ಅಂತಾರಾಷ್ಟ್ರೀಯ ರಾಜಕಾರಣ ಬದಲಾಗಿದೆ: ಡಾ. ಕೆ.ಎಂ. ಕೃಷ್ಣ ಭಟ್
ಪುತ್ತೂರು: ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ‘ವ್ಯಾಪಾರ, ಬಲ ಮತ್ತು ಸ್ವಾಯತ್ತತೆ’ ಎಂಬ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವು ನಡೆಯಿತು. ಈ ಕಾರ್ಯಕ್ರಮವನ್ನು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು(ರಿ.) ಇದರ ಕಾರ್ಯದರ್ಶಿಯಾಗಿರುವ ಡಾ. ಕೆ. ಎಂ. ಕೃಷ್ಣ ಭಟ್ ಸರ್ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಇಂದಿನ ಡಿಜಿಟಲ್ ಯುಗದಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ರಾಜಕಾರಣ ಬದಲಾಗಿದೆ. ಜೊತೆಗೆ ದೇಶದ ಬೆಳವಣಿಗೆಯಲ್ಲಿ ಯುವಶಕ್ತಿ ಪ್ರಮುಖ ಪಾತ್ರ ವಹಿಸುತ್ತದೆ. ಅದಕ್ಕಾಗಿ ಯುವಜನರನ್ನು ತಯಾರು ಮಾಡುವ ಜವಾಬ್ದಾರಿ ನಮ್ಮ ಮುಂದಿದೆ. ಹೊಸ ಚಿಂತನೆಗಳು ಹಾಗೂ ಉದ್ಯಮಶೀಲತೆಯನ್ನು ಬೆಳೆಸಬಲ್ಲ ಪರಿಸರ ನಿರ್ಮಾಣ ಆಗಬೇಕು. ಯುವಕರ ಬೌದ್ಧಿಕ ಸಾಮರ್ಥ್ಯ ಹೆಚ್ಚಬೇಕು. ಅದಕ್ಕಾಗಿ ಉತ್ತಮ ಗುಣಮಟ್ಟದ, ಹೊಸ ಚಿಂತನೆ, ಕ್ರಿಯಾಶೀಲತೆ ಅರಳಬೇಕಾದರೆ ಮುಕ್ತ ವಾತಾವರಣ ಬೇಕು. ಚರ್ಚೆ, ಸಂವಾದ ಇದ್ದ ಕಡೆ ಹೊಸ ಹೊಸ ವಿಚಾರಗಳು ಹುಟ್ಟಿಕೊಳ್ಳುತ್ತವೆ. ಅದಕ್ಕಾಗಿ ಇಂತಹ ವಿಚಾರ ಸಂಕಿರಣಗಳು ಅತ್ಯಂತ ಅಗತ್ಯ ವಾಗಿದೆ. ಇದರ ಪ್ರಯೋಜನವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಿ ಎಂದರು.
ಈ ರಾಷ್ಟ್ರೀಯ ವಿಚಾರಣ ಸಂಕಿರಣದಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯದ ಅರ್ಥ ಶಾಸ್ತ್ರ ವಿಭಾಗದ ವಿಶ್ರಾಂತ ಪ್ರಾಧ್ಯಾಪಕರು ಹಾಗೂ ವಿವೇಕಾನಂದ ಮಹಾವಿದ್ಯಾಲಯ(ಸ್ವಾಯತ್ತ) ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾಗಿರುವ ಡಾ. ಶ್ರೀಪತಿ ಕಲ್ಲುರಾಯ ದಿಕ್ಸುಚಿ ಭಾಷಣ ಮಾಡಿ, ಇಂದು ನಮ್ಮ ಭಾರತ ದೇಶವು ತಾಂಂತ್ರಿಕ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ಬಹಳಷ್ಟು ಮುಂದುವರೆದಿದೆ. ಅದೇ ರೀತಿ ಅಂತಾರಾಷ್ಟ್ರೀಯ ವ್ಯಾಪಾರದ ನಿಯಮಗಳು ಬದಲಾಗಿ ದೇಶ ದೇಶಗಳ ನಡುವೆ ಸ್ಪರ್ಧೆಗಳು ಜಾಸ್ತಿಯಾಗಿದ್ದು, ವಿಶ್ವದಲ್ಲಿಯೇ ವಿಶಿಷ್ಟ ಸ್ಥಾನವನ್ನು ಹೊಂದಿರುವ ಭಾರತ ಇಂದು ಜಾಗತಿಕ ನಾಯಕನಾಗುವ ಹಂತದಲ್ಲಿದೆ. ಜೊತೆಗೆ ಭಾರತ ಸರ್ಕಾರ ಪ್ರೊಡಕ್ಷನ್ ಲಿಂಕ್ಟ್ ಇನ್ಸೆಂಟಿವ್(ಪಿಎಲ್ಐ) ಯೋಜನೆ ಜಾರಿಗೆ ತಂದಿದೆ. ಭಾರತದಲ್ಲೇ ತಯಾರಾಗುವ ಕೆಲವು ಉತ್ಪನ್ನಗಳಿಗೆ ಸಬ್ಸಿಡಿ ಕೊಡಲಾಗುತ್ತದೆ. ಈ ಸಂದರ್ಭದಲ್ಲಿ ಭಾರತಕ್ಕೆ ಎದುರಾಗಿರುವ ವಿವಿಧ ಸಮಸ್ಯೆಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡು ಅದಕ್ಕೆ ಪ್ರತಿಕ್ರಿಯೆಯನ್ನು ನೀಡಬೇಕು. ಆ ರೀತಿ ಮಾಡಿದ್ದಲ್ಲಿ ಅತ್ಯುತ್ತಮವಾದ ಸ್ಥಾನಮಾನ ಪಡೆಯಲು ಸಾಧ್ಯವಾಗುತ್ತದೆ ಎಂದರು. ಹೆಚ್ಚಿನ ಉಳಿತಾಯ ಮತ್ತು ಹೂಡಿಕೆ ದರ, ಕೌಶಲ್ಯಯುತ ಯುವ ಸಮೂಹ, ಸುಸ್ಥಿರ ಹಣಕಾಸು ನೀತಿ ಹಾಗೂ ದೇಶೀಯ ಬೇಡಿಕೆಯ ಮೇಲಿನ ಅವಲಂಬನೆಯೇ ಭಾರತದ ಪ್ರಮುಖ ಶಕ್ತಿಗಳಾಗಿವೆ. ಇವುಗಳನ್ನು ಸರಿಯಾಗಿ ಬಳಸಿಕೊಂಡಲ್ಲಿ ಜಾಗತಿಕವಾದ ಆರ್ಥಿಕ ಸ್ಪರ್ಧೆಯನ್ನು ಸುಲಭವಾಗಿ ಎದುರಿಸಬಹುದು ಎಂದು ವಿವರಿಸಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ವಿವೇಕಾನಂದ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುರೇಂದ್ರ ಕಿಣಿ ಜಿ. ಮಾತನಾಡಿ, ಪ್ರಧಾನಿ ಮೋದಿ ಈಗಾಗಲೇ ಭಾರತದ ಆರ್ಥಿಕತೆಯನ್ನು ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಮೋದಿಯವರ ವೊಕಲ್ ಫಾರ್ ಲೋಕಲ್ ನಂತಹ ಹಲವು ಯೋಜನೆಗಳು ಭಾರತದ ಶಕ್ತಿ ಸಾಮರ್ಥ್ಯವನ್ನು ಹೆಚ್ಚಿಸಿದೆ. ನಾವು ಸಹಾ ಅದಕ್ಕೆ ಪೂರಕವಾಗಿ ಸಹಕರಿಸಿದ್ದಲ್ಲಿ ಭಾರತ ತನ್ನ ಗುರಿಯನ್ನು ಸುಲಭದಲ್ಲಿ ತಲುಪಬಹುದು ಎಂದರು.
