@ ಸಿಶೇ ಕಜೆಮಾರ್
ಪುತ್ತೂರು: ನಾವು ಎಷ್ಟೇ ಜಾಗೃತರಾಗಿದ್ದರೂ ನಮ್ಮನ್ನು ಮೋಸ ಮಾಡುವವರು ವಿವಿಧ ರೂಪಗಳಲ್ಲಿ ಬರುತ್ತಲೆ ಇದ್ದಾರೆ. ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ಮಿತಿ ಮೀರುತ್ತಿದ್ದು, ಬಹಳಷ್ಟು ಮಂದಿ ಇದರಿಂದ ವಂಚನೆಗೆ ಒಳಗಾಗುತ್ತಿದ್ದಾರೆ. ಪ್ರಸ್ತುತ ದಿನಗಳಲ್ಲಿ ಅಮೆಜಾನ್, ಪ್ಲಿಪ್‌ಕಾರ್ಟ್, ಮೀಶೂ ಇತ್ಯಾದಿ ಶಾಫಿಂಗ್ ಆನ್‌ಲೈನ್ ಆಪ್‌ಗಳ ಮೂಲಕ ನಮಗೆ ಬೇಕಾದ ವಸ್ತುಗಳನ್ನು, ಬಟ್ಟೆಬರೆಗಳನ್ನು ಖರೀದಿಸುವ ಕ್ರೇಜ್ ಜನರಲ್ಲಿ ಹೆಚ್ಚಾಗಿದೆ. ಅದರಲ್ಲೂ ಮಹಿಳೆಯರು, ಕಾಲೇಜು ವಿದ್ಯಾರ್ಥಿಗಳೇ ಇದರಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದ್ದಾರೆ. ಸೈಬರ್ ಕಳ್ಳರು ಕೂಡ ಇದನ್ನು ಬಂಡವಾಳವನ್ನಾಗಿಸಿಕೊಂಡು ಪ್ರಸಿದ್ಧ ಆನ್‌ಲೈನ್ ಆಪ್‌ಗಳ ಹೆಸರು ಮತ್ತು ಲೋಗೋವನ್ನು ದುರ್ಬಳಕೆ ಮಾಡಿಕೊಂಡು ಜನರನ್ನು ಮೋಸ ಮಾಡಲು ತೊಡಗಿದ್ದಾರೆ. ಕಳೆದ ಕೆಲವು ದಿನಗಳಿಂದ ಮೀಶೋ ಎಂಬ ಪ್ರಸಿದ್ಧ ಶಾಪಿಂಗ್ ಆನ್‌ಲೈನ್ ಆಪ್‌ನ ಹೆಸರು ಮತ್ತು ಲೋಗೋವನ್ನು ಬಳಸಿಕೊಂಡು ‘ಮೀಶೋ ಮಹಾ ಲೂಟ್ ಗಿಪ್ಟ್’ ಎಂಬ ನಕಲಿ ಲಿಂಕ್‌ಗಳನ್ನು ವಾಟ್ಸಪ್ ಗಳ ಮೂಲಕ ಹರಿಬಿಟ್ಟು ಜನರ ಅಕೌಂಟ್‌ಗೆ ಕನ್ನ ಹಾಕಲು ಮುಂದಾಗಿದ್ದಾರೆ.

ಲಿಂಕ್ ಕ್ಲಿಕ್ಕಿಸುವ ಮುನ್ನ ಹುಷಾರ್…!
