ರಾಜ್ಯಮಟ್ಟದ ಬಾಲಕಿಯರ ಕಬಡ್ಡಿ ಪಂದ್ಯಾಟದಲ್ಲಿ ಬೆಥನಿ ಶಾಲಾ ಬಾಲಕಿಯರ ತಂಡ ಪ್ರಥಮ-ಸತತ 3ನೇ ಬಾರಿಗೆ ರಾಷ್ಟ್ರಮಟ್ಟಕ್ಕೆ

0

ಪುತ್ತೂರು: ಬೆಂಗಳೂರಿನ ಬಸವೇಶ್ವರ ನಗರದ ಡಾ.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನ.11ರಂದು ನಡೆದ 14ರ ವಯೋಮಿತಿಯ ರಾಜ್ಯಮಟ್ಟದ ಬಾಲಕಿಯರ ಕಬಡ್ಡಿ ಪಂದ್ಯಾಟದಲ್ಲಿ ದರ್ಬೆ ಬೆಥನಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಕ್ರೀಡಾಪಟುಗಳು ವಿಜಯಿಯಾಗಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದು, ಈ ಪಂದ್ಯಾಟದಲ್ಲಿ ಭಾಗವಹಿಸಿ ಅಭೂತಪೂರ್ವ ಪ್ರದರ್ಶನ ನೀಡಿದ ಬೆಥನಿ ಶಾಲೆಯ ಬಾಲಕಿಯರನ್ನು ಹಾಗೂ ತರಬೇತಿ ನೀಡಿದ ತರಬೇತುದಾರರನ್ನು ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಶನ್‌ನಿಂದ ನ.12ರಂದು ದರ್ಬೆ ಜಂಕ್ಷನ್‌ನಲ್ಲಿ ಅದ್ದೂರಿ ಸ್ವಾಗತಗೈಯುವ ಮೂಲಕ ಅಭಿನಂದಿಸಲಾಯಿತು.


ಕರ್ನಾಟಕ ಸರಕಾರ, ಬೆಂಗಳೂರು ನಗರ ಜಿಲ್ಲಾ ಪಂಚಾಯತ್, ಉಪನಿರ್ದೇಶಕರ ಕಛೇರಿ, ಶಾಲಾ ಶಿಕ್ಷಣ ಇಲಾಖೆ ಬೆಂಗಳುರು ಉತ್ತರ ಜಿಲ್ಲೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬೆಂಗಳೂರು ಉತ್ತರ ವಲಯ-1 ಇವುಗಳ ಸಂಯುಕ್ತ ಆಶ್ರಯದಲ್ಲಿ ಪಂದ್ಯಾಟವು ನಡೆದಿತ್ತು. ಬೆಂಗಳೂರು, ಗುಲ್ಬರ್ಗ, ಬೆಳಗಾವಿ, ಮೈಸೂರು ಹೀಗೆ ನಾಲ್ಕು ತಂಡಗಳು ಕಣದಲ್ಲಿದ್ದು ಪಂದ್ಯಾಟಗಳು ಲೀಗ್ ಮಾದರಿಯಲ್ಲಿ ನಡೆದಿತ್ತು. ಪುತ್ತೂರು ಪಾಂಗ್ಲಾಯಿ ಬೆಥನಿ ಶಾಲೆಯ 5 ಮಂದಿ, ಉಡುಪಿಯ 5 ಮಂದಿ ಹಾಗೂ ವಿಟ್ಲದ 2 ಮಂದಿ ಹೀಗೆ 13 ಮಂದಿ ವಿದ್ಯಾರ್ಥಿ ಕ್ರೀಡಾಪಟುಗಳು ಮೈಸೂರು ವಿಭಾಗದಿಂದ ಪ್ರತಿನಿಧಿಸಿದ್ದರು. ಬೆಥನಿಯ ಐವರು, ವಿಟ್ಲದ ಈರ್ವರು ಕ್ರೀಡಾಪಟುಗಳಿಗೆ ದರ್ಬೆ ಲಿಟ್ಲ್ ಫ್ಲವರ್ ಶಾಲೆಯಲ್ಲಿ ರಾಷ್ಟ್ರೀಯ ಕಬಡ್ಡಿ ತರಬೇತುದಾರ ಬಾಲಕೃಷ್ಣ ರೈ ಪೊರ್ದಾಲ್‌ರವರು ತರಬೇತಿ ನೀಡಿದ್ದರು.


