ಸರ್ದಾರ್ ವಲ್ಲಭಭಾಯಿ ಪಟೇಲ್ 150ನೇ ಜನ್ಮದಿನಾಚರಣೆ ಪ್ರಯುಕ್ತ ಜಿಲ್ಲಾ ಮಟ್ಟದ ಪಾದಯಾತ್ರೆ

0

ಪುತ್ತೂರು: ಭಾರತ ಸರಕಾರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ಜಿಲ್ಲಾಡಳಿತ ದಕ್ಷಿಣ ಕನ್ನಡ, ಮೇರಾ ಯುವ ಭಾರತ್ ದಕ್ಷಿಣ ಕನ್ನಡ ಜಿಲ್ಲೆ, ದಕ್ಷಿಣ ಕನ್ನಡ ಜಿಲ್ಲಾ ಯುವಜನ ಒಕ್ಕೂಟ, ರಾಷ್ಟ್ರೀಯ ಸೇವಾ ಯೋಜನೆ, ಎನ್.ಸಿ.ಸಿ, ರೆಡ್‌ಕ್ರಾಸ್, ಸ್ಕೌಟ್ ಮತ್ತು ಗೈಡ್ಸ್, ರೋವರ್ಸ್ ಮತ್ತು ರೇಂಜರ್ಸ್ ಮತ್ತು ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಸರ್ದಾರ್ ವಲ್ಲಭಭಾಯಿ ಪಟೇಲ್ ರವರ 150 ನೇ ಜನ್ಮದಿನಾಚರಣೆ ಪ್ರಯುಕ್ತ ನ.12 ರಂದು ಪುತ್ತೂರಿನಲ್ಲಿ ಜಿಲ್ಲಾ ಮಟ್ಟದ ಪಾದಾಯಾತ್ರೆ ನಡೆಯಿತು.


ನೆಹರು ನಗರದ ವಿವೇಕಾನಂದ ಕಾಲೇಜು ಬಳಿಯ ವಿವೇಕಾನಂದರ ಪ್ರತಿಮೆ ಬಳಿಯಿಂದ ಹೊರಟ ಏಕತಾ ನಡಿಗೆಗೆ ಸಂಸದ ಕ್ಯಾ.ಬ್ರಿಜೇಶ್ ಚೌಟ ಚಾಲನೆ ನೀಡಿದರು. ಅಲ್ಲಿಂದ ಹೊರಟ ಏಕತಾ ನಡಿಗೆಯು ನೆಹರು ನಗರ, ಮಂಜಲ್ಪಡ್ಪು, ಬೊಳುವಾರು, ಮುಖ್ಯರಸ್ತೆಯಾಗಿ ಮೂಲಕ ಸಾಗಿ ಪ್ರಧಾನ ಅಂಚೆ ಕಚೇರಿ ಮುಂಭಾಗದಿಂದಾಗಿ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದ ನಟರಾಜ ವೇದಿಕೆಯಲ್ಲಿ ಸಂಪನ್ನಗೊಂಡಿತು. ಬಳಿಕ ನಟರಾಜ ವೇದಿಕೆಯಲ್ಲಿ ಸಮಾರೋಪ ಸಮಾರಂಭದ ಸಭಾ ಕಾರ್ಯಕ್ರಮ ನಡೆಯಿತು.


ಏಕತಾ ನಡಿಗೆಗೆ ಚಾಲನೆ ನೀಡಿ, ಸಮಾರೋಪ ಸಮಾರಂಭವನ್ನು ಉದ್ಘಾಟಿಸಿದ ಸಂಸದ ಕ್ಯಾ.ಬ್ರಿಜೇಶ್ ಚೌಟ ಮಾತನಾಡಿ, ಏಕತೆ ಎನ್ನುವುದು ಯಾವುದೋ ಒಂದು ಸಂದರ್ಭಕ್ಕೆ ಸೀಮಿತವಲ್ಲ. ಅದು ನಿರಂತರವಾಗಿರುವ ಪ್ರಕ್ರಿಯೆಗಳಾಗಬೇಕು. ಮನಸ್ಸು ಮನಸ್ಸುಗಳನ್ನು ಜೋಡಿಸುವ, ಹೃದಯಗಳನ್ನು ಬೆಸೆಯುವ ಕೆಸಲವಾಗಬೇಕು. ಆ ಮೂಲಕ ರಾಷ್ಟ್ರ ನಿರ್ಮಾಣದ ಕೆಲಸ ನಿತ್ಯ ನಿರಂತವಾಗಿರಬೇಕು. ಆಗ ಭಾರತ ಬಲೀಷ್ಟವಾಗಿ ಬೆಳೆದು ವಿಶ್ವಗುರುವಾಗಲು ಸಾಧ್ಯ ಎಂದರು. ವಿಶ್ವದ 4ನೇ ಆರ್ಥಿಕ ದೊಡ್ಡ ಶಕ್ತಿಯಾಗಿರುವ ಭಾರತದಲ್ಲಿ ಶೇ.65ರಷ್ಟು ಯುವ ಜನತೆಯಿದ್ದಾರೆ. ವಿಶ್ವಕ್ಕೆ ಅತೀ ದೊಡ್ಡ ಆರ್ಥಿಕ ಶಕ್ತಿಯಾಗಬಲ್ಲ ಸಾಮರ್ಥ್ಯ ನಮ್ಮಲ್ಲಿದ್ದು ನಾವೆಲ್ಲಾ ಏಕತಾ ಮನಸ್ಸಿನಿಂದ ಒಂದಾಗಬೇಕು. ಭಾಷೆ. ಜಾತಿ, ಧರ್ಮ ಬಿಟ್ಟಿ ನಾವೆಲ್ಲಾ ಭಾರತೀಯರು ಎಂಬ ಭಾವನೆ ಬೆಳೆಸಿಕೊಳ್ಳಬೇಕು. ಏಕತಾ ನಡಿಗೆಯ ಮೂಲಕ ಯುವ ಮನಸ್ಸುಗಳು ಒಂದಾಗಿ, ಏಕತೆಯಲ್ಲಿ ಬೆಳೆಯಬೇಕು ಎಂಬ ಉದ್ದೇಶದಿಂದ ಪ್ರಧಾನಿಯವರು ಏಕತಾ ನಡಿಗೆಯನ್ನು ಆಯೋಜಿಸಿದ್ದಾರೆ. ದೇಶಕ್ಕೆ ಎಲ್ಲಾ ಕ್ಷೇತ್ರಗಳಲ್ಲಿಯೂ ನಾಯಕತ್ವದ ಆವಶ್ಯಕತೆಯಿದ್ದು ವಿದ್ಯಾರ್ಥಿಗಳು ಸರ್ದಾರ್ ವಲ್ಲಭ ಬಾಯಿ ಪಟೇಲ್‌ರವರ ಜೀವನ, ವ್ಯಕ್ತಿತ್ವವನ್ನು ತಿಳಿದುಕೊಂಡು ಅವರಿಂದ ಪ್ರೆರೇಪಣೆಗೊಂಡ ರಾಷ್ಟ್ರ ನಿರ್ಮಾಣದಲ್ಲಿ ಜೋಡಿಸಿಕೊಳ್ಳಬೇಕು. ನಶಾ ಮುಕ್ತ, ಆತ್ಮನಿರ್ಭರ ಭಾರತ ನಿರ್ಮಾಣದ ಪ್ರತಿಜ್ಞೆ ಸ್ವೀಕರಿಸಬೇಕು ಎಂದು ಹೇಳಿದರು.