ಇದೊಂದು ನಕಲಿ ಲಿಂಕ್ ಆಗಿದ್ದು ಈ ಲಿಂಕ್ ಅನ್ನು ಕ್ಲಿಕ್ಕಿಸಿದರೆ ನಮ್ಮ ಮೊಬೈಲ್ ಹಾಗೂ ವಾಟ್ಸಪ್ ಹ್ಯಾಕ್ ಆಗುವ ಸಾಧ್ಯತೆ ಹೆಚ್ಚಿದೆ. ಈಗಾಗಲೇ ಹಲವು ಕಡೆಗಳಲ್ಲಿ ಈ ಲಿಂಕ್ ವಾಟ್ಸಪ್ ಗಳಲ್ಲಿ ಹರಿದಾಡುತ್ತಿದ್ದು, ಬಹಳಷ್ಟು ಮಂದಿ ಈ ಲಿಂಕ್ ಅನ್ನು ಕ್ಲಿಕ್ಕಿಸಿದ ಪರಿಣಾಮ ಅವರ ಮೊಬೈಲ್, ವಾಟ್ಸಪ್ ಹ್ಯಾಕ್ ಆಗಿದ್ದು, ಅಲ್ಲದೆ ಅಕೌಂಟ್‌ನಿಂದ ಹಣ ಕೂಡ ಡ್ರಾ ಆಗಿರುವ ಘಟನೆ ಬೆಳಕಿಗೆ ಬಂದಿದೆ. ಇದೊಂದು ಸಂಪೂರ್ಣ ಫೇಕ್ ಲಿಂಕ್ ಆಗಿದ್ದು, ಬಳಕೆದಾರರನ್ನು ವಂಚಿಸುವ ಹುನ್ನಾರ ಆಗಿದೆ. ನಿಮ್ಮ ವಾಟ್ಸಪ್ ಗೂ ಇಂತಹ ಲಿಂಕ್ ಬಂದಿರಬಹುದು. ಅದರಲ್ಲಿರುವ ಉಡುಗೊರೆಗಳ ಪ್ರಚೋದನಕಾರಿ ಬರಹಗಳನ್ನು ನೋಡಿ ಯಾರು ಕೂಡ ಈ ಲಿಂಕ್ ಅನ್ನು ಕ್ಲಿಕ್ಕಿಸುವ ಕೆಲಸಕ್ಕೆ ಕೈ ಹಾಕಬಾರದು ಎಂದು ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.
ಈ ಲಿಂಕ್ ಅನ್ನು ಗ್ರೂಪ್, ಸ್ನೇಹಿತರಿಗೆ ಕಳುಹಿಸಿದರೆ ಉಡುಗೊರೆ ಸಿಗುತ್ತದೆ…?
ಈ ನಕಲಿ ಲಿಂಕ್‌ನ ಮೇಲೆ ‘ ಈ ಲಿಂಕ್ ಅನ್ನು ನಿಮ್ಮ ವಾಟ್ಸಫ್‌ನಲ್ಲಿರುವ ಗ್ರೂಪ್‌ಗಳಿಗೆ ಅಥವಾ ನಿಮ್ಮ ಸ್ನೇಹಿತರಿಗೆ ಕಳುಹಿಸಿದರೆ ನಿಮಗೆ ಆಕರ್ಷಕ ಉಡುಗೊರೆ ಸಿಗುತ್ತದೆ’ ಎಂಬ ಆಮೀಷದ ಬರಹ ಕೂಡ ಇದ್ದು ಇದನ್ನು ಕಂಡ ತಕ್ಷಣ ನಾವು ಲಿಂಕ್ ಅನ್ನು ಕ್ಲಿಕ್ ಮಾಡುತ್ತೇವೆ, ಕ್ಲಿಕ್ ಮಾಡಿದ ತಕ್ಷಣ ನಮ್ಮ ಮೊಬೈಲ್ ಮತ್ತು ವಾಟ್ಸಫ್ ಹ್ಯಾಕ್ ಆಗುತ್ತದೆ. ಹೀಗೆ ಹ್ಯಾಕ್ ಆದ ಬಳಿಕ ಅವರು ತಮ್ಮ ಮೊಬೈಲ್‌ನಲ್ಲಿರುವ ಡಾಟಗಳನ್ನು ಕದಿಯುತ್ತಾರೆ ಮತ್ತು ನಮ್ಮ ಅಕೌಂಟ್‌ನ ಸೀಕ್ರೆಟ್ ಕೋಡ್‌ಗಳನ್ನು ಕೂಡ ಕದ್ದು ಅಕೌಂಟ್‌ಗೆ ಕನ್ನ ಹಾಕುವ ಸಾಧ್ಯತೆಯೂ ಇದೆ.
ಸದ್ದಿಲ್ಲದೆ ನಮ್ಮ ಸ್ನೇಹಿತರಿಗೆ ಮೆಸೇಜ್ ಹೋಗುತ್ತದೆ…?