ದರ್ಬೆ ಜಂಕ್ಷನ್‌ನಲ್ಲಿ ಅದ್ದೂರಿ ಸ್ವಾಗತ:
ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಭಾಗವಹಿಸಿ, ಟ್ರೋಫಿಯೊಂದಿಗೆ ಆಗಮಿಸಿದ ಬೆಥನಿ ಶಾಲೆಯ ಕ್ರೀಡಾಪಟುಗಳಾದ ಜ್ಯುವೆನ್ನಾ ಡ್ಯಾಝಲ್ ಕುಟಿನ್ಹಾ(ಕಪ್ತಾನ), ಸನ್ನಿಧಿ, ಹಾರ್ದಿಕಾ, ಜೆನಿಟ ಸಿಂದು ಪಸನ್ನ, ಫಾತಿಮತ್ ಶೈಮಾ, ಫಾತಿಮತ್ ಅಫ್ರಾ, ತರಬೇತುದಾರ ಬಾಲಕೃಷ್ಣ ರೈ ಪೊರ್ದಾಲ್, ಕ್ರೀಡಾ ಮ್ಯಾನೇಜರ್ ಶಿಕ್ಷಕಿ ವಿಲ್ಮಾ ಫೆರ್ನಾಂಡೀಸ್, ಪಂದ್ಯಾಕೂಟದಲ್ಲಿ ಕ್ರೀಡಾಪಟುಗಳೊಂದಿಗೆ ಬೆಂಗಳೂರಿಗೆ ತೆರಳಿದ್ದ ಬೆಥನಿ ಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಹಾಗೂ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ವಿನಯ ಸುವರ್ಣ, ಬೆಥನಿ ಶಾಲೆಯ ಶಿಕ್ಷಕಿ, ತಂಡದ ವ್ಯವಸ್ಥಾಪಕಿ ಚಂದ್ರಪ್ರಭಾ ಗೌಡ, ಸುಕುಮಾರ್ ಮಡ್ಯಂಗಳರವರುಗಳನ್ನು ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಶನ್‌ನಿಂದ ಹೂಹಾರ, ಶಾಲು ತೊಡಿಸಿ ಅದ್ದೂರಿಯ ಸ್ವಾಗತ ಮಾಡಲಾಯಿತು. ಈ ಸಂದರ್ಭದಲ್ಲಿ ಪುತ್ತೂರಿಗೆ ಹಾಗೂ ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳಿಗೆ ಪಟಾಕಿ ಸಿಡಿಸುವ ಮೂಲಕ ಸಂಭ್ರಮವನ್ನು ದ್ವಿಗುಣಗೊಳಿಸಲಾಯಿತು. ದರ್ಬೆ ನಯಾ ಚಪ್ಪಲ್ ಬಜಾರ್ ಮಾಲಕ ರಫೀಕ್ ಎಂ.ಜಿರವರು ತನ್ನ ಸಂಸ್ಥೆಯ ವತಿಯಿಂದ ಕ್ರೀಡಾಪಟುಗಳಿಗೆ ಶಾಲು ಹೊದಿಸಿ ಗೌರವಿಸಿದರು.