ಪ್ರತಿಜ್ಞಾ ವಿಧಿ ಬೋಧಿಸಿದ ವಿಧಾನ ಪರಿಷತ್ ಸದಸ್ಯ ಕಿಶೋರ್ ಬೊಟ್ಯಾಡಿ ಮಾತನಾಡಿ, ಏಕತಾ ನಡಿಗೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳ ಪ್ರತಿ ನಡಿಗೆಯು ರಾಷ್ಟ್ರೀಯ ಏಕತೆಗೆ ಶಕ್ತಿ ತುಂಬಿದೆ. ಅದೇ ರೀತಿ ವಿದ್ಯಾರ್ಥಿ ಜೀವನವೂ ಗಟ್ಟಿಯಾಗಲಿ. ದೇಶದ ಏಕೀಕರಣಕ್ಕೆ ಕಾರಣರಾದ ಸರ್ದಾರ್ ವಲ್ಲಭ ಬಾಯಿ ಪಟೇಲ್‌ರವರು ಏಕೀಕರಣದ ಮಹಾಪುರುಷ. ಸಮಗ್ರತೆಯ ಮೇರು ಶಿಖರ. ಅವರ ಹಾದಿಯಲ್ಲಿ ಪ್ರಧಾನಿ ಮೋದಿಯರು ಭಾರತದ ಅಖಂಡತೆಗೆ ಹೆಜ್ಜೆ ಇಡುತ್ತಿದ್ದಾರೆ. ಅದೇ ರೀತಿಯಲ್ಲಿ ಎಲ್ಲರೂ ಒಂದಾಗಿ ಏಕತಾ ಮನಸ್ಸಿನಿಂದ ರಾಷ್ಟ್ರದ ಅಖಂಡತೆಗೆ ನಾವೆಲ್ಲರೂ ಹೆಜ್ಜೆಯಿಡಬೇಕಾದ ಆವಶ್ಯಕತೆಯಿದೆ ಎಂದು ಹೇಳಿದರು.


ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್, ಏಕತಾ ನಡಿಗೆಯ ಸಂಯೋಜಕರಾದ ಅರುಣ್ ಶೇಟ್, ನಂದನ್ ಮಲ್ಯ, ದಿನೇಶ್ ಅಮ್ಟೂರು, ವಿವೇಕಾನಂದ ಕಾಲೇಜಿನ ಎನ್‌ಎಸ್‌ಎಸ್ ಅಧಿಕಾರಿ ಅರುಣ್ ಪ್ರಕಾಶ್, ಫಿಲೋಮಿನಾ ಕಾಲೇಜಿ ಎನ್‌ಎಸ್‌ಎಸ್ ಅಧಿಕಾರಿ ಚಂದ್ರಶೇಖರ, ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ದಿನೇಶ್ ಸಾಲ್ಯಾನ್, ಮೈ ಭಾರತ್ ಆಡಳಿತಾಧಿಕಾರಿ ಜಗದೀಶ್, ಸ್ಕೌಟ್ಸ್ ಮತ್ತು ಗೈಡ್ಸ್‌ನ ಅಧಿಕಾರಿ ಸುನಿತಾ, ಉದ್ಯಮಿ ಸೀತಾರಾಮ ರೈ ಕೆದಂಬಾಡಿ ಗುತ್ತು, ಬಿಜೆಪಿ ಮುಖಂಡರಾದ ಯುವರಾಜ ಪೆರಿಯತ್ತೋಡಿ, ಸಂತೋಷ್ ರೈ ಕೈಕಾರ, ವಿರೂಪಾಕ್ಷ ಭಟ್, ನಾಗೇಶ್ ಟಿ.ಎಸ್., ಸಹಿತ ವಿವಿಧ ಶಾಲೆ, ಕಾಲೇಜುಗಳ ರಾಷ್ಟ್ರೀಯ ಸೇವಾ ಯೋಜನೆ, ಎನ್.ಸಿ.ಸಿ, ರೆಡ್ ಕ್ರಾಸ್, ಸ್ಕೌಟ್ ಮತ್ತು ಗೈಡ್ಸ್,ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳು ಮತ್ತು ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


ಕೇಂದ್ರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯದ ಜಿಲ್ಲಾ ಯುವ ಅಧಿಕಾರಿ ಉಲ್ಲಾಸ್ ಟಿ ಕೆ ಸ್ವಾಗತಿಸಿದರು. ಯುವಜನಸೇವಾ ಮತ್ತು ಕ್ರೀಡಾ ಇಲಾಖೆಯ ಸಂಯೋಜಕ ಶ್ರೀಕಾಂತ್ ಪೂಜಾರಿ ಬಿರಾವು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here