ಡೊನ್ ಬೊಸ್ಕೊ ಕ್ಲಬ್‌ನಿಂದ ‘ಸಿಪಿಎಲ್ 2025, ಸೀಸನ್ 5’-ಬಿಡ್ ಪ್ರಕ್ರಿಯೆ

0

ಡ್ಯಾಲನ್ ರೇಗೊ ಗರಿಷ್ಟ ಪಾಯಿಂಟ್‌ಗೆ ಸೋಜಾ ಸೂಪರ್ ಕಿಂಗ್ಸ್ ತೆಕ್ಕೆಗೆ, ಜೇಮ್ಸ್ ಕ್ರಾಸ್ತಾ ಸಿಝ್ಲರ್ ಸ್ಟ್ರೈಕರ‍್ಸ್, ರೋಹನ್ ಡಿ’ಸಿಲ್ವ ಕ್ರೌನ್ ಸ್ಟೈಕರ‍್ಸ್ ತಂಡಕ್ಕೆ

ಪುತ್ತೂರು: ಮಾಯಿದೆ ದೇವುಸ್ ಚರ್ಚ್‌ನ ಡೊನ್ ಬೊಸ್ಕೊ ಕ್ಲಬ್ ಪುತ್ತೂರು ಸಂಘಟನೆಯ ವತಿಯಿಂದ ಪುತ್ತೂರು ಮಾಯಿದೆ ದೇವುಸ್ ಚರ್ಚ್, ಮರೀಲ್ ಸೆಕ್ರೇಡ್ ಹಾರ್ಟ್ ಚರ್ಚ್ ಹಾಗೂ ಬನ್ನೂರು ಸಂತ ಅಂತೋನಿ ಚರ್ಚ್ ವ್ಯಾಪ್ತಿಯ ಕ್ರಿಶ್ಚಿಯನ್ ಸಮುದಾಯದ ಕ್ರಿಕೆಟ್ ಆಟಗಾರರನ್ನೊಳಗೊಂಡ ‘ಕ್ರಿಶ್ಚಿಯನ್ ಪ್ರೀಮಿಯರ್ ಲೀಗ್(ಸಿಪಿಎಲ್) 2025-ಸೀಸನ್ 5’ ಡಿ.28 ರಂದು ದರ್ಬೆ ಸಂತ ಫಿಲೋಮಿನಾ ಕಾಲೇಜಿನ ಕ್ರೀಡಾಂಗಣದಲ್ಲಿ ಜರಗಲಿದ್ದು, ಆಟಗಾರರ ಬಿಡ್ಡಿಂಗ್ ಪ್ರಕ್ರಿಯೆಯು ಮಾಯಿದೆ ದೇವುಸ್ ಚರ್ಚ್ ವೇದಿಕೆಯ ಸಭಾಂಗಣದಲ್ಲಿ ಇತ್ತೀಚೆಗೆ ನೆರವೇರಿತು.