ವೇದಿಕೆಯಲ್ಲಿ ಕಾನೂನು ಮಹಾವಿದ್ಯಾಲಯದ ಸಂಚಾಲಕರಾದ ವಿಜಯನಾರಾಯಣ ಕೆ. ಎಂ., ಪಾಂಡಿಚೇರಿ ವಿಶ್ವವಿದ್ಯಾನಿಲಯದ ರಾಜಕೀಯ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳು ವಿಭಾಗದ ಸಹಾ ಪ್ರಾಧ್ಯಾಪಕರಾಗಿರುವ ಡಾ. ನಂದಕಿಶೋರ್ ಎಂ.ಎಸ್., ರಾಜಕೀಯ ಮತ್ತು ಆರ್ಥಿಕ ವಿಶ್ಲೇಷಕ, ವಿವೇಕಾನಂದ ಪಾಲಿಟೆಕ್ನಿಕ್ ವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷರಾಗಿರುವ ಶ್ರೀ ವಿಶ್ವೇಶ್ವರ ಭಟ್ ಬಂಗಾರಡ್ಕ, ಮಹಾವಿದ್ಯಾಲಯದ ಕಾನೂನು ಅದ್ಯಯನ ವಿಭಾಗದ ನಿರ್ದೇಶಕರಾಗಿರುವ ಡಾ. ಬಿ. ಕೆ. ರವೀಂದ್ರ ಹಾಗೂ ಮಹಾವಿದ್ಯಾಲಯದ ಅರ್ಥಶಾಸ್ತ್ರ ಸಹಾಯಕ ಪ್ರಾಧ್ಯಾಪಕರಾಗಿರುವ ಶ್ರೀಕೃಷ್ಣ ಭಟ್ ಉಪಸ್ಥಿತರಿದ್ದರು.
ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಶ್ರೀಮತಿ ಅಕ್ಷತಾ ಎ. ಪಿ. ಸ್ವಾಗತಿಸಿ, ಕಾರ್ಯಕ್ರಮದ ಸಂಯೋಜಕರಾದ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಲಕ್ಷ್ಮೀಕಾಂತ ಎ. ವಂದಿಸಿದರು. ಕಾನೂನು ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ರೇಖಾ ಕೆ. ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕರು, ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕ- ರಕ್ಷಕ ಸಂಘ, ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯರು, ಪುತ್ತೂರಿನ ವಿವಿಧ ಕಾಲೇಜುಗಳ ಉಪನ್ಯಾಸಕರು, ವಿದ್ಯಾರ್ಥಿಗಳು, ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಎರಡು ವಿಶೇಷ ವಿಚಾರಗೋಷ್ಠಿಗಳು ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ
ಇಂದಿನ ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಎರಡು ವಿಚಾರಗೋಷ್ಠಿ ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ಮೊದಲ ವಿಚಾರಗೋಷ್ಠಿಯನ್ನು ಪಾಂಡಿಚೇರಿ ವಿಶ್ವವಿದ್ಯಾನಿಲಯದ ರಾಜಕೀಯ ಮತ್ತು ಅಂತಾರಾಷ್ಟ್ರೀಯ ಅಧ್ಯಯನ ವಿಭಾಗದ ಸಹಾ ಪ್ರಾಧ್ಯಾಪಕರಾಗಿರುವ ಡಾ. ನಂದಕಿಶೋರ್ ಎಂ. ಎಸ್. ನಡೆಸಿಕೊಟ್ಟರು. ಅದೇ ರೀತಿ ಎರಡನೇ ವಿಚಾರಗೋಷ್ಠಿಯನ್ನು ರಾಜಕೀಯ ಮತ್ತು ಆರ್ಥಿಕ ವಿಶ್ಲೇಷಕ ಹಾಗೂ ವಿವೇಕಾನಂದ ಪಾಲಿಟೆಕ್ನಿಕ್ ವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷರಾಗಿರುವ ವಿಶ್ವೇಶ್ವರ ಭಟ್ ಬಂಗಾರಡ್ಕ ರವರು ನಡೆಸಿಕೊಟ್ಟರು. ನಂತರ ಇಬ್ಬರೂ ಸಂಪನ್ಮೂಲ ವ್ಯಕ್ತಿಗಳು ವಿದ್ಯಾರ್ಥಿಗಳೊಂದಿಗೆ ವಿಶೇಷ ಸಂವಾದ ಕಾರ್ಯಕ್ರಮ ನಡೆಸಿದರು. ಈ ಸಂವಾದ ಕಾರ್ಯಕ್ರಮವನ್ನು ಕಾನೂನು ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸಂಗೀತಾ ಎಸ್. ಎಂ. ನಿರೂಪಿಸಿದರು.