ರಾಷ್ಟ್ರಮಟ್ಟದಲ್ಲೂ ಪ್ರಥಮ ಸ್ಥಾನವನ್ನು ಗಳಿಸಲಿ-ಎನ್ ಚಂದ್ರಹಾಸ ಶೆಟ್ಟಿ:
ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಶನ್‌ನ ಗೌರವಾಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿ ಮಾತನಾಡಿ, ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಗೆದ್ದು ಅಭೂತಪೂರ್ವ ಸಾಧನೆ ಮಾಡಿದ್ದಾರೆ. ಇದರ ಹಿಂದೆ ಕೋಚ್ ಬಾಲಕೃಷ್ಣ ಪೊರ್ದಾಲ್‌ರವರ ಶ್ರಮ ಖಂಡಿತಾ ಇದೆ. ಯಾವುದೇ ಪೈಪೋಟಿ ಇಲ್ಲದೆ ವನ್‌ಸೈಡ್ ಪಂದ್ಯಾಟ ಆಗಿರುವುದು ನೋಡಿದಾಗ ನಮ್ಮ ಹುಡುಗಿಯರ ಚಾಕಚಾಕ್ಯತೆಯನ್ನು ಶ್ಲಾಘಿಸಬೇಕಾಗಿದೆ. ರಾಜ್ಯಮಟ್ಟದಲ್ಲಿನ ವಿಜೇತ ತಂಡದ ಯಾವುದೇ ಆಟಗಾರ್ತಿ ಸೆಲೆಕ್ಷನ್ ಆಗದಿರುವುದು ನೋಡಿದಾಗ ಕಬಡ್ಡಿಯಲ್ಲಿ ಏನು ನಡೀತಿದೆ ಎಂದು ಹೇಳಲು ಬೇಸರವಾಗುತ್ತದೆ ಎಂದು ಅಸೋಸಿಯೇಶನ್‌ನ ರಾಜ್ಯಮಟ್ಟದ ಅಧ್ಯಕ್ಷರಲ್ಲಿ ತನ್ನ ಬೇಸರವನ್ನು ಹೇಳಿಕೊಂಡಿದ್ದೇ. ಹಾಗಾದರೆ ಇವರ ಪ್ರತಿಭೆಗೆ ಬೆಲೆ, ಅವಕಾಶವೇ ಇಲ್ಲವೇ. ಏನೇ ಆಗಲಿ ಮುಂದೆ ನಡೆಯುವ ರಾಷ್ಟ್ರಮಟ್ಟದ ಕ್ರೀಡೆಯಲ್ಲಿ ಪ್ರಥಮ ಸ್ಥಾನವನ್ನು ಗಳಿಸುವ ಮೂಲಕ ಪುತ್ತೂರಿನ ಈ ಹೆಮ್ಮೆಯ ಮಣ್ಣಿಗೆ ಗೌರವ ತರುವಂತಾಗಲಿ ಎಂದರು.


ವಿಜೇತ ಟ್ರೋಫಿಯ ಜೊತೆಗೆ ಹುಟ್ಟೂರು ಪುತ್ತೂರಿಗೆ-ಆಂಜನೇಯ ರೆಡ್ಡಿ:
ಪುತ್ತೂರು ನಗರ ಠಾಣೆಯ ಉಪ ನಿರೀಕ್ಷಕ ಆಂಜನೇಯ ರೆಡ್ಡಿ ಮಾತನಾಡಿ, ಹಲವಾರು ವರ್ಷಗಳ ಕಾಲ ಕಬಡ್ಡಿಯನ್ನು ತನ್ನದೇ ಉಸಿರು ಅಂತ ಭಾವಿಸಿಕೊಂಡು ಅದಕ್ಕೆ ತಕ್ಕಂತೆ ಒಂದೊಂದು ಕ್ಷಣನೂ ಆಟಕ್ಕೆ ಮುಡುಪಾಗಿಟ್ಟು ಇವತ್ತು ರಾಜ್ಯಮಟ್ಟದಲ್ಲಿ ಚಾಪನ್ನು ಮೂಡಿಸಲು ಕಾರಣಕರ್ತರಾದವರು ಬಾಲೃಷ್ಣ ಪೊರ್ದಾಲ್‌ರವರು. ಅವರು ಸಂಪೂರ್ಣವಾದ ಬಲಿಷ್ಟ ತಂಡವನ್ನು ಕಟ್ಟಿ ಬೆಂಗಳೂರಿನಲ್ಲಿ ಆಡಿರುವಂತಹ ಎಲ್ಲಾ ಪಂದ್ಯಗಳನ್ನು ಗೆದ್ದುಕೊಂಡು ಕ್ರೀಡಾಪಟುಗಳು ಹಾಗೂ ಟ್ರೋಫಿಯ ಜೊತೆಗೆ ಹುಟ್ಟೂರು ಪುತ್ತೂರಿಗೆ ಆಗಮಿಸಿದ್ದಾರೆ. ಮುಂದಿನ ದಿನಗಳಲ್ಲಿ ನಡೆಯುವ ರಾಷ್ಟ್ರಮಟ್ಟದ ಪಂದ್ಯಾಟದಲ್ಲೂ ಇದೇ ಛಾಪನ್ನು ಕ್ರೀಡಾಪಟುಗಳು ಮೂಡಿಸುವಂತಾಗಲಿ ಎಂದರು.


