




ಗಾಂಧೀಜಿಯ ರಾಮರಾಜ್ಯದ ಕನಸು ನನಸಾಗಿಸೋಣ:ಬಿಷಪ್ ಮಕಾರಿಯೋಸ್
ಕಡಬ: ರಾಜಕೀಯ ಎನ್ನುವುದು ಚುನಾವಣೆಗಳಿಗೆ ಮಾತ್ರ ಸೀಮಿತವಾಗಬೇಕು. ಒಮ್ಮೆ ಜನಪ್ರತಿನಿಧಿಗಳಾಗಿ ಆಯ್ಕೆಯಾದ ಮೇಲೆ ಅವರು ರಾಜಕೀಯ ರಹಿತವಾಗಿ ಜನಪರ ಕಾಳಜಿಯಿಂದ ಕೆಲಸ ಮಾಡಬೇಕು. ಜನರು ಮತ್ತು ಜನಪ್ರತಿನಿಧಿಗಳು ಸೇರಿ ಸಂವಿಧಾನದ ಆಶಯದಂತೆ ಕೆಲಸ ಮಾಡುವ ಮೂಲಕ ಗಾಂಧೀಜಿಯವರು ಕಂಡ ರಾಮರಾಜ್ಯದ ಕನಸನ್ನು ನನಸಾಗಿಸೋಣ ಎಂದು ಪುತ್ತೂರು ಮಲಂಕರ ಕ್ರೈಸ್ತ ಧರ್ಮ ಪ್ರಾಂತದ ಬಿಷಪ್ ವಂ| ಡಾ|ಗೀವರ್ಗೀಸ್ ಮಾರ್ ಮಕಾರಿಯೋಸ್ ಅವರು ಅಭಿಪ್ರಾಯಪಟ್ಟರು.




ಅವರು ಶನಿವಾರ ಕೋಡಿಂಬಾಳ ಚರ್ಚ್ ಸಭಾಂಗಣದಲ್ಲಿ ಕರ್ನಾಟಕ ಇಂಟಗ್ರೇಟೆಡ್ ಡೆವಲಪ್ಮೆಂಟ್ ಸೊಸೈಟಿ (ಕಿಡ್ಸ್) ವತಿಯಿಂದ ಕಡಬ ಪಟ್ಟಣ ಪಂಚಾಯತ್ನ ನೂತನ ಸದಸ್ಯರಿಗೆ ಅಭಿನಂದನೆ, ಗುರು ದೀಕ್ಷೆಯ ರಜತ ಮಹೋತ್ಸವದ ಸಂಭ್ರಮದಲ್ಲಿರುವ ಕಿಡ್ಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ವಂ| ಜಾನ್ ಕುನ್ನತೇತ್ ಅವರಿಗೆ ಸಮ್ಮಾನ ಹಾಗೂ ಕೃಷಿ ಮಾಹಿತಿ ಕಾರ್ಯಾಗಾರದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದರು. ಜನಪ್ರತಿನಿಧಿಗಳು ಸರಕಾರ ಮತ್ತು ಜನರ ನಡುವಿನ ಸೇತುವೆಯಾಗಿ ಕೆಲಸ ಮಾಡುವವರು. ಅವರು ತಮ್ಮ ಜವಾಬ್ದಾರಿಗಳನ್ನು ಅರಿತುಕೊಂಡು ಕೆಲಸ ಮಾಡಿದರೆ ಗ್ರಾಮದ ಅಭಿವೃದ್ಧಿಯಲ್ಲಿ ಯಾವುದೇ ಕೊರತೆಯಾಗದು. ಮನುಷ್ಯ ಮನುಷ್ಯರ ನಡುವೆ ಬಾಂಧವ್ಯದ ಗುಣಗಳು ಕಡಿಮೆಯಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ಶಾಂತಿ ಮತ್ತು ಸೌಹಾರ್ದತೆ ನೆಲೆಸಲು ನಾವೆಲ್ಲರೂ ಜತೆಯಾಗಿ ಕೆಲಸ ಮಾಡಬೇಕಿದೆ ಎಂದು ಅವರು ಆಶಯ ವ್ಯಕ್ತಪಡಿಸಿದರು.





ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಡಬ ಪಟ್ಟಣ ಪಂಚಾಯತ್ನ ಅಧ್ಯಕ್ಷೆ ತಮನ್ನಾ ಜಬೀನ್ ಅವರು ಕಿಡ್ಸ್ ಸಂಸ್ಥೆಯ 25 ವರ್ಷಗಳ ಸೇವಾ ಕಾರ್ಯಗಳು ಹಾಗೂ ಜನಪರ ಕಾರ್ಯಕ್ರಮಗಳು ಸಮಾಜದ ಅಭಿವೃದ್ಧಿಗೆ ಬಲುದೊಡ್ಡ ಕೊಡುಗೆಯನ್ನು ನೀಡಿದೆ. ಮುಂದೆಯೂ ಸಂಸ್ಥೆಯು ಉತ್ತಮ ಸಾಧನೆಗಳನ್ನು ಮಾಡಲಿ ಎಂದು ಹಾರೈಸಿದರು. ಕಡಬ ಪಟ್ಟಣ ಪಂಚಾಯತ್ ಉಪಾಧ್ಯಕ್ಷೆ ನೀಲಾವತಿ ಶಿವರಾಮ್, ಸ್ಥಾಯಿ ಸಮಿತಿ ಅಧ್ಯಕ್ಷ ಹನೀಫ್ ಕೆ.ಎಂ. ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
ಕಿಡ್ಸ್ ಸಂಸ್ಥೆಯ ಕೋಡಿಂಬಾಳ ಘಟಕದ ನಿರ್ದೇಶಕ ವಂ|ಲೂಕೋಸ್ ತನಿಯಿಲ್ ಅವರು ಸ್ವಾಗತಿಸಿ, ವಲಯಾಧಿಕಾರಿ ಮನೋಜ್ ಕೋಡಿಂಬಾಳ ವಂದಿಸಿದರು. ಉಪನ್ಯಾಸಕಿ ಉಷಾ ಮನೋಜ್ ನಿರೂಪಿಸಿ, ಶಿಕ್ಷಕಿ ಗಾಯತ್ರಿ ಸಮ್ಮಾನಿತರನ್ನು ಪರಿಚಯಿಸಿದರು. ಸಭಾ ಕಾರ್ಯಕ್ರಮಕ್ಕೆ ಮೊದಲು ಜರಗಿದ ಕೃಷಿ ಮಾಹಿತಿ ಕಾರ್ಯಾಗಾರವನ್ನು ಪುತ್ತೂರು ಸಹಾಯಕ ಕೃಷಿ ನಿರ್ದೇಶಕ ಟಿ.ಜಿ.ಚೆಲುವರಂಗಪ್ಪ ಅವರು ನಡೆಸಿಕೊಟ್ಟರು.
ಸನ್ಮಾನ: ಪಟ್ಟಣ ಪಂಚಾಯತ್ ಅಧ್ಯಕ್ಷೆ ತಮನ್ನಾ ಜಬೀನ್, ಉಪಾಧ್ಯಕ್ಷೆ ನೀಲಾವತಿ ಶಿವರಾಮ್, ಸ್ಥಾಯಿ ಸಮಿತಿ ಅಧ್ಯಕ್ಷ ಹನೀಫ್ ಕೆ.ಎಂ., ಸದಸ್ಯರಾದ ಸೈಮನ್ ಸಿ.ಜೆ., ಕೃಷ್ಣಪ್ಪ ಪೂಜಾರಿ, ರೋಹಿತ್ ಪಿ.ಜೆ., ಕೃಷ್ಣಪ್ಪ ನಾಯ್ಕ, ಮೋಹನ್, ಕುಸುಮಾ ಅಂಗಡಿಮನೆ, ಗುಣವತಿ ಕೊಪ್ಪ, ಅಕ್ಷತಾ ಮಣಿಮುಂಡ, ದಯಾನಂದ ಪೊಯ್ತೆತ್ತಡ್ಡ , ನಾಮನಿರ್ದೇಶಿತ ಸದಸ್ಯರಾದ ಅಶ್ರಫ್ ಶೇಡಿಗುಂಡಿ, ಶಾಲಿನಿ ಸತೀಶ್ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು. ಬಿಷಪ್ ವಂ| ಡಾ| ಗೀವರ್ಗೀಸ್ ಮಾರ್ ಮಕಾರಿಯೋಸ್ ಹಾಗೂ ಗುರು ದೀಕ್ಷೆಯ ರಜತ ಮಹೋತ್ಸವದ ಸಂಭ್ರಮದಲ್ಲಿರುವ ಕಿಡ್ಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ವಂ|ಜಾನ್ ಕುನ್ನತೇತ್ ಅವರನ್ನು ಗೌರವಿಸಲಾಯಿತು. ವಂ| ಜಾನ್ ಕುನ್ನತೇತ್ ಅವರು ಸನ್ಮಾನಕ್ಕೆ ಉತ್ತರವಾಗಿ ಮಾತನಾಡಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.





