ಪುತ್ತೂರು: ತಿಂಗಳಾಡಿ ಸಮೀಪದ ಕನ್ನಡಮೂಲೆ ಎಂಬಲ್ಲಿ ಪುನರ್ ನಿರ್ಮಾಣಗೊಂಡಿರುವ ಶ್ರೀ ಅಯ್ಯಪ್ಪ ಮಂದಿರ ಪುನರ್ಪ್ರತಿಷ್ಠಾ ಮಹೋತ್ಸವ ಡಿ.31ಮತ್ತು ಜ. 1ರಂದು ನಡೆಯಲಿದ್ದು, ಈ ಸಂಬಂಧ ಬಾಲಾಲಯ ಪ್ರತಿಷ್ಠೆ ಮತ್ತು ಆಮಂತ್ರಣ ಪತ್ರಿಕೆ ಬಿಡುಗಡೆ ನ.9ರಂದು ನಡೆಯಿತು.
ಎಸ್ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಬಿ. ಜಯರಾಮ ರೈ ಬಳಜ್ಜ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು. ಈ ಪರಿಸರದಲ್ಲಿ ಕನ್ನಡಮೂಲೆ ಅಯ್ಯಪ್ಪ ಮಂದಿರ ಅಪೂರ್ವ ಕ್ಷೇತ್ರವಾಗಿದೆ. ಮಂದಿರ ಪುನರ್ ನಿರ್ಮಾಣಗೊಂಡಿರುವುದು ಸಂತೋಷದ ವಿಚಾರ. ಶಬರಿಮಲೆ ಕ್ಷೇತ್ರಕ್ಕೆ ಅಯ್ಯಪ್ಪ ಮಾಲಾಧಾರಿಯಾಗಿ ಹೋಗಲಾರಂಭಿಸಿದ ಬಳಿಕ ತಿಮ್ಮಪ್ಪ ಗುರುಸ್ವಾಮಿ ಅವರು ಆರಂಭಿಸಿದ ಅಯ್ಯಪ್ಪನ ಆರಾಧನೆ ಈ ಮಣ್ಣಿನಲ್ಲಿ ಹೊಸ ಚೈತನ್ಯ ತುಂಬಿಸಿದ್ದು, ಮಂದಿರ ಭವ್ಯವಾಗಿ ಪುನರ್ ನಿರ್ಮಾಣಗೊಂಡಿದೆ ಎಂದರು.
ಕೆದಂಬಾಡಿ- ಕೆಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಕೃಷ್ಣಕುಮಾರ್ ರೈ ಕೆದಂಬಾಡಿ ಗುತ್ತು, ಸ್ಥಳೀಯ ಪ್ರಮುಖರಾದ ಚಂದ್ರಶೇಖರ ಸುವರ್ಣ ಸೊರಕೆ ತರವಾಡು ಬೀಡು, ವಿಶ್ವನಾಥ ಶೆಟ್ಟಿ ಸಾಗು, ಚಂದ್ರಶೇಖರ ಗೌಡ ನೆಲ್ಲಿಗುರಿ ಮತ್ತು ಅಣ್ಣು ತಿಂಗಳಾಡಿ ಶುಭ ಹಾರೈಸಿದರು. ಪತ್ರಕರ್ತ ಸುಧಾಕರ ಸುವರ್ಣ ತಿಂಗಳಾಡಿ ಕಾರ್ಯಕ್ರಮ ನಿರ್ವಹಿಸಿದರು.
ಇದಕ್ಕೂ ಮೊದಲು ಕ್ಷೇತ್ರದ ತಿಮ್ಮಪ್ಪ ಗುರುಸ್ವಾಮಿ ಅವರ ನೇತೃತ್ವದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜೆ, ಸಾಮೂಹಿಕ ಪ್ರಾರ್ಥನೆ, ಬಾಲಾಲಯ ಪ್ರತಿಷ್ಠೆ ನಡೆಯಿತು. 40 ವರ್ಷಗಳ ಹಿಂದೆ ಸಣ್ಣ ಪ್ರಮಾಣದಲ್ಲಿ ಆರಂಭಿಸಿದ ಶ್ರೀ ಅಯ್ಯಪ್ಪ ಸೇವೆ ಮಾಲಾಧಾರಿ ಭಕ್ತರ ವಾರ್ಷಿಕ ವ್ರತಾಚರಣೆಗೆ ವರದಾನವಾಯಿತು. ಶ್ರೀಸ್ವಾಮಿಯ ಅನುಗ್ರಹದಿಂದ ಮಂದಿರ ನಿರ್ಮಾಣಗೊಂಡು ನಿರಂತರ ಪೂಜೆ ನಡೆಯುತ್ತಾ ಬಂದಿದೆ. ಹಳೆಯ ಮಂದಿರ ಶಿಥಿಲಗೊಂಡ ಕಾರಣ ಈಗ ಹೊಸ ಮಂದಿರ ನಿರ್ಮಿಸಲಾಗಿದೆ ಎಂದರು. ಡಿ.31ರಂದು ರಾತ್ರಿ ವಾಸ್ತು ಪೂಜೆ, ವಾಸ್ತು ಬಲಿ ನಡೆಯಲಿದೆ. ಜ.1ರಂದು ಗಣಹೋಮ, ನಾಗ ಸಾನಿಧ್ಯದಲ್ಲಿ ಆಶ್ಲೇಷ ಬಲಿ, ನಾಗತಂಬಿಲ ನಡೆದು ಬಳಿಕ ನೂತನ ಮಂದಿರದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಯ ಭಾವಚಿತ್ರ ಪ್ರತಿಷ್ಠೆಯಾಗಲಿದೆ. ಬಳಿಕ ಶ್ರೀ ಸತ್ಯನಾರಾಯಣ ಪೂಜೆ, ಅಯ್ಯಪ್ಪ ಸ್ವಾಮಿ ಮಹಾಪೂಜೆ ನಡೆಯಲಿದೆ ಎಂದು ತಿಳಿಸಿದರು.