ಮೂರು ವರ್ಷ ರಾಷ್ಟ್ರಮಟ್ಟದ ಸಾಧನೆ ಸುಲಭದ ಕೆಲಸವಲ್ಲ-ದಯಾನಂದ ರೈ:
ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ದಯಾನಂದ ರೈ ಕೋರ್ಮಂಡ ಮಾತನಾಡಿ, ನನ್ನ ಶಿಷ್ಯ ಬಾಲಕೃಷ್ಣ ಪೊರ್ದಾಲ್‌ರವರು ತನ್ನ ಶಿಕ್ಷಣದ ಸಮಯದಲ್ಲಿನ ಪ್ರಾಮಾಣಿಕ ವ್ಯಕ್ತಿತ್ವ ಮಾತ್ರವಲ್ಲ ಶಿಸ್ತಿನ ಧ್ಯೇಯವನ್ನು ಇಲ್ಲಿಯೂ ಮುಂದುವರೆಸಿದ್ದಾರೆ. ಕೇವಲ ಒಂದು ವರ್ಷದಲ್ಲಿ ಕಬಡ್ಡಿ ತಂಡವನ್ನು ಕಟ್ಟಿರುವುದು ಅಲ್ಲ, ಸತತ ಮೂರು ವರ್ಷದಲ್ಲಿ ರಾಷ್ಟ್ರಮಟ್ಟದ ಸಾಧನೆ ಅನ್ನುವುದು ಅದು ಸುಲಭದ ಕೆಲಸವಲ್ಲ. ಈ ಕ್ರೀಡಾಪಟುಗಳು ಮುಂದಿನ ದಿನಗಳಲ್ಲಿ ಪ್ರೊ.ಕಬಡ್ಡಿಯಲ್ಲಿ ಆಡಲು ಅವಕಾಶ ಸಿಗುವಂತಾಗಲು ಶ್ರೀ ಮಹಾಲಿಂಗೇಶ್ವರ ದೇವರು ಅನುಗ್ರಹಿಸಲಿ ಎಂದರು.


ರಾಷ್ಟ್ರಮಟ್ಟದಲ್ಲೂ ಮಿಂಚಿ ಪುತ್ತೂರಿನ ಗರಿಮೆಯನ್ನು ಹೆಚ್ಚಿಸಿ-ಪ್ರಶಾಂತ್ ರೈ:
ಪ್ರೊ.ಕಬಡ್ಡಿ ಆಟಗಾರ ಪ್ರಶಾಂತ್ ಕುಮಾರ್ ರೈರವರು ಮಾತನಾಡಿ. ತಂಡದ ಆಟಗಾರರಿಗೆ, ತರಬೇತುದಾರರಿಗೆ ಜೊತೆಗೆ ಅವರ ಬೆನ್ನಹಿಂದೆ ಬೆನ್ನೆಲುಬಾಗಿ ಕಾರ್ಯ ನಿರ್ವಹಿಸಿದವರಿಗೆ ನನ್ನ ಅಭಿನಂದನೆಗಳು. ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಶನ್‌ರವರು ಆಟಗಾರರಿಗೆ ಸಾಕಷ್ಟು ಪ್ರೋತ್ಸಾಹ ನೀಡಿದ್ದಾರೆ. ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಸಿಗುವುದು ಸುಲಭವಲ್ಲ. ಕ್ರೀಡಾಪಟುಗಳ ನಿರಂತರ ಶ್ರಮ ಗೆಲುವಿಗೆ ಕಾರಣವಾಗಿದೆ. ರಾಷ್ಟ್ರಮಟ್ಟದಲ್ಲೂ ಇದೇ ಸಾಧನೆ ಮುಂದುವರೆದು ರಾಷ್ಟ್ರಮಟ್ಟದಲ್ಲೂ ಮಿಂಚಿ ಪುತ್ತೂರಿನ ಗರಿಮೆಯನ್ನು ಹೆಚ್ಚಿಸಿ ಎಂದರು.


