ಸತತ ಪರಿಶ್ರಮ ಪಟ್ಟಾಗ ಕನಸು ನನಸಾಗಬಹುದು-ವಂ.ಜೋನ್ ಬ್ಯಾಪ್ತಿಸ್ಟ್ ಮೊರಾಸ್
ಸಮಾಜದಲ್ಲಿ ಒಳ್ಳೆಯ ನಾಗರಿಕರಾಗಿ ಬೆಳೆಯಬೇಕು-ವಂ.ಲಾರೆನ್ಸ್ ಮಸ್ಕರೇನಸ್
ಪುತ್ತೂರು: ಮಾಯ್ ದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ದರ್ಬೆ ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲೆ ಮತ್ತು ಸಂತ ಫಿಲೋಮಿನಾ ಆಂಗ್ಲ ಮಾಧ್ಯಮ ಶಾಲಾ ವಾರ್ಷಿಕೋತ್ಸವದ ಪ್ರಯುಕ್ತ ದಿವ್ಯ ಬಲಿಪೂಜೆ, ಧ್ವಜಾರೋಹಣ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಪ್ರೌಢಶಾಲಾ ಸಭಾಂಗಣದಲ್ಲಿ ನಡೆಯಿತು.

ಬಲಿಪೂಜೆ, ಧ್ವಜಾರೋಹಣ
ಸಂತ ಫಿಲೋಮಿನಾ ವಿದ್ಯಾಸಂಸ್ಥೆಗಳ ಆವರಣದಲ್ಲಿರುವ ದಿವ್ಯಚೇತನ ಚಾಪೆಲ್ನಲ್ಲಿ ಬೆಳಿಗ್ಗೆ ಬಲಿಪೂಜೆ ನಡೆಯಿತು. ಮರೀಲು ಚರ್ಚ್ನ ಧರ್ಮಗುರು ವಂ.ಜೋನ್ ಬ್ಯಾಪ್ತಿಸ್ಟ್ ಮೊರಾಸ್ರವರು ಬಲಿಪೂಜೆ ನೆರವೇರಿಸಿ ಆಶೀರ್ವಚನ ನೀಡಿದರು. ಬಳಿಕ ಪ್ರೌಢಶಾಲಾ ಪ್ರಾಂಗಣದಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮದ ಆರಂಭದಲ್ಲಿ ವಂ.ಮೊನ್ಸಿಞರ್ ಆಂಟನಿ ಪತ್ರಾವೋರವರ ಪ್ರತಿಮೆಗೆ ಹಾರಾರ್ಪಣೆ ಮಾಡಲಾಯಿತು. ಎನ್ಸಿಸಿ ಕೆಡೆಟ್ನೊಂದಿಗೆ ಅತಿಥಿಗಳನ್ನು ಧ್ವಜಾರೋಹಣದ ವೇದಿಕೆಗೆ ಕರೆತರಲಾಯಿತು.
ಮಾಯ್ ದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ವಂ.ಲಾರೆನ್ಸ್ ಮಸ್ಕರೇನಸ್ ಧ್ವಜಾರೋಹಣ ನೆರವೇರಿಸಿ ಧ್ವಜವಂದನೆ ಸ್ವೀಕರಿಸಿ ಮಾತನಾಡಿ ಕಳೆದ 76 ವರ್ಷಗಳಿಂದ ಈ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ನೀಡಲಾಗುತ್ತಿದೆ. ನಿಮಗೆಲ್ಲರಿಗೂ ಉತ್ತಮ ಸಂಸ್ಥೆಯಾಗಿ ಇದು ಲಭ್ಯವಿದೆ. ಇಲ್ಲಿ ಎಲ್ಲಾ ಸೌಲಭ್ಯಗಳು ಇದೆ. ನೀವು ಕಲಿತು ಸಮಾಜದಲ್ಲಿ ಒಳ್ಳೆಯ ನಾಗರಿಕರಾಗಿ ಬೆಳೆಯಬೇಕು. ಬೆಳವಣಿಗೆ ಹೊಂದಬೇಕು ಎಂದು ಹೇಳಿ ಶುಭಹಾರೈಸಿದರು.