ಡ್ಯಾಲನ್ ರೇಗೊರವರಿಗೆ ಹೆಚ್ಚಿನ ಬೇಡಿಕೆ:
ಒಟ್ಟು 78 ಆಟಗಾರರ ನಡುವೆ ಬಿಗ್ ಫೈಟ್ ಬಿಡ್ ಪ್ರಕ್ರಿಯೆಗೆ ಒಳಪಟ್ಟಿತ್ತು. ಇದರಲ್ಲಿ ಪಾಂಗ್ಲಾಯಿಯ ದಿ.ಡೋಲ್ಫಿ ರೇಗೊರವರ ಪುತ್ರ ಡ್ಯಾಲನ್ ರೇಗೊರವರು 65 ಸಾವಿರ ಪಾಯಿಂಟ್‌ಗಳೊಂದಿಗೆ ದೀಪಕ್ ಮಿನೇಜಸ್ ಮಾಲಕತ್ವದ ಸೋಜಾ ಸೂಪರ್ ಕಿಂಗ್ಸ್ ತೆಕ್ಕೆಗೆ ಬಿಕರಿಯಾದರು. ಸಂಟ್ಯಾರಿನ ಎಡಗೈ ಬ್ಯಾಟರ್ ಜೇಮ್ಸ್ ಕ್ರಾಸ್ತಾರವರು 45 ಸಾವಿರ ಪಾಯಿಂಟ್ಸ್‌ಗಳೊಂದಿಗೆ ರೋಶನ್ ರೆಬೆಲ್ಲೋ ಮಾಲಕತ್ವದ ಸಿಝ್ಲರ್ ಸ್ಟ್ರೈಕರ‍್ಸ್ ತಂಡಕ್ಕೆ, ಪಾಂಲಾಯಿಯ ರೋಹನ್ ಡಿ’ಸಿಲ್ವ ಸುನಿಲ್ ಮಸ್ಕರೇನ್ಹಸ್/ಕ್ಯಾಲ್ವಿನ್ ಮಾಡ್ತಾ ಮಾಲಕತ್ವದ ಕ್ರೌನ್ ಸ್ಟ್ರೈಕರ‍್ಸ್ ತಂಡಕ್ಕೆ, ಮರೀಲಿನ ಡ್ಯಾನಿಯಲ್ ಸುವಾರಿಸ್ ಪ್ರವೀಣ್ ವೇಗಸ್ ಮಾಲಕತ್ವದ ಫ್ಲೈಝೋನ್ ಅಟ್ಯಾಕರ‍್ಸ್ ತಂಡದ ಪಾಲಾದರು.


1 ಲಕ್ಷ ಪಾಯಿಂಟ್:
ಪುತ್ತೂರಿನಲ್ಲಿ ಐದನೇ ಬಾರಿಗೆ ಐಪಿಎಲ್ ಮಾದರಿಯಲ್ಲಿ ಮೂರು ಚರ್ಚ್ ವ್ಯಾಪ್ತಿಯ ಕ್ರಿಶ್ಚಿಯನ್ ಆಟಗಾರರನ್ನೊಳಗೊಂಡ ಸೀಮಿತ ಓವರ್‌ಗಳ ಓವರ್ ಆರ್ಮ್ ಟೆನ್ನಿಸ್ ಬಾಲ್ ಲೀಗ್ ಕ್ರಿಕೆಟ್ ಪಂದ್ಯಾಟ ಜರಗಲಿದೆ. ಬಲಿಷ್ಟ ಆರು ತಂಡಗಳ ಮಧ್ಯೆ ಹಣಾಹಣಿ ನಡೆಯಲಿದ್ದು, ಪ್ರತೀ ತಂಡವು ತಂಡದ ಮಾಲಕರು ಹಾಗೂ ತಂಡದಲ್ಲಿ ತಲಾ ಒಂದರಂತೆ ಐಕಾನ್ ಆಟಗಾರರನ್ನು ಹೊಂದಿದೆ. ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಆಟಗಾರರನ್ನು ಆಯ್ಕೆ ಮಾಡಲು ಪ್ರತಿ ಆರು ತಂಡಗಳಿಗೆ ಒಂದು ಲಕ್ಷ ಪಾಯಿಂಟ್‌ನ್ನು ಸಂಘಟಕರು ನಿಗದಿಪಡಿಸಲಾಗಿದ್ದು, ಆ ಒಂದು ಲಕ್ಷ ಪಾಯಿಂಟ್ ಒಳಗಡೆ ಆಟಗಾರರನ್ನು ಖರೀದಿಸಬಹುದಾಗಿತ್ತು.


