ಪಡ್ನೂರು :ಅಶೋಕ ಜನಮನ ಉಡುಗೊರೆ ವಿತರಣೆ

0

ಬಡವರಿಗೆ ಸಹಾಯ ಮಾಡುವುದನ್ನು ವ್ಯಂಗ್ಯ ಮಾಡಿದ್ದು ಅತ್ಯಂತ ಬೇಸರ ತಂದಿದೆ; ಶಾಸಕ ರೈ

ಪುತ್ತೂರು: ನಾನು ಕಳೆದ 13 ವರ್ಷಗಳಿಂದ ದೀಪಾವಳಿಯಂದು ತನ್ನಿಂದಾದ ಉಡುಗೊರೆಯನ್ನು ಬಡವರಿಗೆ ನೀಡುತ್ತಿದ್ದೇನೆ, ಯಾವತ್ತೂ ರಾಜಕೀಯ ಉದ್ದೇಶ ಇಟ್ಟು ಉಡುಗೊರೆ ನೀಡಿಲ್ಲ ಆದರೆ ಅಶೋಕ ಜನಮನ ಕಾರ್ಯಕ್ರಮ ಈ ಬಾರಿ ಮಳೆಯಿಂದ ಮತ್ತು ನಿರೀಕ್ಷೆಗೂ ಮೀರಿದ ಜನ ಆಗಮಿಸಿದ ಕಾರಣ ಸ್ವಲ್ಪ ತೊಂದರೆಯಾಗಿತ್ತು ಇದನ್ನೂ ವ್ಯಂಗ್ಯ ಮಾಡಲು ಮನಸ್ಸಾದರೂ ಹೇಗೆ ಬರುತ್ತದೆ, ಬಡವರಿಗೆ ಸಹಾಯ ಮಾಡಿದ್ದನ್ನು ವ್ಯಂಗ್ಯ , ಟೀಕೆ ಮಾಡಿದ್ದು ನನಗೆ ಅತ್ಯಂತ ಬೇಸರ ತಂದಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು.

ಅವರು ಪಡ್ನೂರು ಗ್ರಾಮದಲ್ಲಿ ಅಶೋಕ ಜನಮನದ ಉಡುಗೊರೆಯನ್ನು ವಿತರಿಸಿ ಮಾತನಾಡಿದರು.

ಕೊಂಬೆಟ್ಟು ಕ್ರೀಡಾಂಗಣದಲ್ಲಿ ನಡೆದ ಅಶೋಕ ಜನಮನ ಕಾರ್ಯಕ್ರಮಕ್ಕೆ ಬಂದು ಉಡುಗೊರೆ ಪಡೆಯಲು ಸಾಧ್ಯವಾಗದೆ ಅನೇಕ ಮಂದಿ ಬರಿಗಯ್ಯಲ್ಲಿ ಮರಳಿದ್ದು, ಈ ಕಾರಣಕ್ಕೆ ಉಡುಗೊರೆಯನ್ನು ಗ್ರಾಮಗಳಿಗೆ ತೆರಳಿ ವಿತರಣೆ ಮಾಡುತ್ತಿದ್ದೇವೆ, ಇದು ಅತ್ಯಂತ ಕಷ್ಟದ ಕೆಲಸ ಎಂದು ಗೊತ್ತಿದೆ ಆದರೆ ಯಾರ ಮನಸ್ಸಿಗೂ ಉಡುಗೊರೆ ಸಿಕ್ಕಿಲ್ಲ ಎಂಬ ಬೇಸರ ಇರಬಾರದು ಅದನ್ನು ಸಹಿಸಲು ನನ್ನಿಂದ ಸಾಧ್ಯವಿಲ್ಲ ಎಂದು ಹೇಳಿದರು.

