





ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳು ನಾಡಿಗೆ ಮಾದರಿ-ಸೋಮಶೇಖರ್ ಶೆಟ್ಟಿ


ನೆಲ್ಯಾಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಆಡಳಿತಕ್ಕೆ ಒಳಪಟ್ಟ ಕಾಂಚನ ಶ್ರೀ ಲಕ್ಷ್ಮೀನಾರಾಯಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೋಷಕರ ಸಭೆ ನಡೆಯಿತು.





ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯಶಿಕ್ಷಕ ಬಿ.ಸೋಮಶೇಖರ ಶೆಟ್ಟಿಯವರು ಮಾತನಾಡಿ, ಹೆತ್ತವರ ಜವಾಬ್ದಾರಿಯ ಬಗ್ಗೆ ವಿವರಿಸಿದರು. ಆಡಳಿತ ಮಂಡಳಿಯು ಈ ಶಾಲೆಗೆ ನೂತನ ವಿಸ್ತೃತ ಕಟ್ಟಡದೊಂದಿಗೆ ಆಧುನಿಕ ವ್ಯವಸ್ಥೆಗಳಾದ ಕಂಪ್ಯೂಟರ್, ವಾಚನಾಲಯ, ಪ್ರೊಜೆಕ್ಟರ್ ಸಹಿತ ವಿಜ್ಞಾನ ಪ್ರಯೋಗಾಲಯದ ವ್ಯವಸ್ಥೆ ಮಾಡಿ ಪೂರಕ ಸೌಲಭ್ಯಗಳನ್ನು ಒದಗಿಸಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಪ್ರಾಶಸ್ತ್ಯ ನೀಡಿದೆ. ಇದೇ ರೀತಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣ ಮತ್ತು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಜೀವನ ಮೌಲ್ಯ ಮತ್ತು ಜೀವನ ಕೌಶಲ್ಯತೆಗೆ ಒತ್ತು ನೀಡುತ್ತಿದೆ. ಅಲ್ಲದೆ ಸಾಕಷ್ಟು ಸಂಖ್ಯೆಯ ಶಿಕ್ಷಕರನ್ನು ಒದಗಿಸುತ್ತಿದೆ. ಶ್ರೀ ಕ್ಷೇತ್ರದ ಶಿಕ್ಷಣ ಸಂಸ್ಥೆಗಳು ನಾಡಿಗೆ ಮಾದರಿ ಆಗಿವೆ ಎಂದರು. ಕಲಿಕೆಗೆ ಮಾಧ್ಯಮ ಮುಖ್ಯ ಅಲ್ಲ, ಆಸಕ್ತಿ ಮುಖ್ಯ. ಅಂಕಗಳೇ ವ್ಯಕ್ತಿತ್ವ ಅಲ್ಲ, ಉತ್ತಮ ನಡವಳಿಕೆಯೇ ಶಿಕ್ಷಣದ ಆಶಯ ಪೋಷಕರು ಮಕ್ಕಳ ಸಾಧನೆಯನ್ನು ಪ್ರೋತ್ಸಾಹಿಸಿ, ತತ್ವಾದೇಶ, ತಿದ್ದಿ ತಪ್ಪುಗಳನ್ನು ಮನವರಿಕೆ ಮಾಡಿ, ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸ ಮಾಡಬೇಕು. ಶಾಲೆ ಊರಿನ ಹೆಮ್ಮೆ ಎಂಬ ಭಾವನೆ ಹೆತ್ತವರಿಗಿರಬೇಕು. ಶಿಕ್ಷಕರ ಜೊತೆ ನಿರಂತರ ಸಂಪರ್ಕದಿಂದ ಮಕ್ಕಳ ಪ್ರಗತಿಯ ಬಗ್ಗೆ ತಿಳಿದುಕೊಳ್ಳಬೇಕು ಎಂದು ಹೇಳಿದ ಬಿ.ಸೋಮಶೇಖರ ಶೆಟ್ಟಿ ಅವರು ಇಲ್ಲಿನ ಮುಖ್ಯ ಶಿಕ್ಷಕರ ತಂಡದ ಸ್ಫೂರ್ತಿದಾಯಕ ಕೆಲಸವನ್ನು ಶ್ಲಾಘಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ಮಧುಶ್ರೀ ಶಾಲಾ ಚಟುವಟಿಕೆ ಮತ್ತು ಆಡಳಿತ ಮಂಡಳಿಯ ವ್ಯವಸ್ಥೆಗೆ ಅಭಿನಂದನೆ ಸಲ್ಲಿಸಿದರು. ಶಾಲಾ ಮುಖ್ಯಶಿಕ್ಷಕ ಎ.ಲಕ್ಷ್ಮಣ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ಶಾಲಾ ಸೌಲಭ್ಯಗಳು, ಸಂಸ್ಥೆಯ ಪೂರಕ ವ್ಯವಸ್ಥೆಗಳ ಬಗ್ಗೆ, ಶಾಲೆಯ ಪ್ರಗತಿಯ ಬಗ್ಗೆ ಮಾಹಿತಿ ನೀಡಿದರು. ಡಿಎಂಸಿ ಮೇಲ್ವಿಚಾರಕ ವಸಂತರವರು ಶಾಲೆಯ ಹಿಂದಿನ ವ್ಯವಸ್ಥೆ ಮತ್ತು ಈಗಿನ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಿದರು. ಭಾರತೀಯ ಜೀವಾ ವಿಮಾ ನಿಗಮದ ಪುತ್ತೂರು ಶಾಖೆಯ ಮ್ಯಾನೇಜರ್ ಕೃಪಾಲ್ ಅವರು ಜೀವ ವಿಮೆಯ ಕೆಲವು ಯೋಜನೆಗಳ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿದರು.
ಗೌರವಾರ್ಪಣೆ:
ಶಾಲಾ ನೂತನ ಕಟ್ಟಡದ ನಿರ್ಮಾಣದ ಸಂದರ್ಭದಲ್ಲಿ ಕಟ್ಟಡ ಕಾಮಗಾರಿಯ ಮೇಲ್ವಿಚಾರಣೆಯ ಜವಾಬ್ದಾರಿ ನಿರ್ವಹಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಡಿಎಂಸಿ ವಿಭಾಗದ ಮೇಲ್ವಿಚಾರಕರಾದ ವಸಂತ ಗೌಡ, ಸುರೇಶ್ ಗೌಡ, ಕಟ್ಟಡದ ಇಲೆಕ್ಟ್ರಿಕಲ್ ಸೂಪರ್ ವೈಸರ್ ಸುಧೀರ್ ಅವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.
ಸಹಶಿಕ್ಷಕಿ ಪ್ರತಿಭಾ ಎ. ಸ್ವಾಗತಿಸಿ, ಸಹಶಿಕ್ಷಕಿ ಚೈತನ್ಯ ವಂದಿಸಿದರು. ಸಹಶಿಕ್ಷಕಿ ಸುಮಾ ಡಿ. ನಿರೂಪಿಸಿದರು. ಪೋಷಕರಿಗೆ ಬೆಳಗ್ಗಿನ ಉಪಹಾರ ಮತ್ತು ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಲಾಗಿತ್ತು.








