ಪುತ್ತೂರು: ಮಕ್ಕಳ ಜ್ಞಾನ ಮತ್ತು ವ್ಯಕ್ತಿತ್ವ ವಿಕಸನಕ್ಕಾಗಿ, ಸಮಾಜದ 3 ವರ್ಷದಿಂದ 6 ವರ್ಷದ ವರೆಗಿನ ಮಕ್ಕಳಿಗೆ, ಆವಿಷ್ಕಾರ 2025 -ವಿಜ್ಞಾನ ಮೇಳದಲ್ಲಿ ಡಿ.6ರಂದು, ನೆಹರು ನಗರದ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ‘ಚಿಣ್ಣರ ಚಿತ್ತಾರ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿಯ ಸದಸ್ಯ ಶಂಕರಿ ಶರ್ಮ ಇವರು ವಹಿಸಿ ಮಾತನಾಡುತ್ತಾ, ಸ್ಪರ್ಧೆ ಎಂದ ಮೇಲೆ ಸೋಲು ಮತ್ತು ಗೆಲುವು ಸಹಜ. ಸೋಲನ್ನು ಮತ್ತು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ನೀತಿಕಥೆಯೊಂದಿಗೆ ಮಕ್ಕಳಿಗೆ ಹಿತನುಡಿಗಳನ್ನಾಡಿದರು.
ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ ಸುಳ್ಯದ ಶ್ರೀ ಕೇಶವ ಕೃಪಾ ವೇದ ಯೋಗ ಕಲಾ ಪ್ರತಿಷ್ಠಾನ ಇದರ ಕಾರ್ಯದರ್ಶಿಯಾದ ಶ್ರೀದೇವಿ ನಾಗರಾಜ್ ಭಟ್ ಇವರು, ಸಣ್ಣ ಮಕ್ಕಳು ಹಸಿಮಣ್ಣಿನ ಮುದ್ದೆಗಳಂತೆ. ಅವರನ್ನು ಸುಂದರವಾದ ಮೂರ್ತಿಯಾಗಿ ರೂಪುಗೊಳಿಸುವುದು ನಮ್ಮೆಲ್ಲರ ಹೊಣೆ ಎಂದು ಸೂಕ್ತ ನೀತಿ ಕಥೆಯೊಂದಿಗೆ ಮಕ್ಕಳ ಪಾಲಕರಿಗೆ ಮನಮುಟ್ಟುವಂತೆ ಹೇಳಿದರು.
ನಂತರ, ಚಿತ್ರಕಲೆ, ಅಭಿನಯ ಗೀತೆ, ಸ್ಮರಣಶಕ್ತಿ ಸ್ಪರ್ಧೆ, ಪ್ರತಿಭಾ ಪ್ರದರ್ಶನ ಹಾಗೂ ಹಲವಾರು ಆಟೋಟ ಸ್ಪರ್ಧೆಗಳನ್ನು ಮಕ್ಕಳಿಗಾಗಿ ನಡೆಸಲಾಯಿತು. ಈ ಸಂದರ್ಭದಲ್ಲಿ, ವಿವೇಕಾನಂದ ಸೆಂಟ್ರಲ್ ಸ್ಕೂಲ್, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ, ವಿವೇಕಾನಂದ ಶಿಶು ಮಂದಿರ ಪರ್ಲಡ್ಕ, ನಿವೇದಿತಾ ಶಿಶು ಮಂದಿರ ನೆಹರು ನಗರ, ಸರಸ್ವತಿ ವಿದ್ಯಾಕೇಂದ್ರ ಪುರುಷರಕಟ್ಟೆ, ವಿದ್ಯಾಸರಸ್ವತಿ ಶಿಶುಮಂದಿರ ಬೇರಿಕೆ, ಸುದಾನ ಶಾಲೆ ಮಂಜಲ್ಪಡ್ಪು, ಅಂಗನವಾಡಿ ಗುಂಡಿಜಾಲು, ಸತ್ಯಸಾಯಿ ಶಾಲೆ ಪುತ್ತೂರು, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ, ಸೈಂಟ್ ಫಿಲೋಮಿನ ಶಾಲೆ ದರ್ಬೆ, ಅಂಗನವಾಡಿ ಪಾಪೆಮಜಲು, ಅಂಗನವಾಡಿ ಪಡ್ಡಾಯೂರು, ಸಾಂದೀಪನಿ ವಿದ್ಯಾಲಯ ನರಿಮೊಗರು ಮುಂತಾದ ಶಾಲೆಗಳ 196ಕ್ಕೂ ಮಿಕ್ಕಿ ಮಕ್ಕಳು ಭಾಗವಹಿಸಿದರು. ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಗಿಫ್ಟ್ ಹ್ಯಾಂಪರ್ ಮತ್ತು ಪ್ರಮಾಣ ಪತ್ರವನ್ನು ವಿತರಿಸಲಾಯಿತು.
ಅಪರಾಹ್ನ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ, ನಿವೇದಿತ ಶಿಶುಮಂದಿರದ ಅಧ್ಯಕ್ಷೆ ಲಕ್ಷ್ಮಿ ವಿ. ಜಿ. ಭಟ್ ಇವರು, ಮೂರು ವರ್ಷದ ಬುದ್ಧಿ ನೂರು ವರ್ಷದವರೆಗೆ ಎಂಬ ಗಾದೆ ಮಾತನ್ನು ಉದಾಹರಿಸುತ್ತಾ, ಮಕ್ಕಳಲ್ಲಿ ಶಿಸ್ತನ್ನು ಬೆಳೆಸಬೇಕು. ಪೋಷಕರು ಮಕ್ಕಳಿಗೆ ಒಳ್ಳೆಯ ಸಂಸ್ಕಾರವನ್ನು ನೀಡಬೇಕು ಎಂದು ಸೊಗಸಾದ ಕಥೆಯ ಮೂಲಕ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಾಲಾ ಆಡಳಿತ ಮಂಡಳಿಯ ಸದಸ್ಯೆ ಪ್ರೀತಿ ಶೆಣೈ ಇವರು, ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ಇದೊಂದು ಉತ್ತಮ ವೇದಿಕೆ ಎಂದು ಮಕ್ಕಳಿಗೆಲ್ಲರಿಗೂ ಶುಭಕೋರಿದರು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ವೇದಿಕೆಯಲ್ಲಿ ಶಾಲಾ ಸಂಚಾಲಕ ಭರತ್ ಪೈ, ಶಾಲಾ ಆಡಳಿತ ಮಂಡಳಿಯ ಸದಸ್ಯೆ ಶಂಕರಿ ಶರ್ಮ ಹಾಗೂ ಶಾಲಾ ಪ್ರಾಂಶುಪಾಲ ಸಿಂಧು ವಿ.ಜಿ ಉಪಸ್ಥಿತರಿದ್ದರು.
ಕಿಂಡರ್ ಗಾರ್ಟನ್ ಸಂಯೋಜಕಿ ವಿನಯ ಪ್ರಭು ನಿರೂಪಿಸಿ, ಶಿಕ್ಷಕಿ ಅಕ್ಷತಾ ಸ್ವಾಗತಿಸಿ, ನಮಿತಾಮಣಿ ವಂದಿಸಿದರು.