ಪುತ್ತೂರು: ಸಾಮೆತ್ತಡ್ಕದಲ್ಲಿ ನಿರ್ಮಾಣಗೊಳ್ಳಲಿರುವ ನಗರ ಆರೋಗ್ಯ ಕೇಂದ್ರವನ್ನು ಪಶ್ಚಿಮಾಭಿಮುಖವಾಗಿ ನಿರ್ಮಿಸಿ ನಾಗರಿಕರಿಗೆ, ಚಿಕಿತ್ಸೆಗೆ ಬರುವ ರೋಗಿಗಳಿಗೆ ಅನುಕೂಲ ಮಾಡಿಕೊಡುವಂತೆ ಪುತ್ತೂರು ನಗರಸಭೆ ವ್ಯಾಪ್ತಿಯ ನಿವಾಸಿಗಳಿಂದ ನಗರಸಭೆಯ ಪೌರಾಯುಕ್ತರಿಗೆ ವಿದ್ಯಾ ಕಾಳೆರವರಿಗೆ ನ.12 ರಂದು ಮನವಿ ಮಾಡಲಾಯಿತು.

ಪುತ್ತೂರು ನಗರದ ಸಾಮೆತ್ತಡ್ಕ ಎಂಬಲ್ಲಿ ನಗರ ಆರೋಗ್ಯ ಕೇಂದ್ರಕ್ಕೆ ಸರಕಾರದಿಂದ ಅನುದಾನ ಬಿಡುಗಡೆಗೊಂಡಿದ್ದು, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈರವರು ಇದರ ಶಿಲಾನ್ಯಾಸವನ್ನು ಇತ್ತೀಚೆಗೆ ನೆರವೇರಿಸಿರುತ್ತಾರೆ. ಸದರಿ ಆರೋಗ್ಯ ಕೇಂದ್ರವು ನಿರ್ಮಾಣಗೊಳ್ಳಲಿರುವ ನಿವೇಶನದ ಬದಿಯಿಂದ “ಯು” ಆಕಾರದಲ್ಲಿ ಸಾರ್ವಜನಿಕ ರಸ್ತೆಯು ಹಾದು ಹೋಗುತ್ತದೆ. ಇದು ತೀರಾ ಅಪಾಯಕಾರಿ ತಿರುವು ಆಗಿರುತ್ತದೆ.
ಆದುದರಿಂದ ಪ್ರಸಕ್ತ ನಿರ್ಮಾಣಗೊಳ್ಳಲಿರುವ ಆರೋಗ್ಯ ಕೇಂದ್ರದ ಎತ್ತರದಲ್ಲಿರುವ ನಿವೇಶನವನ್ನು ತಗ್ಗಿಸಿ ಸಮತಟ್ಟು ಮಾಡಿ ಆರೋಗ್ಯ ಕೇಂದ್ರದ ಮುಂದುಗಡೆಯಿಂದ ರಸ್ತೆಯನ್ನು ನೇರವಾಗಿ ನಿರ್ಮಿಸಿ ಸಾರ್ವಜನಿಕ ಸಂಚಾರಕ್ಕೆ ಹಾಗೂ ಆರೋಗ್ಯ ಕೇಂದ್ರಕ್ಕೆ ಬರುವ ನಾಗರಿಕರಿಗೆ, ರೋಗಿಗಳಿಗೆ ಅನುಕೂಲವಾಗುವಂತೆ ಪೂರ್ವಾಭಿಮುಖವಾಗಿ ನಿರ್ಮಿಸಲು ಉದ್ಧೇಶಿಸಿರುವ ಕಟ್ಟಡವನ್ನು(ಪಿಡಬ್ಲ್ಯೂಡಿ ವಸತಿ ಗೃಹಕ್ಕೆ) ಪಶ್ಚಿಮಾಭಿಮುಖವಾಗಿ ನಿರ್ಮಿಸಿ ನಾಗರಿಕರಿಗೆ ಹಾಗೂ ಚಿಕಿತ್ಸೆಗೆ ಬರುವ ರೋಗಿಗಳಿಗೆ ಅನುಕೂಲ ಮಾಡಿಕೊಡುವಂತೆ ಮನವಿಯಲ್ಲಿ ವಿನಂತಿಸಲಾಗಿದೆ.
ಮನವಿಯ ಪ್ರತಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ದಿನೇಶ್ ಗುಂಡೂರಾವ್, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಮಂಗಳೂರಿನ ಕರ್ನಾಟಕ ಆರೋಗ್ಯ ವ್ಯವಸ್ಥೆ ಅಭಿವೃದ್ಧಿ ಯೋಜನೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯಪಾಲಕ ಅಭಿಯಂತರರಿಗೆ, ಪುತ್ತೂರು ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈರವರಿಗೆ ಕಳುಹಿಸಿ ಕೊಡಲಾಗಿದೆ.
ಮನವಿ ನೀಡುವ ಸಂದರ್ಭದಲ್ಲಿ ಪುತ್ತೂರು ನಗರಸಭಾ ನಿವಾಸಿಗಳಾದ ಮೌರಿಸ್ ಮಸ್ಕರೇನ್ಹಸ್ ಸಾಮೆತ್ತಡ್ಕ, ಚಂದ್ರಶೇಖರ್(ಅಶ್ವಿನಿ) ಸಾಮೆತ್ತಡ್ಕ, ಮೆಲ್ವಿನ್ ಫೆರ್ನಾಂಡೀಸ್ ದರ್ಬೆ, ಸೀತಾರಾಮ ಚಿಕ್ಕಪುತ್ತೂರು, ಪಾವ್ಲ್ ಮೊಂತೇರೊ ಕಲ್ಲಾರೆ ಉಪಸ್ಥಿತರಿದ್ದರು.