ಕೊಳೆರೋಗ, ಹಳದಿ ಎಲೆಚುಕ್ಕಿ ರೋಗ ಬಾಧೆ ಬೆನ್ನಲ್ಲೇ ಅಡಿಕೆ ಬೆಳೆಗಾರರಿಗೆ ಶಾಕ್ ನೀಡುತ್ತಿದೆ ವಿಚಿತ್ರ ಹುಳ

0

ವರದಿ: ಸುಧಾಕರ್ ಕಾಣಿಯೂರು


ಕಾಣಿಯೂರು: ಈಗಾಗಲೇ ಕೊಳೆರೋಗ, ಹಳದಿ, ಎಲೆಚುಕ್ಕಿ ರೋಗದಿಂದ ಅಡಿಕೆ ಕೃಷಿ ನಾಶವಾಗಿ ಸಂಕಷ್ಟದಲ್ಲಿರುವ ನಡುವೆಯೇ ಇದೀಗ ವಿಚಿತ್ರ ಹುಳವೊಂದು ಅಡಿಕೆ ಬೆಳೆಗಾರರಿಗೆ ಶಾಕ್ ನೀಡುತ್ತಿದೆ.


ತೆಂಗು, ಅಡಿಕೆ ಮರ ಹಲವು ರೋಗಗಳಿಗೆ ಸುಲಭವಾಗಿ ತುತ್ತಾಗುತ್ತಿದ್ದು, ನಿಯಂತ್ರಣ ಅಸಾಧ್ಯ ಎನ್ನುವಂತಹ ಸನ್ನಿವೇಶ ಉದ್ಭವಿಸಿದೆ. ಇದರ ನಡುವೆ ತೋಟದಲ್ಲಿ ಹುಳಬಾಧೆ ರೈತರನ್ನು ತೀವ್ರ ಚಿಂತೆಗೆ ದೂಡಿದೆ.


ವಿವಿಧ ರೋಗಕ್ಕೆ ಅಡಿಕೆ ಮರ ಬಲಿ
ಈಗಾಗಲೇ ಎಲೆ ಚುಕ್ಕಿ, ಕೊಳೆ ರೋಗ, ಹಳದಿ, ಹಿಡಿಮುಂಡೆ ಸೇರಿದಂತೆ ಅನೇಕ ರೋಗಕ್ಕೆ ಅಡಿಕೆ ಕೃಷಿ, ಮರಗಳು ಬಲಿ ಆಗುತ್ತಿರುವ ನಡುವೆ ಇದೀಗ ಅಡಿಕೆ ಬೆಳೆಗೂ ಇದೇ ಹುಳ ಹಾಗೂ ಕೀಟದ ಬಾಧೆಯಿಂದ ಅಡಿಕೆ ಮರಗಳು ಸಾಯಲು ಕಾರಣವಾಗುತ್ತಿದೆ. ಈಗಾಗಲೇ ಕಡಬ ಹಾಗೂ ಸುಳ್ಯ ತಾಲೂಕಿನಲ್ಲಿ ಹಳದಿ ರೋಗ, ಎಲೆ ಚುಕ್ಕಿ ರೋಗಗಳಿಗೆ ತುತ್ತಾಗಿ 70% ಅಧಿಕ ಕೃಷಿಕರು ಅಡಿಕೆ ತೋಟ ಕಳೆದುಕೊಂಡಿದ್ದು, ಇದೀಗ ಹುಳ ಬಾಧೆಯಿಂದ ರೈತರು ಮತ್ತೊಂದು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದು, ಸರ್ಕಾರದ ನೆರವಿಗೆ ಆಗ್ರಹಿಸಿದ್ದಾರೆ.


ಅಡಿಕೆ ಬೆಳೆಗಾರರಿಗೆ ಹೊಸ ಭೀತಿ:
ತೆಂಗಿನ ಮರಗಳಿಗೆ ಕಲ್ಲು ತಲೆ ಹುಳ, ಕೆಂಪುಮೂತಿ ಹುಳ ಮತ್ತು ಬಿಳಿ ಸುರುಳಿ ಹುಳುವಿನಂತಹ ವಿವಿಧ ಹುಳ ಬಾಧೆ ಈ ಹಿಂದಿನಿಂದಲೂ ಬಾಽಸುತ್ತಿದ್ದು, ತೆಂಗು ಬೆಳೆಗಾರರನ್ನು ಆತಂಕಕ್ಕೆ ತಳ್ಳಿತ್ತು. ಇದೀಗ ಅಡಿಕೆ ಬೆಳೆಗೂ ಈ ಕೆಂಪು ಕಪ್ಪು ಚುಕ್ಕೆಯುಳ್ಳ ಕೀಟದ ಜೊತೆಗೆ ಒಳಗೆ ಹುಳಬಾಧೆ ವಕ್ಕರಿಸಿಕೊಂಡು ಅಡಿಕೆ ಬೆಳೆಗಾರರಿಗೆ ಹೊಸ ಆತಂಕ ಶುರುವಾಗಿದೆ. ಈ ಹುಳಗಳು ಅಡಿಕೆ ಮರಗಳ ತುದಿ ಭಾಗದ ಮೃದು ಭಾಗದಲ್ಲಿ ಕೊರೆದು ರಂಧ್ರಗಳನ್ನು ಮಾಡಿ ಮರದ ಸಿರಿ(ಚಿಗುರು)ಗಳನ್ನು ತಿನ್ನುತ್ತವೆ. ಇದರಿಂದಾಗಿ ಒಂದೆರಡು ವಾರದಲ್ಲೇ ಅಂತಹ ಅಡಿಕೆ ಮರಗಳು ಸಾಯುತ್ತವೆ. ಈ ಹುಳಬಾಧೆಯು ಕಡಬ, ಪುತ್ತೂರು, ಸುಳ್ಯ ತಾಲೂಕಿನ ಹಲವಡೆ ಕಾಣಿಸಿಕೊಂಡಿರುವ ಬಗ್ಗೆ ಕೃಷಿಕರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಒಂದು ಸಮಸ್ಯೆಯಿಂದ ಇದೀಗ ಮತ್ತಷ್ಟು ರೈತರು ಸಂಕಷ್ಟಕ್ಕಿಡಾಗಿದ್ದು ಅಡಿಕೆ ಸಸಿಗಳು ಈ ರೀತಿಯ ಕೀಟ ಹಾಗೂ ಹುಳದ ಬಾಧೆಗೆ ಒಳಗಾದಾಗ ಅದನ್ನು ಕತ್ತರಿಸಿ ನೋಡಿದಾಗ ಅದರಲ್ಲಿ ರಂದ್ರ ಕೊರೆದು ವಿಚಿತ್ರವಾದ ಹುಳಗಳು ಕಂಡು ಬಂದಿದೆ.