-ಕ್ರೀಡಾಪಟುಗಳ ಸಾಧನೆ ಪುತ್ತೂರಿಗೆ ಹೆಮ್ಮೆ ತರುವಂತದ್ದು-ಡಾ.ಶ್ರೀಪ್ರಕಾಶ್ ಬಿ:
ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಡಾ.ಶ್ರೀಪ್ರಕಾಶ್ ಬಿ. ಮಾತನಾಡಿ, ರಾಜ್ಯಮಟ್ಟದ ಕಬಡ್ಡಿಯಲ್ಲಿ ವಿಜಯಶಾಲಿಗಳಾದ ಆಟಗಾರರಿಗೆ, ಅವರಿಗೆ ಮಾರ್ಗದರ್ಶನ ಮಾಡಿದ ಬಾಲಕೃಷ್ಣ ಪೊರ್ದಾಲ್‌ರವರಿಗೆ, ಸಹಕಾರ ಕೊಟ್ಟಂತಹ ಎಲ್ಲರಿಗೆ ಅಭಿನಂದನೆಗಳು. ಈ ಕ್ರೀಡಾಪಟುಗಳ ಸಾಧನೆ ಪುತ್ತೂರಿಗೆ ಹೆಮ್ಮೆ ತರುವಂತಹ ವಿಷಯ. ಜೊತೆಗೆ ಈ ಮಕ್ಕಳ ಪೋಷಕರನ್ನೂ ಕೂಡ ಅಭಿನಂದಿಸಬೇಕಾಗಿದೆ. ಯಾಕೆಂದರೆ ಅವರ ಉತ್ತೇಜನವಿಲ್ಲದಿದ್ದರೆ ಯಾವೂದೂ ಸಾಧ್ಯವಿಲ್ಲ ಎಂದರು.


ರಾಷ್ಟ್ರಮಟ್ಟದಲ್ಲಿ ಮಿನುಗುವ ತಾರೆಗಳಾಗಿ ನಮ್ಮ ಕಣ್ಮಣಿಗಳು ಮಿಂಚಲಿ-ಜಯಂತ್ ನಡುಬೈಲು:

ಸಂಪ್ಯ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಜಯಂತ್ ನಡುಬೈಲು ಮಾತನಾಡಿ, ಲಿಟ್ಲ್ ಫ್ಲವರ್ ಶಾಲೆಯ ಕೋಚ್ ಬಾಲಕೃಷ್ಣ ಪೊರ್ದಾಲ್‌ರವರ ನೇತೃತ್ವದಲ್ಲಿ ಪುತ್ತೂರಿನ ಬೆಥನಿ ತಂಡ ವಿಜಯಶಾಲಿಯಾಗಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವುದು ಪುತ್ತೂರಿಗೆ ಕೀರ್ತಿ ತಂದಿದೆ. ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವರ ನೆಲದಲ್ಲಿ ನಮ್ಮ ಕಣ್ಮಣಿಗಳು ಆತ್ಮಸ್ಥೈರ್ಯ ಹಾಗೂ ಛಲದಿಂದ ಆಡಿ ನಮ್ಮ ಮನಸ್ಸು ಗೆದ್ದಿದ್ದಾರೆ. ರಾಜ್ಯಮಟ್ಟಕ್ಕೆ ಹೋಗುವುದು ಅಷ್ಟು ಸುಲಭವಲ್ಲ. ಅದಕ್ಕೆ ನಿರಂತರ ಪರಿಶ್ರಮ ಬೇಕಾಗಿದೆ. ಮುಂದಿನ ರಾಷ್ಟ್ರಮಟ್ಟದಲ್ಲಿ ಮಿನುಗುವ ತಾರೆಗಳಾಗಿ ನಮ್ಮ ಕಣ್ಮಣಿಗಳು ಮಿಂಚಲಿ ಎಂದರು.