ಮರೀಲು ಚರ್ಚ್ನ ಧರ್ಮಗುರು ವಂ.ಜೋನ್ ಬ್ಯಾಪ್ತಿಸ್ಟ್ ಮೊರಾಸ್, ಮಾಯ್ ದೆ ದೇವುಸ್ ಚರ್ಚ್ನ ಸಹಾಯಕ ಧರ್ಮಗುರು ವಂ|ಮರ್ವೀನ್ ಪ್ರವೀಣ್ ಲೋಬೋ, ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲಾ ಮುಖ್ಯಗುರು ವಂ|ಮ್ಯಾಕ್ಸಿಮ್ ಡಿಸೋಜ, ಮಾಯ್ ದೆ ದೇವುಸ್ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಜೆರಾಲ್ಡ್ ಡಿ ಕೋಸ್ತ, ದಿವ್ಯಚಾಪೆಲ್ ಮಂದಿರದ ರೆಕ್ಟರ್ ವಂ|ರಾಬಿನ್, ಪ್ರೌಢಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಯಕುಮಾರ್ ರೈ, ಪ್ರೌಢಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಇಸ್ಮಾಯಿಲ್ ಬೊಳುವಾರು, ಫಿಲೋಮಿನಾ ಆಂಗ್ಲ ಮಾಧ್ಯಮ ಶಾಲಾ ಮುಖ್ಯಶಿಕ್ಷಕಿ ಸಿಸ್ಟರ್ ಲೋರಾ ಪಾಸ್, ಆಂಗ್ಲ ಮಾಧ್ಯಮ ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಮುಖೇಶ್ ಕೆಮ್ಮಿಂಜೆ, ವಿದ್ಯಾರ್ಥಿ ನಾಯಕ ಜೀತನ್ ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾನ್ವೆಂಟ್ಗಳ ಧರ್ಮಭಗಿನಿಯರು, ಶಿಕ್ಷಕರು, ನಿವೃತ್ತ ಶಿಕ್ಷಕರು, ಸಿಬಂದಿವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರೌಢಶಾಲಾ ಶಿಕ್ಷಕ ರೋಷನ್ ಸಿಕ್ವೇರಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕಿ ಲವಿನಾ ಕುಟಿನ್ಹಾ ವಂದಿಸಿದರು.
ಪ್ರತಿಭಾ ಪುರಸ್ಕಾರ
ಶಾಲಾ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿ, ಮರೀಲು ಚರ್ಚ್ನ ಧರ್ಮಗುರು ವಂ.ಜೋನ್ ಬ್ಯಾಪ್ತಿಸ್ಟ್ ಮೊರಾಸ್ ಮಾತನಾಡಿ ಪ್ರತಿಯೊಂದು ವಿದ್ಯಾರ್ಥಿಗಳಲ್ಲಿ ಒಂದೊಂದು ರೀತಿಯ ಪ್ರತಿಭೆ ಇರುತ್ತದೆ. ಆದು ಪ್ರಕಟಗೊಂಡಾಗ ಮಾತ್ರ ಇನ್ನೊಬ್ಬರಿಗೆ ತಿಳಿಯುತ್ತದೆ. ಸತತ ಪ್ರಯತ್ನ ಮಾಡಿದರೆ ಯಶಸ್ಸು ಸಿಗುತ್ತದೆ. ಸೋತಾಗ ನಿರಾಶರಾಗಬೇಡಿ. ಕನಸು ಕಾಣಿ. ಅದನ್ನು ಸಾಕಾರಗೊಳಿಸಲು ಪರಿಶ್ರಮ ಪಡಿ. ಆಗ ಕನಸು ನನಸಾಗುತ್ತದೆ ಎಂದು ಹೇಳಿ ಶುಭಹಾರೈಸಿದರು. ಮಾಯ್ ದೆ ದೇವುಸ್ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಜೆರಾಲ್ಡ್ ಡಿ ಕೋಸ್ತ ಮಾತನಾಡಿ ಪ್ರತಿಭಾ ಪುರಸ್ಕಾರ ಮಕ್ಕಳ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ. ಶ್ರಧೆ ಭಕ್ತಿಯಿಂದ ಕೆಲಸ ಮಾಡಿದರೆ ಯಶಸ್ಸು ಸಿಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಾಯ್ ದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ವಂ.