




ಪುತ್ತೂರು: ಕೇಂದ್ರೀಯ ಸರಕು ಮತ್ತು ಸೇವಾ ತೆರಿಗೆ ಇಲಾಖೆಯ ಅಧಿಕಾರಿಗಳು ನ.29ರಂದು ಮಹಾರಾಷ್ಟ್ರದ ರಾಯಗಡ ಜಿಲ್ಲೆಯಲ್ಲಿ ಇಂಡೋನೇಷ್ಯಾದಿಂದ ನಿಷೇಧಿತ ಮತ್ತು ಕ್ಯಾನ್ಸರ್-ಕಾರಕ ಅಡಿಕೆಯನ್ನು ಕಳ್ಳಸಾಗಣೆ ಮಾಡುತ್ತಿದ್ದ ಜಾಲವನ್ನು ಭೇದಿಸಿದ್ದಾರೆ. ಮಂಗಳೂರಿನಿಂದ ಕೋಲಾಡ್ ಗೆ ಬಂದಿದ್ದ ರೋರೋ ರೈಲ್ವೆ ವ್ಯಾಗನ್ಗಳಲ್ಲಿದ್ದ 11 ಲಾರಿಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಲಾರಿಗಳಲ್ಲಿ ₹300 ಕೋಟಿ ಮೌಲ್ಯದ ಅಡಿಕೆಯನ್ನು ವಶಪಡಿಸಿಕೊಳ್ಳಲಾಗಿದೆ.




ಅಡಿಕೆಯನ್ನು ರಾಯಗಡದಿಂದ ಮಹಾರಾಷ್ಟ್ರದ ನಾಗಪುರಕ್ಕೆ ಸಾಗಿಸಿ, ಅಲ್ಲಿಂದ ಗುಟ್ಕಾ ಮತ್ತು ಪಾನ್ ಮಸಾಲಾ ತಯಾರಿಸುವ ಬಹುತೇಕ ತಂಬಾಕು ಉದ್ದಿಮೆಗಳಿಗೆ ವಿತರಿಸುವ ಯೋಜನೆ ರೂಪಿಸಲಾಗಿತ್ತು. ಈ ಸರಕಿನ ಜಿಎಸ್ಟಿ ಪ್ರಮಾಣಪತ್ರ ‘ಎನ್.ಡಿ ಟ್ರೇಡರ್ಸ್’ ಎಂಬ ಸಂಸ್ಥೆಯ ಹೆಸರಿನಲ್ಲಿದ್ದು, ಇದರ ಮಾಲೀಕರು ಮಂಗಳೂರು ಮೂಲದ ವ್ಯಕ್ತಿಯಾಗಿದ್ದಾರೆ ಎಂದು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಆದರೆ ಈ ಸಂಸ್ಥೆಯ ಮಾಲೀಕರು ಕಡಿಮೆ ಆದಾಯದ ಗುಂಪಿಗೆ ಸೇರಿದವರಾಗಿದ್ದು, ತಿಂಗಳಿಗೆ ಕೇವಲ ₹10,000 ಮಾತ್ರ ವರಮಾನವಿರುವ ಅಂಶ ಬೆಳಕಿಗೆ ಬಂದಿದೆ.





ಈ ಅಕ್ರಮ ಕಳ್ಳಸಾಗಣೆ ಜಾಲದ ಹಿಂದಿರುವ ಪ್ರಮುಖ ರೂವಾರಿಗಳನ್ನು ಸಮೀರ್ ಖಾನ್ ಮತ್ತು ಖಾದರ್ ಖಾನ್ ಎಂದು ಗುರುತಿಸಲಾಗಿದೆ. ಇವರು ಇಂಡೋನೇಷ್ಯಾದಿಂದ ಅಡಿಕೆಯನ್ನು ಕೇರಳಕ್ಕೆ ಸಾಗಿಸಿ ನಂತರ ಹೊಳಪು ನೀಡಲು ಮತ್ತು ಗ್ರೇಡಿಂಗ್ ಗಾಗಿ ಮಂಗಳೂರಿಗೆ ಕಳುಹಿಸುತ್ತಿದ್ದರು ಎನ್ನಲಾಗಿದೆ. ಬಳಿಕ ಈ ಅಡಿಕೆಗಳನ್ನು ಲಾರಿಯಲ್ಲಿ ತುಂಬಿಸಿ ರೋರೋ ರೈಲ್ವೆ ವ್ಯಾಗನ್ಗಳ ಮೂಲಕ ರಾಯಗಡಕ್ಕೆ ಸಾಗಿಸಿ ಅಲ್ಲಿಂದ ರಸ್ತೆಯ ಮೂಲಕ ನಾಗ್ಪುರ ತಲುಪಿಸುವ ಯೋಜನೆ ಹಾಕಿಕೊಳ್ಳಲಾಗಿತ್ತು. ಕಡಿಮೆ ಗುಣಮಟ್ಟದ ಅಡಿಕೆಗಳನ್ನು ದೇಶದೊಳಗೆ ಕಳ್ಳಸಾಗಣೆ ಮೂಲಕ ತರಿಸಿ ಮಂಗಳೂರಿನ ಗೋದಾಮುಗಳಲ್ಲಿ ಕ್ಯಾನ್ಸರ್ ಕಾರಕ ರಾಸಾಯನಿಕಗಳನ್ನು ಬಳಸಿ ಹೊಳಪು ನೀಡಿ ಗ್ರೇಡಿಂಗ್ ಮಾಡುವ ಮೂಲಕ ಅಕ್ರಮವಾಗಿ ದೇಶಾದಾದ್ಯಂತ ವಿತರಿಸಲಾಗುತ್ತಿತ್ತು. ಇದು ಕ್ಯಾನ್ಸರ್ ಪಿಡುಗಿಗೆ ಕಾರಣವಾಗಿತ್ತು. ಕಳೆದ ಕೆಲವು ವರ್ಷಗಳಿಂದ ಸಿಬಿಐ, ಇಡಿ, ಸಿಜಿಎಸ್ಟಿ ಮತ್ತು ಇತರ ಸಂಸ್ಥೆಗಳು ಇಂತಹ ಕಳ್ಳಸಾಗಣೆ ಜಾಲಗಳ ಮೇಲೆ ಕಣ್ಣಿಟ್ಟಿದ್ದರೂ, ಅಕ್ರಮವಾಗಿ ವಿದೇಶದಿಂದ ಅಡಿಕೆಯನ್ನು ತರಲಾಗುತ್ತಿತ್ತು.
ಈ ಮಧ್ಯೆ, ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ (FDA) ಕೂಡ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯಿದೆ (FSS), 2006 ರ ಸೆಕ್ಷನ್ಗಳ ಅಡಿಯಲ್ಲಿ ತನಿಖೆಯನ್ನು ಪ್ರಾರಂಭಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ವಾಹನವನ್ನು ಬಿಡುಗಡೆ ಮಾಡುವ ಮುನ್ನ ತಮಗೆ ತಿಳಿಸುವಂತೆ ಅವರು ಸಿಜಿಎಸ್ಟಿಯನ್ನು ಕೇಳಿಕೊಂಡಿದೆ, ಮತ್ತು ಕಳಪೆ ಗುಣಮಟ್ಟದ ಅಡಿಕೆಯನ್ನು ಮಾರುಕಟ್ಟೆಯಲ್ಲಿ ವಿತರಿಸಬಾರದು ಎಂದು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದಾರೆ.









