




ಅಡ್ಡಾದಿಡ್ಡಿ ವಾಹನ ಪಾರ್ಕಿಂಗ್, ಅನಧಿಕೃತ ವ್ಯಾಪಾರ : ಗ್ರಾ.ಪಂ.ನಿಂದ ಕ್ರಮವಿಲ್ಲವೇಕೆ : ಸಭೆಯಲ್ಲಿ ಸದಸ್ಯರ ಪ್ರಶ್ನೆ




ಉಪ್ಪಿನಂಗಡಿ: ಇಲ್ಲಿನ ಬ್ಯಾಂಕ್ ರಸ್ತೆ, ಅಂಚೆ ಕಚೇರಿ ರಸ್ತೆ ಸೇರಿದಂತೆ ಪೇಟೆಯೊಳಗಿನ ರಸ್ತೆಗಳ ಅಡ್ಡಾದಿಡ್ಡಿಯಾಗಿ ವಾಹನಗಳನ್ನು ಪಾರ್ಕಿಂಗ್, ಫುಟ್‌ಪಾತ್‌ನಲ್ಲಿ ಅನಧಿಕೃತ ವ್ಯಾಪಾರಗಳಿಂದ ನಿರಂತರ ವಾಹನ ದಟ್ಟಣೆ ಉಪ್ಪಿನಂಗಡಿ ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪವಾಯಿತು.