ರಾಷ್ಟ್ರಮಟ್ಟದ ಪಂದ್ಯಾಟಕ್ಕೆ ನಾವು ಈಗಲೇ ಸನ್ನದ್ಧರಾಗೋಣ-ರಫೀಕ್ ಎಂ.ಜಿ:
ದರ್ಬೆ ನಯಾ ಚಪ್ಪಲ್ ಬಜಾರ್ ಮಾಲಕ ರಫೀಕ್ ಎಂ.ಜಿ ಮಾತನಾಡಿ, ತಂಡಕ್ಕೆ ತರಬೇತು ನೀಡಿದ ಬಾಲಕೃಷ್ಣ ಪೊರ್ದಾಲ್‌ರವರಿಗೆ ಈಗ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿರುತ್ತದೆ. ಮುಂದಿನ ವರ್ಷ ಅವರ ಸಾಧನೆಗೆ ರಾಜ್ಯೋತ್ಸವ ಪ್ರಶಸ್ತಿ ಸಿಗುವಂತಾಗಲಿ. ಈ ತಂಡದ ಜೊತೆ ವಿನಯ ಸುವರ್ಣ, ಚಂದ್ರಪ್ರಭಾ ಗೌಡ, ವಿಲ್ಮಾ ಟೀಚರ್‌ರವರೂ ಕೂಡ ಸಾಕಷ್ಟು ಶ್ರಮಿಸಿದ್ದಾರೆ. ಮುಂದಿನ ರಾಷ್ಟ್ರಮಟ್ಟದ ಪಂದ್ಯಾಟಕ್ಕೆ ನಾವು ಈಗಲೇ ಸನ್ನದ್ಧರಾಗೋಣ ಎಂದರು.


ಭರವಸೆಯನ್ನು ಉಳಿಸಿದ ಹೆಮ್ಮೆಯ ಕ್ರೀಡಾಪಟುಗಳು-ಚಂದ್ರಪ್ರಭಾ ಗೌಡ:
ಬೆಥನಿ ಶಾಲೆಯ ರಕ್ಷಕ-ಶಿಕ್ಷಕ ಸಂಘದ ಸದಸ್ಯರೂ, ಪುತ್ತೂರು ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಚಂದ್ರಪ್ರಭಾ ಗೌಡ ಮಾತನಾಡಿ, ನಾವು ಏನು ಭರವಸೆಯನ್ನು ಇಟ್ಟಿದ್ದೇವೆಯೋ ಅವನ್ನು ನಮ್ಮ ಹೆಮ್ಮೆಯ ಕ್ರೀಡಾಪಟುಗಳು ಉಳಿಸಿದ್ದಾರೆ. ಫೈನಲ್ ಎದುರಾಳಿ ಬೆಂಗಳೂರು ತಂಡ ಆದ್ರೂ ಬೆಂಗಳೂರಿಗೆ ಹೋಗಿ ಬೆಂಗಳೂರು ತಂಡವನ್ನು ಮಣಿಸುವುದು ಸುಲಭವಲ್ಲ. ನಮ್ಮ ಮಕ್ಕಳು ಆಡಿದ ರೀತಿ ಯಾರೂ ಆಡಿರಲಿಲ್ಲ. ಅಷ್ಟು ಕೆಚ್ಚೆದೆಯ ಆಟ ನಮ್ಮವರದ್ದು ಆಗಿತ್ತು. ನಮ್ಮ ತಂಡಕ್ಕೆ ಬಾಲಕೃಷ್ಣ ಪೊರ್ದಾಲ್‌ರಂತಹ ಕೋಚ್ ಸಿಕ್ಕಿರುವುದು ಪುಣ್ಯ. ರಾಷ್ಟ್ರಮಟ್ಟದಲ್ಲೂ ನಮ್ಮ ಕ್ರೀಡಾಪಟುಗಳು ವಿಜಯಶಾಲಿಗಳಾಗಿ ಬರುತ್ತಾರೆ ಎಂಬ ಭರವಸೆಯಿದೆ ಎಂದರು.