ಈ ಲಿಂಕ್ ಅನ್ನು ನಾವು ಎಲ್ಲಾದರೂ ಕ್ಲಿಕ್ ಮಾಡಿದರೆ ತಕ್ಷಣ ನಮ್ಮ ಮೊಬೈಲ್, ವಾಟ್ಸಪ್ ಹ್ಯಾಕ್ ಆಗುತ್ತದೆ ಮತ್ತು ನಮ್ಮ ವಾಟ್ಸಪ್ ಲಿಸ್ಟ್‌ನಲ್ಲಿರುವ ನಮ್ಮ ಸ್ನೇಹಿತರಿಗೆ ನಮ್ಮಿಂದ ಹಣದ ಬೇಡಿಕೆ ಬಗ್ಗೆ ಮೆಸೇಜ್ ಕೂಡ ಹೋಗುತ್ತದೆ. ನನಗೆ ಅರ್ಜಂಟ್ ಆಗಿ ಇಂತಿಷ್ಟು ಹಣ ಬೇಕು ನಿನಗೆ ಒಂದೆರಡು ಗಂಟೆಗಳಲ್ಲಿ ಹಿಂತಿರುಗಿಸುತ್ತೇನೆ, ನನ್ನ ಯುಪಿಐ ಕೋಡ್ ಕೆಲಸ ಮಾಡುತ್ತಿಲ್ಲ, ಆದ್ದರಿಂದ ಅರ್ಜಂಟ್ ಹಣ ಕಳುಹಿಸು…ಎಂಬಿತ್ಯಾದಿ ಮೆಸೇಜ್‌ಗಳು ನಮಗೆ ಗೊತ್ತಿಲ್ಲದಂತೆ ನಮ್ಮ ಸ್ನೇಹಿತರಿಗೆ ತಲುಪಿರುತ್ತದೆ. ಆದ್ದರಿಂದ ಯಾರೂ ಕೂಡ ಇಂತಹ ಫೇಕ್ ಲಿಂಕ್‌ಗಳನ್ನು ಕ್ಲಿಕ್ಕಿಸದೇ ಇರುವುದು ಉತ್ತಮ.
ಆಮೀಷಗಳಿಗೆ ಯಾವತ್ತೂ ಬಲಿಯಾಗಬೇಡಿ…!
ನಾವು ಎಷ್ಟೋ ಸಂದರ್ಭದಲ್ಲಿ ಕೆಲವೊಂದು ಆಮಿಷಗಳಿಗೆ ತಕ್ಷಣ ಬಲಿಯಾಗಿ ಬಿಡುತ್ತೇವೆ. ಅದು ಉಡುಗೊರೆ ಇರಬಹುದು, ಹಣ ಡಬಲ್ ಆಗುವುದು ಆಗಿರಬಹುದು ಅಥವಾ ಬಿಟ್ ಕ್ವಾಯಿನ್‌ನಂತಹ ಚೈನ್ ಸಿಸ್ಟಮ್ ಹಣ ಗಳಿಕೆಯಾಗಿರುಬಹುದು ಹೀಗೆ ಎಲ್ಲೋ ಒಂದು ಕಡೆ ನಮಗೆ ಸುಲಭದಲ್ಲಿ ಹಣ ಸಿಗುತ್ತೆ, ಉಡುಗೊರೆ ಬರುತ್ತೆ ಅಂತ ಯಾರೂ ಒಂದು ಮೆಸೇಜ್ ಕಳುಹಿಸಿದರೂ ನಾವು ಅದರ ಆಸೆಗೆ ಬಲಿ ಬಿದ್ದು ಬಿಡುತ್ತೇವೆ. ಕೊನೆಗೆ ಎಲ್ಲಾ ಕಳೆದುಕೊಂಡು ಸಪ್ಪೆ ಮೋರೆ ಹಾಕಿ ಒಳಗೊಳಗೆ ಅಳುತ್ತೇವೆ. ಅದಕ್ಕಾಗಿಯೇ ಎಂದಿಗೂ ಸುಲಭದಲ್ಲಿ ಸಿಗುತ್ತೆ ಅನ್ನುವ ಆಮಿಷಗಳಿಗೆ ಬಲಿಯಾಗಬೇಡಿ ಎನ್ನುವುದು ನಮ್ಮ ಸಂದೇಶವಾಗಿದೆ.