ಡಿ.4ಕೆ ಪ್ರಾಜೆಕ್ಟ್ ಪ್ರದರ್ಶನ
ಡಿ.5ಕ್ಕೆ ವಿಜ್ಞಾನಿಗಳೊಂದಿಗೆ ಸಂವಾದ, ವಿವಿಧ ಸ್ಪರ್ಧೆ
ಡಿ.6ಕ್ಕೆ ಚಿಣ್ಣರ ಚಿತ್ತಾರ
ಡಿ.5 ಮತ್ತು 6ಕ್ಕೆ ತಾರಾಲಯ ವೀಕ್ಷಣೆ
ಪುತ್ತೂರು: ನೆಹರುನಗರ ವಿವೇಕಾನಂದ ಸೆಂಟ್ರಲ್ ಸ್ಕೂಲ್‌ನಲ್ಲಿ ಡಿ.4 ರಿಂದ 6ರ ತನಕ ಅವಿಷ್ಕಾರ 2k25, ಅಂತರ್ ಶಾಲಾ ವಿಜ್ಞಾನ ಮೇಳ ಮತ್ತು ಚಿಣ್ಣರ ಚಿತ್ತಾರ ಕಾರ್ಯಕ್ರಮಗಳು ನಡೆಯಲಿದೆ. ವಿದ್ಯಾರ್ಥಿಗಳಲ್ಲಿ ಸಂಶೋಧನೆ ಕಡೆ ಹೆಚ್ಚು ಪರಿಣಾಮ ಬೀರುವುದರಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ವಿವೇಕಾನಂದ ಸೆಂಟ್ರಲ್ ಸ್ಕೂಲ್‌ನ ಅಧ್ಯಕ್ಷೆ ವಸಂತಿ ಕೆದಿಲ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020 ಇದರ ಆಶಯಗಳಿಗೆ ಪೂರಕವಾಗಿ ವಿಶೇಷವಾದ ಅನುಭವದಿಂದ ಕಲಿಯುವುದು, ದೈನಂದಿನ ಸಮಸ್ಯೆಗಳಿಗೆ ಪರಿಹಾರವನ್ನು ಕಂಡು ಹಿಡಿಯುವುದು ಮತ್ತು ಸೃಜನಶೀಲತೆಯ ಮೇಲೆ ಕಾರ್ಯಕ್ರಮ ಕೇಂದ್ರಿಕೃತವಾಗಿದೆ. ಡಿ.4ರಂದು ಇಂಡಿಯನ್ ಸೈನ್ಸ್ ಆಂಡ್ ಇಂಜಿನಿಯರಿಂಗ್ ಫೇರ್ ಪ್ರಾಜೆಕ್ಟ್ ಪ್ರದರ್ಶನ ನಡೆಯಲಿದೆ.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರು ವಹಿಸಲಿದ್ದಾರೆ. ನಿಟ್ಟೆ ವಿಶ್ವ ವಿದ್ಯಾನಿಲಯದ ವಿಜ್ಞಾನ ಮತ್ತು ಸಂಶೋಧನಾ ವಿಭಾಗದ ನಿರ್ದೇಶಕ ಡಾ. ಅನಿರ್ಬನ್ ಚಕ್ರಬರ್ತಿ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸೈನ್ಸ್ ಸೊಸೈಟಿ ಇಂಡಿಯಾ ಇದರ ಅಧ್ಯಕ್ಷ ನಾರಾಯಣ ಐಯ್ಯರ್ ಗೌರವ ಉಪಸ್ಥಿತಿಯಲ್ಲಿರುವರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಿವೇಕಾನಂದ ಸೆಂಟ್ರಲ್ ಸ್ಕೂಲ್‌ನ ಆಡಳಿತ ಮಂಡಳಿ ಸದಸ್ಯ ಅಜೆಯ ಪಡಿವಾಳ್ ವಹಿಸಲಿದ್ದಾರೆ. ವಿವೇಕಾನಂದ ಇನ್ಸಿಟ್ಯೂಟ್ ಆಫ್ ಫಾರ್ಮಾಸ್ಯೂಟಿಕಲ್ ಸೈನ್ಸಸ್ ಇದರ ಪ್ರಾಂಶುಪಾಲ ಡಾ. ಗುರುರಾಜ ಎಂ ಪಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಡಿ.5ರಂದು ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ಆಫ್ ರಿಸರ್ಚ್ ಮುಂಬೈಯ ವಿಜ್ಞಾನಿಗಳು ಸಂಸ್ಥೆಗೆ ಆಗಮಿಸಿ ವಿಜ್ಞಾನದ ಮೂಲ ತತ್ವಗಳು ಮತ್ತು ಅದರ ಪರಿಕಲ್ಪನೆಯನ್ನು