ಕೊನೆಗೂ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ ಪ್ರದಾನ : ಕೋಡಿಂಬಾಡಿ, ಆಲಂಕಾರು ಗ್ರಾ.ಪಂಗಳಿಂದ ಪ್ರಶಸ್ತಿ ಸ್ವೀಕಾರ

0

ಪುತ್ತೂರು:2023-24ನೇ ಸಾಲಿಗೆ ಪಂಚಾಯತ್‌ಗಳಿಗೆ ಘೋಷಣೆಯಾಗಿದ್ದ ಗಾಂಧಿ ಗ್ರಾಮ ಪುರಸ್ಕಾರ ಕೊನೆಗೂ ಪ್ರದಾನವಾಗಿದೆ.ಡಿ.1ರಂದು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ ಖರ್ಗೆ ಅವರು ಪ್ರಶಸ್ತಿ ಪ್ರದಾನ ಮಾಡಿದರು.


ಆಡಳಿತ ಮತ್ತು ಅಭಿವೃದ್ಧಿ ವಿಷಯದಲ್ಲಿ ಉತ್ತಮ ಸಾಧನೆ ಮಾಡಿದ ಗ್ರಾಮ ಪಂಚಾಯತ್‌ಗಳಿಗೆ ಗಾಂಧಿ ಜಯಂತಿಯಂದು ನೀಡಲ್ಪಡುವ ‘ಗಾಂಧಿ ಗ್ರಾಮ ಪುರಸ್ಕಾರ’ದ 2023-24ನೇ ಸಾಲಿಗೆ ಪುತ್ತೂರು ತಾಲೂಕಿನ ಕೋಡಿಂಬಾಡಿ ಹಾಗೂ ಕಡಬ ತಾಲೂಕಿನ ಆಲಂಕಾರು ಗ್ರಾಮ ಪಂಚಾಯತ್ ಸೇರಿದಂತೆ ರಾಜ್ಯದ 238 ಗ್ರಾ.ಪಂ.ಗಳು ಆಯ್ಕೆಯಾಗಿದ್ದವು.ಪ್ರಶಸ್ತಿ ಘೋಷಣೆಯಾಗಿ ಎರಡು ವರ್ಷ ಕಳೆದರೂ ಪ್ರಶಸ್ತಿ ಪ್ರದಾನವಾಗಿರಲಿಲ್ಲ.ಆದರೆ ಪ್ರಶಸ್ತಿಯ ಮೊತ್ತವಾಗಿ ರೂ.5 ಲಕ್ಷ ವಿಶೇಷ ಅನುದಾನ ಪಂಚಾಯತ್‌ಗಳಿಗೆ ಲಭಿಸಿತ್ತು.ಇದೀಗ ಕೊನೆಗೂ ಪ್ರಶಸ್ತಿ ಪ್ರದಾನವಾಗಿದೆ.


ಬೆಂಗಳೂರು ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಡಿ.1ರಂದು ನಡೆದ ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಪ್ರಶಸ್ತಿ ಪ್ರದಾನ ಮಾಡಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉಪಸ್ಥಿತರಿದ್ದರು.ಕೋಡಿಂಬಾಡಿ ಗ್ರಾಮ ಪಂಚಾಯತ್‌ನ ಅಧ್ಯಕ್ಷೆ ಮಲ್ಲಿಕಾ ಅಶೋಕ್ ಪೂಜಾರಿ, ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು, ಕಾರ್ಯದರ್ಶಿ ಅಣ್ಣು ಹಾಗೂ ಕಡಬ ತಾಲೂಕಿನ ಆಲಂಕಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಶೀಲ ಹಾಗೂ ಪಿಡಿಓ ಸುಜಾತ ಪ್ರಶಸ್ತಿ ಸ್ವೀಕರಿದರು.


ಈ ಬಾರಿ ಪ್ರಶಸ್ತಿ ಘೋಷಣೆಯೇ ಆಗಿಲ್ಲ:
ಗ್ರಾಮ ಸ್ವರಾಜ್ಯದ ಕನಸು ಕಂಡಿದ್ದ ರಾಷ್ಟ್ರಪಿತ ಮಹಾತ್ಮಾ ಗಾಂಽಜಿಯವರ ಜನ್ಮದಿನವಾದ ಅ.2ರಂದು ಈ ಪುರಸ್ಕಾರವನ್ನು ನೀಡಲಾಗುತ್ತಿತ್ತು.ಪ್ರತಿವರ್ಷ ರಾಜ್ಯದ ಪ್ರತಿ ತಾಲೂಕಿನಲ್ಲಿ ಉತ್ತಮ ಸಾಧನೆ ಮಾಡಿದ ಒಂದು ಪಂಚಾಯತ್‌ನ್ನು ಆಯ್ಕೆ ಮಾಡಿ ಅವರಿಗೆ ಪ್ರಶಸ್ತಿ ನೀಡಲಾಗುತ್ತಿತ್ತು.ಆದರೆ ಈ ವರ್ಷ ಇದುವರೆಗೆ ಪ್ರಶಸ್ತಿಗೆ ಗ್ರಾಮ ಪಂಚಾಯತ್‌ಗಳ ಆಯ್ಕೆ ಪ್ರಕ್ರಿಯೆಯೇ ನಡೆದಿಲ್ಲ.ಹೀಗಾಗಿ ಪಂಚಾಯತ್‌ಗಳಿಗೆ ಈ ಬಾರಿ ಪ್ರಶಸ್ತಿ ಪಡೆಯುವ ಭಾಗ್ಯ ಇಲ್ಲವಾಗಿದೆ.

LEAVE A REPLY

Please enter your comment!
Please enter your name here