ಪುತ್ತೂರು: ತುಳುನಾಡಿನ ಐತಿಹಾಸಿಕ ಜನಪದ ಕ್ರೀಡೆಯಾಗಿರುವ ಕಂಬಳವನ್ನು ಉಳಿಸುವ ನಿಟ್ಟಿನಲ್ಲಿ ಒಂದೆಡೆ ನಿರಂತರ ಹೋರಾಟಗಳು ನಡೆದುಕೊಂಡು ಬರುತ್ತಿದೆ. ಕಂಬಳ ಇನ್ನೇನು ನಿಂತೇ ಬಿಡುತ್ತದೆ ಎನ್ನುವ ಹಂತಕ್ಕೆ ಬಂದಾಗ ಅದನ್ನು ಸುಪ್ರಿಂ ಕೋರ್ಟು ತನಕ ಕೊಂಡು ಹೋಗಿ ಉಳಿಸಿದ ಕೀರ್ತಿ ಪುತ್ತೂರು ಶಾಸಕ ಅಶೋಕ್ ರೈ ಅವರೂ ಓರ್ವರು. ಕಂಬಳವನ್ನು ರಾಜಧಾನಿ ಬೆಂಗಳೂರಿನಲ್ಲಿ ಆಯೋಜನೆ ಮಾಡುವ ಜಗತ್ತಿಗೆ ತುಳುನಾಡಿನ ಕ್ರೀಡೆಯನ್ನು ಪರಿಚಯಿಸಿದ ಹೆಗ್ಗಳಿಗೆ ಅಶೋಕ್ ರೈ ಅವರದ್ದು. ಕಂಬಳ ನಡೆಸುವುದು ಸುಲಭವಲ್ಲ ಅದು ಕಷ್ಟಸಾದ್ಯವಾದ ಕೆಲಸ ಎಂದು ಆಳುವವರ ಗಮನಕ್ಕೆ ತಂದು ಕಂಬಳ ಅದೊಂದು ಕ್ರೀಡೆ ಅದಕ್ಕೂ ಸರಕಾರದ ನೆರವು ದೊರೆಯಬೇಕು ಎಂದು ನಾಡಿನ ದೊರೆಯಲ್ಲಿ ಮನವಿ ಮಾಡಿದ್ದೂ ಅಶೋಕ್ ರೈ. ಇದೀಗ ಕಂಬಳಕ್ಕೆ ಸರಕಾರ ಪ್ರೋತ್ಸಾಹ ನೀಡಬೇಕು ಎಂಬ ಮನವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಂದಿಸಿದ್ದು ಕರಾವಳಿ ಜಿಲ್ಲೆಯಲ್ಲಿ ನಡೆಯುವ ಹತ್ತು ಕಂಬಳಕ್ಕೆ ತಲಾ 5 ಲಕ್ಷದಂತೆ ಅನುದಾನವನ್ನು ಸರಕಾರ ಬಿಡುಗಡೆ ಮಾಡಿದೆ.
ಯಾವ ಕಂಬಳಕ್ಕೆ ಅನುದಾನ?
ಕರ್ನಾಟಕ ಪ್ರವಾಸೋಧ್ಯಮ ಇಲಾಖೆಯ ಮೂಲಕ 2024-25 ನೇ ಸಾಲಿನ ಕಂಬಳದ ಅನುದಾನ ಸರಕಾರ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಪುತ್ತೂರು ಕಂಬಳ, ಉಪ್ಪಿನಂಗಡಿ ಜಪ್ಪು, ಬಂಟ್ವಾಳ, ವೇಣೂರು,ಮುಲ್ಕಿ, ಮಂಗಳೂರು, ನರಿಂಗಾಣ, ಮೂಡಬಿದ್ರಿ ಹಾಗೂ ಐಕಳ ಕಂಬಳ ಇದ್ದು ಈ ಕಂಬಳಕ್ಕೆ ತಲಾ 5 ಲಕ್ಷ ಅನುದಾನ ದೊರೆಯಲಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.
ಕಂಬಳವನ್ನು ಉಳಿಸಿಬೆಳೆಸುವ ನಿಟ್ಟಿನಲ್ಲಿ ಸರಕಾರದ ನೆರವು ಅಗತ್ಯವಾಗಿದೆ. ತುಳುನಾಡಿನಲ್ಲಿ ನಡೆಯುವ ಜನಪದ ಕ್ರೀಡೆ ಕಂಬಳಕ್ಕೆ ಅನುದಾನ ನೀಡುವಂತೆ ಸರಕಾರಕ್ಕೆ ಮನವಿ ಸಲ್ಲಿಸಿದ್ದೆ. ಕಳೆದ ಬಾರಿ ಬೆಂಗಳೂರಿನಲ್ಲಿ ಆಯೋಜನೆ ಮಾಡಿದ್ದ ಬೆಂಗಳೂರು ಕಂಬಳದ ಮೂಲಕ ಕಂಬಳವನ್ನು ಜಗತ್ತಿಗೆ ಪರಿಚಯಿಸುವ ಕೆಲಸವಾಗಿದೆ. ಇದೀಗ ಕಂಬಳಕ್ಕೆ ಸರಕಾರ ತಲಾ 5 ಲಕ್ಷ ರೂ ಅನುದಾನ ನೀಡುವ ಮೂಲಕ ಕಂಬಳಕ್ಕೆ ಪ್ರೋತ್ಸಾಹ ಸಿಕ್ಕಿದಂತಾಗಿದೆ. ಕರ್ನಾಟಕದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ತುಳುನಾಡಿನ ಜನಪದ ಕ್ರೀಡೆಗೆ ಬೆಂಬಲ ನೀಡಿರುವುದು ಅಭಿನಂದನಾರ್ಹವಾಗಿದೆ.
ಅಶೋಕ್ ರೈ, ಶಾಸಕರು ಪುತ್ತೂರು