ಕೋಟಿ ಖರ್ಚಾದರೂ ಪರವಾಗಿಲ್ಲ ಉಡುಗೊರೆ ಎಲ್ಲರಿಗೂ ಕೊಡುವೆ
ಎರಡನೇ ಬಾರಿಗೆ ಈ ವರ್ಷದ ಉಡುಗೊರೆಯನ್ನು ನೀಡುತ್ತಿದ್ದೇನೆ. ಗ್ರಾಮ ಗ್ರಾಮದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಪ್ರತೀಯೊಬ್ಬರೂ ಭಾಗವಹಿಸಬೇಕು. ಎಷ್ಟೇ ಕೋಟಿ ಖರ್ಚಾದರೂ ಪರವಾಗಿಲ್ಲ ಉಡುಗೊರೆಯನ್ನು ಕೊಟ್ಟೇ ಕೊಡ್ತೇನೆ ಎಂದು ಶಾಸಕರು ಹೇಳಿದರು. ನನ್ನ ಕಾರ್ಯಕ್ರಮಕ್ಕೆ ಯರೂ ಉಡುಗೊರೆಯ ಆಸೆಯಿಂದ ಬರುತ್ತಿಲ್ಲ, ಪ್ರೀತಿಯಿಂದ ಆಶೀರ್ವಾದ ಮಾಡಲು ಬರುತ್ತಿದ್ದಾರೆ, ಆಶೀರ್ವಾದ ಮಾಡಿದವರನ್ನು ಬರಿಗೈಯ್ಯಲ್ಲಿ ಕಳುಹಿಸುವುದು ಭಾರತೀಯ ಸಂಸ್ಕೃತಿಯಲ್ಲ ಆ ಕಾರಣಕ್ಕೆ ನಾನು ನನ್ನ ಕ್ಷೇತ್ರದ ಬಂಧುಗಳಿಗೆ ಇದನ್ನು ವಿತರಣೆ ಮಾಡುತ್ತಿದ್ದೇನೆ, ಆಯಾ ಗ್ರಾಮದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಆಯಾ ಗ್ರಾಮಸ್ಥರು ಭಾಗವಹಿಸಿ ಆಶೀರ್ವಾದ ಮಾಡಬೇಕು ಎಂದು ಶಾಸಕರು ಮನವಿ ಮಾಡಿದರು.

ಸಂಜೀವ ಮಠಂದೂರು ಟೀಕೆ ಮಾಡಬಾರದಿತ್ತು: ಪಂಜಿಗುಡ್ಡೆ ಈಶ್ವರಭಟ್
ಪುತ್ತೂರು ಶ್ರಿ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಪಂಜಿಗುಡ್ಡೆ ಈಶ್ವರಭಟ್ ಮಾತನಾಡಿ, ಮಾಜಿ ಶಾಸಕ ಸಂಜೀವ ಮಠಂದೂರು ಅವರು ಒಬ್ಬ ಮಾಜಿ ಶಾಸಕರಾಗಿದ್ದು ಅಶೋಕ ಜನಮನದ ಬಗ್ಗೆ ಕೆಟ್ಟ ರೀತಿಯಲ್ಲಿ ಟೀಕೆ ಮಾಡಬಾರದಿತ್ತು. ಶಾಸಕರು ಪ್ರೀತಿಯಿಂದ ಬಡವರ ಜೊತೆ ದೀಪಾವಳಿ ಆಚರಣೆ ಮಾಡಿದ್ದು ಅದರಲ್ಲೂ ತಪ್ಪು ಹುಡಕುವ ಕೆಲಸ, ಕಾರ್ಯಕ್ರಮದ ಚೆಯರ್ ಎಣಿಸುವ ಕೆಲಸವನ್ನು ಮಾಜಿ ಶಾಸಕರು ಮಾಡಬಾರದಿತ್ತು ಅದು ಅವರ ಯೋಗ್ಯತೆಗೆ ತಕ್ಕುದಲ್ಲ. ಕಾರ್ಯಕ್ರಮದಲ್ಲಿ ಸೇರಿದ ಜನರನ್ನು ಕಂಡು ನಂಜು ಸಹಿಸಲಾಗದೆ ಬಾಯಿಗೆ ಬಂದಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ. ದೇವಸ್ಥಾನದ ಗದ್ದೆಯಲ್ಲಿ ವಾಹನ ನಿಲ್ಲಿಸಿದ್ದಾರೆ ಎಂದು ಆಕ್ಷೇಪ ಮಾಡಿದ್ದರು, ಆದರೆ ಮೊನ್ನೆ ನಡೆದ ಪಕ್ಷವೊಂದರ ಕಾರ್ಯಕ್ರಮದಂದು ಅದೇ ದೇವಸ್ಥಾನದ ಗದ್ದೆಯಲ್ಲಿ ವಾಹನ ನಿಲ್ಲಿಸಲಾಗಿತ್ತು ಇದಕ್ಕೆ ದೇವಳದ ವತಿಯಿಂದ ಪರವಾನಿಗೆಯನ್ನು ಪಡೆದಿರಲಿಲ್ಲ. ನಂಜು ಇದ್ದವರು ಬರ್ಕತ್ತಾಗುವುದಿಲ್ಲ ಎಂಬ ಮಾತು ಜನಜನಿತವಾಗಿದೆ ಇದೇ ಕಾರಣಕ್ಕೆ ಶ್ರೀ ಮಹಾಲಿಂಗೇಶ್ವರ ಮಠಂದೂರಿಗೆ ಮನೆಯಲ್ಲೇ ಇರುವಂತೆ ಮಾಡಿದ್ದಾನೆ. ಮಹಾಲಿಂಗೇಶ್ವರನ ಮಣ್ಣಿನಲ್ಲಿ ಸತ್ಯಕ್ಕೆ ಬೆಲೆ ಇದೆ, ಗೌರವ ಇದೆ. ಅನಾವಶ್ಯಕವಾಗಿ ಇನ್ನೊಬ್ಬರ ಮನಸ್ಸಿಗೆ ನೋವು ಮಾಡುವ ಕೆಲಸವನ್ನು ಯಾರೂ ಮಾಡಬಾರದು ಎಂದು ಹೇಳಿದರು.

