ಪುತ್ತೂರು: ಇದೊಂದು ಮಕ್ಕಳಾಟಿಕೆಯೇ ಅಥವಾ ಕೆಂಪು ಕಲ್ಲಿಗೆ ಬೆಲೆ ಜಾಸ್ತಿಯಾಯಿತೆಂದು ಈ ರೀತಿ ಮಾಡಿದ್ದಾರೋ ಗೊತ್ತಿಲ್ಲ…ಅಂತೂ ಇಂತೂ ಕುಸಿತ ರಸ್ತೆ ಬದಿಗೆ ಗೋಣಿ ಚೀಲವನ್ನೇ ಆಧಾರವನ್ನಾಗಿಸಿಕೊಂಡು ಅದರ ಮೇಲೆ ಕಾಂಕ್ರೀಟೀಕರಣ ಮಾಡಿದ ಘಟನೆ ಪುಣಚ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಲೆತ್ತಡ್ಕದಲ್ಲಿ ನಡೆದಿದೆ. ಪುಣಚ ತೋರಣಕಟ್ಟೆ ರಸ್ತೆ ಬದಿಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಪೈಪು ಅಳವಡಿಕೆಗೆ ತೋಡಿದ ಗುಂಡಿಯಿಂದಾಗಿ ಮಳೆ ನೀರಿಗೆ ರಸ್ತೆ ಬದಿಯ ಮಣ್ಣು ಕೊಚ್ಚಿ ಹೋಗಿ ರಸ್ತೆ ಭಾಗವೂ ಕುಸಿತಕ್ಕೆ ಒಳಗಾಗಿತ್ತು. ಇದನ್ನು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಗುತ್ತಿಗೆದಾರ ವಿಶಿಷ್ಠ ರೀತಿಯಲ್ಲಿ ದುರಸ್ತಿ ಮಾಡಿದ್ದು ಸಾರ್ವಜನಿಕ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ಮಲೆತ್ತಡ್ಕದಲ್ಲಿ ರಸ್ತೆ ಅಗೆದ ಭಾಗದಲ್ಲಿ ಮಣ್ಣು ಮಳೆ ನೀರಿಗೆ ಕೊಚ್ಚಿ ಹೋಗಿ ರಸ್ತೆ ಬದಿಯು ಕುಸಿತಕ್ಕೆ ಒಳಗಾಗುವ ಸಾಧ್ಯತೆ ಇತ್ತು ಇದನ್ನು ತಪ್ಪಿಸುವ ಸಲುವಾಗಿ ಮಣ್ಣು ಜರಿದ ಭಾಗಕ್ಕೆ ಗೋಣಿ ಚೀಲದಲ್ಲಿ ಮಣ್ಣು ತುಂಬಿಸಿ ಅದನ್ನು ದಿಬ್ಬದ ಥರ ಇಟ್ಟು ಅದರ ಮೇಲೆ ಕಾಂಕ್ರೀಟ್ ಹಾಕಿ ಸಮತಟ್ಟು ಮಾಡಲಾಗಿದೆ. ಕಲ್ಲು ಕಟ್ಟಿ ತಡಗೋಡೆಯ ಥರ ಮಾಡಬೇಕಾದ ಜಾಗಕ್ಕೆ ಕೇವಲ ಗೋಣಿ ಚೀಲವನ್ನು ಆಧಾರವಾಗಿಸಿಕೊಂಡು ಅದರ ಮೇಲೆ ಕಾಂಕ್ರೀಟ್ ಹಾಕಿರುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.ಘನ ವಾಹನಗಳು ರಸ್ತೆ ಬದಿಯಿಂದ ಹಾದು ಹೋಗುವಾಗ ಇದು ಜರಿದು ಬೀಳುವ ಸಾಧ್ಯತೆ ಕೂಡ ಹೆಚ್ಚಿದೆ. ಕೇವಲ ಸಾರ್ವಜನಿಕರ ಕಣ್ಣಿಗೆ ಮಣ್ಣೆರೆಚುವ ಕೆಲಸವನ್ನು ಇಲ್ಲಿ ಗುತ್ತಿಗೆದಾರರ ಮಾಡಿದ್ದಾರೆ ಎಂದು ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಲೋಕಾಯುಕ್ತಕ್ಕೂ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಕಬ್ಬಿಣದ ಸಲಾಕೆ ಇಟ್ಟು ಕಾಂಕ್ರೀಟ್…!
ಬರೀ ಗೋಣಿ ಚೀಲವನ್ನಿಟ್ಟು ಅದರ ಮೇಲಿಂದ ಕಾಂಕ್ರೀಟ್ ಮಾಡಲಾಗುತ್ತದೆ ಎಂಬ ಬಗ್ಗೆ ಸುದ್ದಿ ಹಬ್ಬುತ್ತಿದ್ದಂತೆ ಇದೀಗ ಗುತ್ತಿಗೆದಾರರು ಕಣಿಯ ಕೆಲ ಭಾಗದಿಂದ ಕಬ್ಬಿಣದ ಸಲಾಕೆ ಇಟ್ಟು ಕಾಂಕ್ರೀಟೀಕರಣ ಮಾಡಲು ಮುಂದಾಗಿದೆ. ಈಗಾಗಲೇ ಕಬ್ಬಿಣದ ಸಲಾಕೆಗಳನ್ನು ಇಡಲಾಗಿದ್ದು ಮುಂದಿನ ದಿನಗಳಲ್ಲಿ ಕಾಂಕ್ರೀಟ್ ಮಾಡಲಾಗುತ್ತದೆ ಆದರೆ ಗೋಣಿ ಚೀಲವನ್ನು ಮಾತ್ರ ಹಾಗೆಯೇ ಬಿಟ್ಟು ಅದರ ಬದಿಯಿಂದಲೇ ಕಬ್ಬಿಣದ ಸಲಾಕೆಯನ್ನು ಇಟ್ಟು ಕಾಂಕ್ರೀಟ್ ಮಾಡಲಾಗುತ್ತಿದೆ.
‘ಗೋಣಿ ಚೀಲ ಇಟ್ಟು ಕಾಂಕ್ರೀಟ್ ಮಾಡಲಾಗುತ್ತಿರುವ ವಿಷಯ ನನ್ನ ಗಮನಕ್ಕೆ ಬಂದಿದ್ದು ಈ ಬಗ್ಗೆ ಪರಿಶೀಲನೆ ಮಾಡಿದ್ದೇನೆ. ಜಾಗದ ಕೊರತೆ ಮತ್ತು ಮುಂದಿನ ದಿನಗಳಲ್ಲಿ ರಸ್ತೆ ಅಗಲೀಕರಣವಾಗಲಿರುವುದರಿಂದ ಈ ರೀತಿ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಆದರೆ ಇದೀಗ ಕಬ್ಬಿಣದ ಸಲಾಕೆ ಇಟ್ಟು ಕಾಂಕ್ರೀಟ್ ಮಾಡಲಾಗುತ್ತಿದೆ.’
ತೀರ್ಥಾರಾಮ ನಾಯಕ್,
ಸದಸ್ಯರು ಪುಣಚ ಗ್ರಾ.ಪಂ.