ರಾಮಕುಂಜ: ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಛೇರಿ ಬೆಂಗಳೂರು ಉತ್ತರ ಜಿಲ್ಲೆ ಇವರ ಆತಿಥ್ಯದಲ್ಲಿ ಬೆಂಗಳೂರು ಬಸವೇಶ್ವರ ನಗರದಲ್ಲಿ ನಡೆದ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟದ 17ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ದ.ಕ.ಜಿಲ್ಲೆಯನ್ನು ಪ್ರತಿನಿಧಿಸಿದ್ದ ರಾಮಕುಂಜ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯ ಬಾಲಕಿಯರ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದ್ದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ.

- ರಾಮಕುಂಜದ ಬಾಲಕಿಯರ ತಂಡವು ಮೊದಲ ಪಂದ್ಯದಲ್ಲಿ ಬೆಂಗಳೂರು ವಿರುದ್ಧ 52-50 ಅಂತರದ ಜಯ ಸಾಧಿಸಿತು. ಎರಡನೇ ಪಂದ್ಯದಲ್ಲಿ ಬೆಳಗಾವಿ ವಿರುದ್ಧ 41-27 ಅಂತರದ ಜಯ ಸಾಧಿಸಿತು. ಅಂತಿಮ ಹಣಾಹಣಿಯಲ್ಲಿ ಕಲಬುರ್ಗಿ ವಿರುದ್ಧ 60-18 ಅಂತರಗಳಿಂದ ವಿಜಯ ಸಾಧಿಸಿ ರಾಷ್ಟ್ರಮಟ್ಟಕ್ಕೆ ಪ್ರವೇಶ ಪಡೆದುಕೊಂಡಿದೆ. ತಂಡವನ್ನು ಸಂಸ್ಥೆಯ ವಿದ್ಯಾರ್ಥಿನಿಯರಾದ ಧನ್ವಿ (ಮನೆಜಾಲು ದುಗ್ಗಣ್ಣ ಗೌಡ-ಅಮಿತಾ ದಂಪತಿ ಪುತ್ರಿ), ದೀಕ್ಷಶ್ರೀ (ಕುದ್ರಡ್ಕ ರಾಮಣ್ಣ ನಾಯ್ಕ-ಗೀತಾ ದಂಪತಿ ಪುತ್ರಿ), ರಮ್ಯ ಕೆ.ಎಸ್.(ಆನೆಕಲ್ಲು ಶಶಿಧರ-ಪ್ರೇಮ ದಂಪತಿ ಪುತ್ರಿ), ತನುಜ (ಅಪ್ಪಸಾಬ ನರಸಪ್ಪ ತಳವಾರ್-ತಳವಾರ್ ಗೌರಮ್ಮ ದಂಪತಿ ಪುತ್ರಿ), ದೀಕ್ಷಾ ಎಸ್. (ತ್ಯಾಗರಾಜನಗರ ಶಿವಪ್ರಸಾದ-ಅನುಪಮಾ ದಂಪತಿ ಪುತ್ರಿ), ಸಿಂಚನ ಎಸ್. (ನಗ್ರಿ ಶಿವಾನಂದ ಬಿ.ದೇವಾಡಿಗ-ಶಾಲಿನಿ ದೇವಾಡಿಗ ದಂಪತಿಯ ಪುತ್ರಿ), ಪ್ರತಿಕ್ಷಾ (ಗುಜ್ಜಾಲ ಭುವನೇಶ್ವರ-ಪ್ರೇಮ ದಂಪತಿ ಪುತ್ರಿ) ಪ್ರತಿನಿಧಿಸಿದ್ದರು.
- ವಿದ್ಯಾರ್ಥಿನಿ ಧನ್ವಿ ಅತ್ಯುತ್ತಮ ಸವ್ಯಸಾಚಿ ಪ್ರಶಸ್ತಿ ಹಾಗೂ ರಮ್ಯಾ ಗೇಮ್ ಚೇಂಜರ್ ಪ್ರಶಸ್ತಿ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳಿಗೆ ಮಾಧವ ಬಿ.ಕೆ., ಜಸ್ವಂತ್, ಮಂಜುನಾಥ್, ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಪ್ರಫುಲ್ಲಾ ರೈ ಅವರು ತರಬೇತಿ ನೀಡಿದ್ದರು. ವಿದ್ಯಾರ್ಥಿಗಳ ಈ ಸಾಧನೆಗೆ ಶಾಲಾ ಮುಖ್ಯಗುರು ಸತೀಶ್ ಭಟ್, ಭೋದಕ ಮತ್ತು ಭೋದಕೇತರ ವೃಂದದವರು, ಆಡಳಿತ ಮಂಡಳಿಯವರು, ಶಾಲಾ ಪೋಷಕರು, ಹಿರಿಯ ವಿದ್ಯಾರ್ಥಿಗಳು ವಿವಿಧ ರೀತಿಯಲ್ಲಿ ಸಹಕರಿಸಿದ್ದರು.