ಎಲ್ಲರಿಗೂ ಉಡುಗೊರೆ: ಸುದೇಶ್ ಶೆಟ್ಟಿ
ಪ್ರತೀ ಗ್ರಾಮದಲ್ಲಿ ಅಶೋಕ ಜನಮನದ ಉಡುಗೊರೆಯನ್ನು ವಿತರಣೆ ಮಾಡಲಿದ್ದೇವೆ. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಂಧುಗಳು ಭಾಗವಹಿಸುತ್ತಿರುವುದು ಸಂತಸವನ್ನು ತಂದಿದೆ. ಮುಂದಿನ ವರ್ಷ ಗ್ರಾಮ ಗ್ರಾಮದಲ್ಲಿ ವಿತರಣೆ ಇರುವುದಿಲ್ಲ. ಈ ಬಾರಿ ಸ್ವಲ್ಪ ತೊಂದರೆಯಾಗಿರುವ ಕಾರಣ ನಿಮ್ಮ ಮನೆ ಬಾಗಿಲಿಗೆ ಬಂದು ನೀಡುತ್ತಿದ್ದೇವೆ. ಜಾತಿ, ಮತ ಧರ್ಮ ಭೇಧವಿಲ್ಲದೆ ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ರೈ ಚಾರಿಟೇಬಲ್ ಟ್ರಸ್ಟ್ ಕಾರ್ಯಾಧ್ಯಕ್ಷರಾದ ಸುದೇಶ್ ಶೆಟ್ಟಿ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಪಡ್ನೂರು ವಲಯ ಕಾಂಗ್ರೆಸ್ ಅಧ್ಯಕ್ಷ ರೋಹನ್ ರಾಜ್, ನಗರ ವಲಯ ಕಾಂಗ್ರೆಸ್ ಅಧ್ಯಕ್ಷ ಲೋಕೇಶ್ ಪಡ್ಡಾಯೂರು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವಿನಯ್ ಸುವರ್ಣ,ರಾಬರ್ಟ್ ಗೊನ್ಸಾಲಿಸ್ , ಹರೀಶ್ ಬಂಗೇರ, ರಾಮಣ್ಣ ಪಿಲಿಂಜ ನವೀನ ಪಡ್ನೂರು, ರಝಾಕ್ , ಇಬ್ರಾಹಿಂ, ಹೈದರ್, ಕಿರಣ್ ,ಗಣೇಶ ಸಫಲ್ಯ, ಶೀನಪ್ಪ ಮುಂಡಾಜೆ,ಸಂಕಪ್ಪ ಗೌಡ ಕುಂಬಾಡಿ, ಶೀನಪ್ಪ ಪೂಜಾರಿ ಪಡ್ನೂರು, ಕುಂಬಾಡಿ ನಾರಾಯಣ, ಗಂಗಾಧರ ಗೌಡ, ನಾರಾಯಣ ಮೂಲ್ಯ, ಮನೋಜ್, ದನಂಜಯ, ಶಾಂತಪ್ಪ ನಾಯ್ಕಮತ್ತಿತರರು ಉಪಸ್ಥಿತರಿದ್ದರು. ಟ್ರಸ್ಟ್ ನ ಯೋಗೀಶ್ ಸಾಮಾನಿ ಸ್ವಾಗತಿಸಿದರು. ಮುರಳೀಕೃಷ್ಣ ಕಡವ ಕಾರ್ಯಕ್ರಮ ನಿರೂಪಿಸಿದರು. ಶಾಸಕರ ಕಚೇರಿ ವ್ಯವಸ್ಥಾಕರಾದ ಪ್ರವೀಣ್ ವಂದಿಸಿದರು, ಕಚೇರಿ ಸಿಬಂದಿ ವಿನೋದ್ ರೈ ಕೊಳ್ತಿಗೆ ಸಹಕರಿಸಿದರು.

LEAVE A REPLY

Please enter your comment!
Please enter your name here