ಬಿಡ್ ಪ್ರಕ್ರಿಯೆ:
ಸಂಜೆ ನಡೆದ ಬಿಡ್ ಪ್ರಕ್ರಿಯೆಗೆ ಅಭೂತಪೂರ್ವ ಶ್ಲಾಘನೆ ವ್ಯಕ್ತವಾಗಿದ್ದು, ಈ ಬಿಡ್ ಪ್ರಕ್ರಿಯೆ ಸುಮಾರು ಮೂರು ಗಂಟೆಗಳ ಕಾಲ ನಡೆಯಿತು. ಆಟಗಾರರ ಹೆಸರು ಹಾಗೂ ಯಾವ ಶೈಲಿಯ ಆಟಗಾರ ಎನ್ನುವುದನ್ನು ಪವರ್‌ಪಾಂಟ್ ಮುಖೇನ ಬಿಡ್ಡಿಂಗ್‌ನಲ್ಲಿ ಪ್ರಸ್ತುತಪಡಿಸಲಾಯಿತು. ಆರಂಭದಲ್ಲಿ ಡೊನ್ ಬೊಸ್ಕೊ ಕ್ಲಬ್‌ನ ಅಧ್ಯಕ್ಷ ಆಂಟನಿ ಒಲಿವೆರಾರವರು ಕಾರ್ಯಕ್ರಮಕ್ಕೆ ಶುಭ ಹಾರೈಸುವ ಮೂಲಕ ಬಿಡ್ ಪ್ರಕ್ರಿಯೆಗೆ ಚಾಲನೆಯಿತ್ತರು.


ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಸಿಝ್ಲರ್ ಸ್ರೈಕರ‍್ಸ್ ತಂಡದ ಮಾಲಕ ರೋಶನ್ ರೆಬೆಲ್ಲೋ ಕಲ್ಲಾರೆ, ಸೋಜಾ ಸೂಪರ್ ಕಿಂಗ್ಸ್ ತಂಡದ ಮಾಲಕ ದೀಪಕ್ ಮಿನೇಜಸ್ ದರ್ಬೆ, ಕ್ರಿಶಲ್ ವಾರಿಯರ‍್ಸ್ ತಂಡದ ಮಾಲಕರಾದ ಕಿರಣ್ ಡಿ’ಸೋಜ ಬನ್ನೂರು ಹಾಗೂ ಮೆಲ್ವಿನ್ ಪಾಸ್ ನೂಜಿ, ಫ್ಲೈ ಝೋನ್ ಅಟ್ಯಾಕರ‍್ಸ್ ತಂಡದ ಮಾಲಕ ಪ್ರವೀಣ್ ವೇಗಸ್(ಬಾಬಾ),
ಸಿಲ್ವೆಸ್ತರ್ ಡಿ’ಸೋಜ ಕೂರ್ನಡ್ಕ ತಂಡದ ಬದಲಿಗೆ ಇದೇ ಮೊದಲ ಬಾರಿಗೆ ಸೇರ್ಪಡೆಗೊಳ್ಳುತ್ತಿರುವ ಕ್ವೃನ್ ಸ್ಟ್ರೈಕರ‍್ಸ್ ತಂಡದ ಸುನಿಲ್ ಮಸ್ಕರೇನ್ಹಸ್ ಪರ್ಲಡ್ಕ/ಕ್ಯಾಲ್ವಿನ್ ಮಾಡ್ತಾ ಪರ್ಲಡ್ಕ, ಲೂವಿಸ್ ಕ್ರಿಕೆಟರ‍್ಸ್ ತಂಡದ ಮಾಲಕ ಲೆಸ್ಟರ್ ಲೂವಿಸ್‌ರವರೊಂದಿಗೆ ಆಯಾ ತಂಡದ ಐಕಾನ್ ಪ್ಲೇಯರ್ ಉಪಸ್ಥಿತರಿದ್ದರು. ಸಂಘಟಕರಾದ ರಾಕೇಶ್ ಮಸ್ಕರೇನ್ಹಸ್, ಆಲನ್ ಮಿನೇಜಸ್, ರೋಹನ್ ಡಾಯಸ್ ಹಾಗೂ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿ ವಿಜಯ ಡಿ’ಸೋಜರವರು ಬಿಡ್ಡಿಂಗ್ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.