ಕ್ರೀಡಾಪಟುಗಳಿಗೆ ನಮ್ಮೆಲ್ಲರ ಪ್ರೋತ್ಸಾಹ ಇದ್ದೇ ಇದೆ-ಜುನೈದ್ ಪಿ.ಜಿ:
ಸಿಟಿ ಫ್ರೆಂಡ್ಸ್ ಪುತ್ತೂರು ಅಧ್ಯಕ್ಷ ಜುನೈದ್ ಪಿ.ಜಿ ಮಾತನಾಡಿ, ಪುತ್ತೂರಿನ ಹೆಮ್ಮೆಯ ಕ್ರೀಡಾಪಟುಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವುದು ತುಂಬಾ ಸಂತಸ ತಂದಿದೆ. ಮಾತ್ರವಲ್ಲ ರಾಷ್ಟ್ರಮಟ್ಟದಲ್ಲೂ ಒಳ್ಳೆಯ ರೀತಿಯಲ್ಲಿ ಆಡಿ ಗೆದ್ದು ಬರಬೇಕು. ಆ ನಿಟ್ಟಿನಲ್ಲಿ ನಮ್ಮೆಲ್ಲರ ಪ್ರೋತ್ಸಾಹ ಇದ್ದೇ ಇದೆ ಎಂದರು.
ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಸುರೇಂದ್ರ ರೈ ನೇಸರ, ಪಂದ್ಯಾಟ ಸಮಿತಿ ಅಧ್ಯಕ್ಷ ಶಿವರಾಮ ಆಳ್ವ, ಪ್ರವೀಣ್ ಶೆಟ್ಟಿ ಅಳಕೆಮಜಲು, ಪುರುಷೋತ್ತಮ ಕೋಲ್ಫೆ, ರಫೀಕ್ ಎಂ.ಕೆ, ಹನೀಫ್ ನಂದಿನಿ, ಇಬ್ರಾಹಿಂ(ಇಬ್ಬ) ಬಪ್ಪಳಿಗೆ, ಜಬ್ಬಾರ್ ಸರ್ವೆ, ಮಿತ್ರವೃಂದ ವಾಲಿಬಾಲ್ ಅಕಾಡೆಮಿಯ ಪಿ.ವಿ ಕೃಷ್ಣನ್, ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪ್ರವೀಣ್ ಕುಮಾರ್, ರೋಟರಿ ಪುತ್ತೂರು ಮಾಜಿ ಕಾರ್ಯದರ್ಶಿ ಮನೋಜ್ ಟಿ.ವಿ, ದರ್ಬೆ ವೃತ್ತದ ರಿಕ್ಷಾ ಚಾಲಕರು ಮತ್ತು ಮಾಲಕರ ಸಹಿತ ಹಲವರು ಉಪಸ್ಥಿತರಿದ್ದರು. ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಕೋಶಾಧಿಕಾರಿ ರಝಾಕ್ ಬಿ.ಎಚ್ ಕಾರ್ಯಕ್ರಮ ನಿರೂಪಿಸಿದರು.