ಮಕ್ಕಳಿಗೆ ಸರಳ ಪ್ರಾತ್ಯಕ್ಷಿಕೆಗಳ ಮೂಲಕ ವಿವರಿಸಿ ಸಂವಾದ ನಡೆಸಲಿದ್ದಾರೆ. ಇದರಲ್ಲಿ ಪ್ರತಿ ಶಾಲೆಯಿಂದ 40 ಮಕ್ಕಳಿಗೆ ಅವಕಾಶ ಕಲ್ಪಿಸಲಾಗಿದೆ. ಇದೇ ಸಂದರ್ಭ 6 ರಿಂದ 8ನೇ ಹಾಗು 9 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಅವಿಷ್ಕಾರ ಅಂತರ್ ಶಾಲಾ ವಿವಿಧ ಸ್ಪರ್ಧೆಗಳು ನಡೆಯಲಿದೆ. ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ.ಎಂ.ಕೃಷ್ಣ ಭಟ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವೈದ್ಯ ಸೈಂಟಿಫಿಕ್ ಆಫೀಸರ್ ಮುಂಬೈ ಇದರ ಉಲ್ಲಾಸ್ ಎಂ.ವಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬಹುಮಾನ ವಿತರಣೆಯಲ್ಲಿ ಮರಿಕೆ ಸಾವಯವ ಮಳಿಗೆಯ ಮಾಲಕ ಸುಹಾಸ್ ಎ.ಪಿ.ಎಸ್ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಡಿ.6ಕ್ಕೆ ಚಿಣ್ಣರ ಚಿತ್ತಾರ ನಡೆಯಲಿದೆ. ವಿವೇಕಾನಂದ ಸೆಂಟ್ರಲ್ ಸ್ಕೂಲ್‌ನ ಆಡಳಿತ ಮಂಡಳಿ ಸದಸ್ಯೆ ಶಂಕರಿ ಶರ್ಮ ಅವರು ಉದ್ಘಾಟಿಸಲಿದ್ದಾರೆ. ಸುಳ್ಯ ಕೇಶವಕೃಪ ಯೋಗ ಕಲಾ ಪ್ರತಿಷ್ಠಾನದ ಕಾರ್ಯದರ್ಶಿ ಶ್ರೀದೇವಿ ನಾಗರಾಜ್ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಜೆ ಚಿಣ್ಣರ ಸಾಧನಾ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಸಂಸ್ಥೆಯ ಆಡಳಿತ ಮಂಡಳಿ ಸದಸ್ಯೆ ಪ್ರೀತಿ ಶೆಣೈ ಅಧ್ಯಕ್ಷತೆ ವಹಿಸಲಿದ್ದಾರೆ. ನಿವೇದಿತ ಶಿಶು ಮಂದಿರದ ಅಧ್ಯಕ್ಷೆ ಲಕ್ಷ್ಮೀ ವಿ.ಜಿ .ಭಟ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ವಿಶೇಷ ಆಕರ್ಷಣೆಯಾಗಿ ಡಿ.5 ಮತ್ತು 6ರಂದು ತಾರಾಲಯ ವೀಕ್ಷಣೆಗೆ ಅವಕಾಶವಿದೆ. ಮಕ್ಕಳಿಗೆ ಈ ಅವಕಾಶ ಉಚಿತವಾಗಿ ಕಲ್ಪಿಸಲಾಗಿದೆ. ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಪ್ರಮಾಣ ಪತ್ರ ವಿತರಣೆ ಮಾಡಲಾಗುವುದು ಎಂದು ಅವರು ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ವಿವೇಕಾನಂದ ಸೆಂಟ್ರಲ್ ಸ್ಕೂಲ್‌ನ ಸಂಚಾಲಕ ಭರತ್ ಪೈ, ಪ್ರಾಂಶುಪಾಲೆ ಸಿಂಧು ವಿ.ಜಿ, ಉಪಪ್ರಾಂಶುಪಾಲೆ ಶ್ರೀದೇವಿ ಹೆಗ್ಡೆ ಉಪಸ್ಥಿತರಿದ್ದರು.