ಸಂಕಷ್ಟ ತಂದೊಡ್ಡಿದೆ
ಹುಳಗಳು ತೆಂಗನ್ನು ಕೊರೆದು ನಾಶಪಡಿಸುತ್ತಿರುವುದಕ್ಕೆ ನಿಯಮಿತವಾಗಿ ನಿಯಂತ್ರಣ ಕ್ರಮಗಳಿದ್ದರೂ ಅವುಗಳಿಂದ ಪೂರ್ಣಪ್ರಮಾಣದಲ್ಲಿ ತೆಂಗಿನ ಹುಳಬಾಧೆಯನ್ನು ನಿಯಂತ್ರಿಸಲು ಸಾಧ್ಯವಾಗದೇ ರೈತರು ಈವರೆಗೂ ಸಂಕಷ್ಟ ಎದುರಿಸುತ್ತಲೇ ಇದ್ದಾರೆ. ಇದೀಗ ಅಡಕೆ ಬೆಳೆಗಾರರಿಗೂ ಇದರ ನಿಯಂತ್ರಣ ಸವಾಲಾಗಿ ಪರಿಣಮಿಸಿದೆ. ಈಗಾಗಲೇ ತೆಂಗು, ಅಡಿಕೆ ಬೆಳೆಗಾರರು ವಿವಿಧ ರೋಗ ಬಾಧೆಗಳನ್ನು ಎದುರಿಸುತ್ತಿದ್ದು, ಇದೀಗ ಕೊರೆಯುವ ಹುಳಬಾಧೆ ಇನ್ನೊಂದು ಸಂಕಷ್ಟವನ್ನು ತಂದೊಡ್ಡಿದೆ.


ಅಗತ್ಯ ಕ್ರಮಕೈಗೊಳ್ಳಬೇಕು
ಅಡಿಕೆ ಮರಗಳಿಗೆ ಮತ್ತು ತೆಂಗಿನ ಮರಗಳಿಗೆ ಹುಳ ಮತ್ತು ಕೀಟ ಭಾದೆ ಕಾಣಿಸಿಕೊಂಡಿದ್ದು ಕೃಷಿಕರು ಆತಂತಕ್ಕೆ ಸಿಲುಕಿದ್ದಾರೆ. ಸುಳ್ಯ ಹಾಗೂ ಕಡಬ ತಾಲೂಕಿನ ಕೆಲವು ಕಡೆಗಳಲ್ಲಿ ಹುಳಗಳು, ಕೀಟಗಳು ಅಡಿಕೆ ಮರಗಳ ತುದಿ ಭಾಗವನ್ನು ಕೊರೆದು ರಂಧ್ರಗಳನ್ನು ಮಾಡಿ ಮರದ ಸಿರಿಗಳನ್ನು ತಿನ್ನುವ ಮುಖಾಂತರ ಒಂದೆರಡು ವಾರದಲ್ಲಿ ಮರಗಳು ಸಾಯುತ್ತಿರುವ ದೃಶ್ಯ ಕಂಡು ಬಂದಿದೆ. ಸುಳ್ಯ ತಾಲೂಕಿನಲ್ಲಿ ಅಡಿಕೆ ಕೃಷಿಗೆ ಹಳದಿ ರೋಗ, ಎಲೆ ಚುಕ್ಕಿ ರೋಗಗಳಿಗೆ ತುತ್ತಾಗಿ 70% ಕೃಷಿಕರು ತಮ್ಮ ಅಡಿಕೆ ತೋಟ ಕಳೆದುಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಸರಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳು ಕೂಡಲೇ ಸ್ಪಂದಿಸಿ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು.
-ಎಂ.ವೆಂಕಪ್ಪ ಗೌಡ ಮಾಚಿಲ, ನ್ಯಾಯವಾದಿಗಳು ಸುಳ್ಯ

LEAVE A REPLY

Please enter your comment!
Please enter your name here