ರಾಷ್ಟ್ರಮಟ್ಟದಲ್ಲೂ ಮೆಡಲ್ ಪಡೆಯುವುದು ಆಸೆ..
ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವುದು ಬಹಳ ಖುಶಿ ತಂದಿದೆ. ರಾಷ್ಟ್ರಮಟ್ಟದಲ್ಲೂ ಮೆಡಲ್ ತೆಗೆದುಕೊಳ್ಳಬೇಕೆಂಬ ಆಸೆಯಿದೆ. ತುಂಬಾ ಪ್ರಯತ್ನಪಟ್ಟಿದ್ದೇವೆ. ಆ ದೇವರು ಭಾಗ್ಯವನ್ನು ದಯಪಾಲಿಸಲಿ ಎಂಬುದು ನಮ್ಮ ಹಾರೈಕೆಯಾಗಿದೆ. ನಮಗೆ ಈ ಸಾಧನೆಗೈಯಲು ಪ್ರೋತ್ಸಾಹಿಸಿ ಆಶೀರ್ವದಿಸಿದ ಶಾಲೆಯ ಸಂಚಾಲಕರಿಗೆ, ಹೆತ್ತವರಿಗೆ, ತರಬೇತಿ ನೀಡಿದ ಬಾಲಕೃಷ್ಣ ಸರ್‌ರವರಿಗೆ, ವಿಲ್ಮಾ ಟೀಚರ್‌ರವರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ.
-ಕು|ಜ್ಯುವೆನ್ನಾ ಡ್ಯಾಝಲ್ ಕುಟಿನ್ಹಾ(ಕಪ್ತಾನ)

ಪಂದ್ಯಗಳು ‘ವನ್‌ಸೈಡ್’ ಆಗಿದ್ದವು..
ರಾಜ್ಯಮಟ್ಟದಲ್ಲಿ ಸತತ ಮೂರನೇ ಬಾರಿಗೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವ ಹಿಂದೆ ಕ್ರೀಡಾಪಟುಗಳ ಸಾರ್ಥಕ ಪರಿಶ್ರಮ, ಎಲ್ಲರ ಸಹಕಾರವಿದೆ. ಪ್ರಥಮ ಪಂದ್ಯವನ್ನು 51 ಅಂಕಗಳಿಂದ, ದ್ವಿತೀಯ ಪಂದ್ಯವನ್ನು 50 ಅಂಕಗಳಿಂದ, ಮೂರನೇ ಪಂದ್ಯವನ್ನು 37 ಅಂಕಗಳಿಂದ ಎದುರಾಳಿಯನ್ನು ಸದೆಬಡಿದು ಪಂದ್ಯಗಳು ‘ವನ್‌ಸೈಡ್’ ಆಗಿದ್ದವು. ಎಲ್ಲಿವರೆಗೆ ಅಂದರೆ ರಾಜ್ಯಮಟ್ಟದ ಸಂಘಟಕರೇ ನಮ್ಮ ಕ್ರೀಡಾಪಟುಗಳೊಂದಿಗೆ ಫೊಟೊ ತೆಗೆಯುವುದರ ಮೂಲಕ ಅವರ ಮನಸ್ಸನ್ನು ಗೆದ್ದಿದ್ದಾರೆ. ಮಾನ್ಯ ಶಾಸಕರೂ ಕೂಡ ಅಭಿನಂದಿಸಿದ್ದಾರೆ. ಇವರ ಶಿಸ್ತಿನ ಆಟದ ವೈಖರಿ ನೋಡಿ ಬೆಂಗಳೂರಿನವರೂ ಕೂಡ ಅಭಿಮಾನಿಗಳಾಗಿ ನಮ್ಮ ತಂಡವನ್ನು ಪ್ರೋತ್ಸಾಹಿಸುತ್ತಿದ್ದರು. ರೈಡಿಂಗ್, ಡಿಫೆಂಡಿಂಗ್, ಕ್ಯಾಚಿಂಗ್ ಎಲ್ಲಾ ವಿಭಾಗದಲ್ಲೂ ಉತ್ತಮ ಸಾಧನೆ ಮಾಡಿದ್ದಾರೆ. ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಸಹಿತ ಹಲವರು ನಮಗೆ ಬೆನ್ನು ತಟ್ಟಿ ಪ್ರೋತ್ಸಾಹಿಸಿರುವುದಕ್ಕೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
-ಬಾಲಕೃಷ್ಣ ರೈ ಪೊರ್ದಾಲ್,
ರಾಷ್ಟ್ರೀಯ ಕಬಡ್ಡಿ ತರಬೇತುದಾರರು

LEAVE A REPLY

Please enter your comment!
Please enter your name here