದ್ದ ಸಂದರ್ಭ ಸಮಾನ ಮನಸ್ಕ ದಾನಿಗಳ ನೆರವು ಪಡೆದು ಸುಮಾರು ಒಂದು ಲಕ್ಷದ ಮೂವತ್ತು ಸಾವಿರ ರೂ. ವೆಚ್ಚದಲ್ಲಿ ಅವರ ಮನೆಯನ್ನು ಪುನರ್ ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಇವರು, ಬೀತಲಪ್ಪುವಿನ ಉಷಾ ಅವರ ಮನೆಯ ಮೇಲ್ಚಾವಣಿಯನ್ನು ಸುಮಾರು 80 ಸಾವಿರ ರೂ. ವೆಚ್ಚದಲ್ಲಿ ದಾನಿಗಳ ನೆರವಿನಲ್ಲಿ ನಿರ್ಮಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪ್ರಸ್ತುತ ಇವರು 34 ನೆಕ್ಕಿಲಾಡಿ ವಲಯ ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದು, ಪಕ್ಷ ಸಂಘಟಿಸುವಲ್ಲಿ ಮತ್ತು ಗ್ರಾಮದ ಅಭಿವೃದ್ಧಿಗೆ ಸರಕಾರದಿಂದ ಅನುದಾನ ತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರಲ್ಲದೆ, ನೆಕ್ಕಿಲಾಡಿ ಗ್ರಾಮದ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಅಲ್ಕಾ ಲಂಬಾ ಅವರ ನೇತೃತ್ವದಲ್ಲಿ ಮಹಿಳೆಯರನ್ನು ರಾಜಕೀಯವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ದೇಶದ ಆಡಳಿತದ ಮುಖ್ಯವಾಹಿನಿಗೆ ತರಲು ಹಾಗೂ ಪಕ್ಷದ ಸಂಘಟನೆ ಹಾಗೂ ಬಲವರ್ಧನೆಗಾಗಿ ದುಡಿಯಲು ಸೌಮ್ಯ ರೆಡ್ಡಿಯವರ ಆದೇಶದಂತೆ ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ (ಗ್ರಾ) ಇದರ ಅಧ್ಯಕ್ಷೆ ಉಷಾ ಅಂಚನ್ ಅವರು ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಅನಿ ಮಿನೇಜಸ್ ಅವರನ್ನು ನೇಮಕಗೊಳಿಸಿದ್ದಾರೆ.