ಟೇಬಲ್ ಟಾಪ್ ನೇರ ಫೈನಲಿಗೆ..
ಲೀಗ್ ಹಂತದಲ್ಲಿ ಪ್ರತೀ ತಂಡಕ್ಕೆ ಐದು ಬಾರಿ ಆಟವಾಡುವ ಅವಕಾಶವನ್ನು ಹೊಂದಲಾಗಿದ್ದು ಅಗ್ರ ಮೂರು ತಂಡಗಳು ಟೇಬಲ್ ಟಾಪ್ ಸ್ಥಾನವನ್ನು ಪಡೆಯುತ್ತವೆ. ಅಂಕ ಪಟ್ಟಿಯಲ್ಲಿ ಟಾಪ್ ಸ್ಥಾನವನ್ನು ಗಳಿಸಿದ ತಂಡ ನೇರ ಫೈನಲ್ ಪ್ರವೇಶಿಸುತ್ತದೆ. ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದ ತಂಡಗಳ ನಡುವೆ ಸೆಮಿಫೈನಲ್ ಪಂದ್ಯಾಟ ನಡೆದು ಇದರಲ್ಲಿ ವಿಜೇತ ತಂಡ ಫೈನಲ್‌ಗೆ ಜಿಗಿಯುತ್ತದೆ. ಲೀಗ್, ಸೆಮಿ, ಫೈನಲ್ ಸೇರಿದಂತೆ ಒಟ್ಟು 16 ಪಂದ್ಯಗಳು ನಡೆಯಲಿವೆ. ಫಿಲೋಮಿನಾ ಕಾಲೇಜಿನ ಮೈದಾನದಲ್ಲಿ ಎರಡು ಕಡೆ ಏಕಕಾಲದಲ್ಲಿ ಪಂದ್ಯಗಳು ಜರಗಲಿವೆ.

6 ಐಕಾನ್ ಆಟಗಾರರು…
ಹಣಾಹಣಿಯಲ್ಲಿ ಆರು ತಂಡಗಳು ಹೊಂದಿದ್ದು ಮೇಗಸ್ ಮಸ್ಕರೇನ್ಹಸ್‌ರವರು ಕ್ರಿಶಲ್ ವಾರಿಯರ‍್ಸ್ ತಂಡಕ್ಕೆ, ರಾಕೇಶ್ ಡಿ’ಸೋಜರವರು ಸೋಜಾ ಸೂಪರ್ ಕಿಂಗ್ಸ್ ತಂಡಕ್ಕೆ, ಲೋಯ್ ಮೆಲ್ಡನ್‌ರವರು ಲೂವಿಸ್ ಕ್ರಿಕೆಟರ‍್ಸ್ ತಂಡಕ್ಕೆ, ರಾಯನ್ ಡಾಯಸ್‌ರವರು ಫ್ಲೈಝೋನ್ ಅಟ್ಯಾಕರ‍್ಸ್ ತಂಡಕ್ಕೆ, ಶರನ್ ಡಿ’ಸಿಲ್ವರವರು ಸಿಝ್ಲರ್ ಸ್ರೈಕರ‍್ಸ್ ತಂಡಕ್ಕೆ, ಐವನ್ ಡಿ’ಸಿಲ್ವರವರು ಕ್ರೌನ್ ಸ್ಟ್ರೈಕರ‍್ಸ್ ತಂಡಕ್ಕೆ ಐಕಾನ್ ಆಟಗಾರರಾಗಿ ಆಯ್ಕೆಯಾಗಿದ್ದಾರೆ.

ಆರು ತಂಡಗಳು..
-ಸಿಝ್ಲರ್ ಸ್ಟ್ರೈಕರ‍್ಸ್
-ಸೋಜಾ ಸೂಪರ್ ಕಿಂಗ್ಸ್
-ಕ್ರಿಶಲ್ ವಾರಿಯರ‍್ಸ್
-ಫ್ಲೈಝೋನ್ ಅಟ್ಯಾಕರ‍್ಸ್
-ಕ್ರೌನ್ ಸ್ಟ್ರೈಕರ‍್ಸ್
-ಲೂವಿಸ್ ಕ್ರಿಕೆಟರ‍್ಸ್

LEAVE A REPLY

Please enter your comment!
Please enter your name here