ಲಾರೆನ್ಸ್ ಮಸ್ಕರೇನಸ್ ಮಾತನಾಡಿ ಶುಭಹಾರೈಸಿದರು. ಮಾಯ್ ದೆ ದೇವುಸ್ ಚರ್ಚ್ನ ಸಹಾಯಕ ಧರ್ಮಗುರು ವಂ|ಮರ್ವೀನ್ ಪ್ರವೀಣ್ ಲೋಬೋ, ಪ್ರೌಢಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಇಸ್ಮಾಯಿಲ್ ಬೊಳುವಾರು, ವಿದ್ಯಾರ್ಥಿ ನಾಯಕ ಜೀತನ್ ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಸ್ಥಾಪಕರ ದಿನದ ಪ್ರಯುಕ್ತ ನಡೆದ ಕ್ರೀಡಾಕೂಟದ ವಿಜೇತರಿಗೆ, ಪ್ರತಿಭಾ ಕಾರಂಜಿ ಸ್ಪರ್ಧೆಯ ವಿಜೇತರಿಗೆ, ಮಕ್ಕಳ ದಿನಾಚರಣೆ ಪ್ರಯುಕ್ತ ನಡೆದ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲಾ ಮುಖ್ಯಗುರು ವಂ|ಮ್ಯಾಕ್ಸಿಮ್ ಡಿಸೋಜ ಸ್ವಾಗತಿಸಿದರು. ಶಿಕ್ಷಕರಾದ ಕಾರ್ಮಿನ್ ಪಾಸ್, ನರೇಶ್ ಲೋಬೋ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಪ್ರೌಢಶಾಲಾ ಮುಖ್ಯಗುರು ವಂ.ಮ್ಯಾಕ್ಸಿಮ್ ಡಿಸೋಜಾ ಸ್ವಾಗತಿಸಿ ಶಿಕ್ಷಕಿ ಮೋಲಿ ಫೆರ್ನಾಂಡೀಸ್ ವಂದಿಸಿದರು. ಶಿಕ್ಷಕ ರೋಷನ್ ಸಿಕ್ವೇರಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರು ಸಹಕರಿಸಿದರು.
ಇಂದು ಪ್ರೌಢಶಾಲಾ ವಾರ್ಷಿಕೋತ್ಸವ
ಸಂತ ಫಿಲೋಮಿನಾ ಪ್ರೌಢಶಾಲಾ ವಾರ್ಷಿಕೋತ್ಸವ ಡಿ.9ರಂದು ಬೆಳಿಗ್ಗೆ 9.30ರಿಂದ ಸಂತ ಫಿಲೋಮಿನಾ ಎಸ್ಜೆಎಮ್ ಸಭಾಂಗಣದಲ್ಲಿ ನಡೆಯಲಿದೆ. ಶಾಲಾ ಹಿರಿಯ ವಿದ್ಯಾರ್ಥಿ, ಎಸ್ಆರ್ಕೆ ಲ್ಯಾಡರ್ಸ್ ಮಾಲಕರಾದ ಕೇಶವ ಅಮೈರವರು ಮುಖ್ಯ ಅತಿಥಿಯಾಗಿ, ಪುತ್ತೂರು ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್ ಸಿ. ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮಾಯ್ ದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ವಂ.ಲಾರೆನ್ಸ್ ಮಸ್ಕರೇನಸ್ ಅಧ್ಯಕ್ಷತೆ ವಹಿಸಲಿದ್ದಾರೆ. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.