ಗ್ರಾ.ಪಂ. ಅಧ್ಯಕ್ಷೆ ಲಲಿತಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯೆ ಉಷಾ ಮುಳಿಯ, ಪೇಟೆಯೊಳಗಿನ ರಸ್ತೆಗಳ ಫುಟ್‌ಪಾತ್ ಮೇಲೆ ಅನಧಿಕೃತ ವ್ಯಾಪಾರಗಳು ತಲೆ ಎತ್ತಿವೆ. ವಾಹನಗಳನ್ನು ರಸ್ತೆಯ ಮೇಲೆಯೇ ಪಾರ್ಕಿಂಗ್ ಮಾಡಿ ಹೋಗುತ್ತಾರೆ. ಬ್ಯಾಂಕ್ ರಸ್ತೆ, ಶೆಣೈ ಆಸ್ಪತ್ರೆ ರಸ್ತೆ, ಅಂಚೆ ಕಚೇರಿ ರಸ್ತೆ ಸೇರಿದಂತೆ ಪೇಟೆಯೊಳಗಿನ ರಸ್ತೆಗಳಲ್ಲಿ ಇದೇ ಅವ್ಯವಸ್ಥೆ. ಇದರಿಂದ ಪೇಟೆಯೊಳಗೆ ಸದಾ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗುತ್ತಿದ್ದು, ಪಾದಚಾರಿಗಳಿಗೂ ನಡೆದಾಡಲು ತೊಂದರೆಯಾಗುತ್ತಿದೆ. ಪೊಲೀಸ್ ಇಲಾಖೆಯಾಗಲೀ, ಗ್ರಾ.ಪಂ. ಆಗಲೀ ಇವರ ಮೇಲೆ ಯಾಕೆ ಕ್ರಮ ವಹಿಸುತ್ತಿಲ್ಲ ಎಂದು ಪ್ರಶ್ನಿಸಿದರು. ಇದಕ್ಕೆ ಪೂರಕವಾಗಿ ಮಾತನಾಡಿದ ಗ್ರಾ.ಪಂ. ಸದಸ್ಯ ಅಬ್ದುರ್ರಹ್ಮಾನ್ ಕೆ., ನಿಜಕ್ಕೂ ಇದು ಒಪ್ಪುವ ವಿಚಾರ. ಇದರಿಂದಾಗಿ ವಾಹನ ಸವಾರರು, ಪಾದಚಾರಿಗಳು ಸಂಕಷ್ಟ ಪಡಬೇಕಾದ ಸ್ಥಿತಿ ನಿರ್ಮಾಣವಾಗುತ್ತಿದೆ. ಇದನ್ನು ಪಿಡಿಒ ಅವರು ಗಂಭೀರವಾಗಿ ಪರಿಗಣಿಸಬೇಕು. ಪೊಲೀಸರ ಸಹಕಾರ ಪಡೆದು ಅನಽಕೃತ ಅಂಗಡಿಗಳವರನ್ನು ತೆರವುಗೊಳಿಸಬೇಕು. ಇದಕ್ಕೆ ನಮ್ಮ ಸಂಪೂರ್ಣ ಸಹಕಾರ ಇದೆ ಎಂದರು.
ಚರಂಡಿಯಲ್ಲಿ ಆವರಣ ಗೋಡೆ
ಲಕ್ಷ್ಮೀ ನಗರದಲ್ಲಿ ಚರಂಡಿಯಲ್ಲಿ ಆವರಣಗೋಡೆ ರಚಿಸುತ್ತಿದ್ದು, ಇದರಿಂದಾಗಿ ನೀರು ಹರಿಯುವ ಚರಂಡಿ ಮಾಯವಾಗುವ ಲಕ್ಷಣ ಕಾಣಿಸುತ್ತಿದೆ. ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕ್ರಮವಹಿಸಬೇಕು ಎಂದು ಸದಸ್ಯ ಲೋಕೇಶ ಬೆತ್ತೋಡಿ ಆಗ್ರಹಿಸಿದರು.
ಉಪಯೋಗ ಶೂನ್ಯವಾಗುತ್ತಿರುವ ಕಿಂಡಿ ಅಣೆಕಟ್ಟು
ಗ್ರಾ.ಪಂ. ವ್ಯಾಪ್ತಿಯ ನಾಲಾಯಿದ ಗುಂಡಿ ಮತ್ತು ಪಂಚೇರುಗಳಲ್ಲಿ ನೀರು ಸಂಗ್ರಹಕ್ಕಾಗಿ ಕಿಂಡಿ ಅಣೆಕಟ್ಟನ್ನು ರಚಿಸಲಾಗಿದ್ದು, ಕಳೆದ ಎರಡು ವರ್ಷದಿಂದ ಇದಕ್ಕೆ ಬೇಸಿಗೆಯಲ್ಲಿ ಹಲಗೆ ಜೋಡಿಸದಿರುವುದರಿಂದ ನೀರು ಸಂಗ್ರಹಿಸುವ ಕಾರ್ಯ ನಡೆಯುತ್ತಿಲ್ಲ. ಅಂತರ್ಜಲ ವೃದ್ಧಿಗಾಗಿ ನಿರ್ಮಿಸಿದ ಈ ಅಣೆಕಟ್ಟುಗಳು ಈಗ ಉಪಯೋಗ ಶೂನ್ಯವಾಗಿದೆ ಎಂದು ಗ್ರಾ.ಪಂ. ಸದಸ್ಯ ಸುರೇಶ್ ಅತ್ರಮಜಲು ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಚರ್ಚೆ ನಡೆದು ಹಲಗೆ ಜೋಡಿಸಲು ಸಣ್ಣ ನೀರಾವರಿ ಇಲಾಖೆಗೆ ಪತ್ರ ಬರೆಯಲು ನಿರ್ಣಯಿಸಲಾಯಿತು.
ತ್ಯಾಜ್ಯ ಎಸೆಯುವುದರ ಪತ್ತೆಗೆ ಎಲ್ಲರ ಸಹಕಾರ ಅಗತ್ಯ
ಗ್ರಾಮ ವ್ಯಾಪ್ತಿಯಲ್ಲಿ ಅಪರಿಚಿತರು ವಾಹನಗಳಲ್ಲಿ ತ್ಯಾಜ್ಯ ತಂದು ಎಸೆದು ಹೋಗುತ್ತಾರೆ ಎಂಬ ಆರೋಪ ಸಭೆಯಲ್ಲಿ ವ್ಯಕ್ತವಾದಾಗ ಉತ್ತರಿಸಿದ ಪಿಡಿಒ ವಿಲ್ರೆಡ್ ಲಾರೆನ್ಸ್ ರೊಡ್ರಿಗಸ್, ಈಗಾಗಲೇ ಹಲವು ಕಡೆಗಳಲ್ಲಿ ಸಿ.ಸಿ. ಕ್ಯಾಮರಾಗಳನ್ನು ಅಳವಡಿಸಿದೆ. ಇನ್ನೂ ತ್ಯಾಜ್ಯ ಎಸೆಯುವ ಜಾಗಗಳಲ್ಲಿ ಸಿಸಿ ಕ್ಯಾಮರಾಗಳ ಅವಶ್ಯಕತೆ ಇದ್ದಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗುವುದು ಎಂದರಲ್ಲದೇ, ಸಾರ್ವಜನಿಕ ಪ್ರದೇಶಗಳಲ್ಲಿ ತ್ಯಾಜ್ಯ ಎಸೆಯುವುದನ್ನು ಹತೋಟಿಗೆ ತರುವಲ್ಲಿ ಎಲ್ಲರ ಸಹಕಾರ ಅಗತ್ಯ ಎಂದರು.
ಗ್ರಾಮದಲ್ಲಿ ಉದ್ಯಾನವನ ನಿರ್ಮಾಣದ ವಿಚಾರ ಏನಾಯಿತೆಂದು ಸದಸ್ಯೆ ಉಷಾ ಮುಳಿಯ ಪ್ರಶ್ನಿಸಿದಾಗ, ಉತ್ತರಿಸಿದ ಪಿಡಿಒ, ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದ ಮುಂಭಾಗದ ಜಾಗವನ್ನು ಪಾರ್ಕಿಂಗ್‌ಗೆ ಕಾದಿರಿಸಲಾಗಿದೆ. ಅಲ್ಲಿ ಪಾರ್ಕಿಂಗ್‌ಗೆ ಜಾಗವನ್ನು ಸಿದ್ಧಗೊಳಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಉದ್ಯಾನವನ ಮತ್ತು ಔಷಽವನಕ್ಕೆ ಬದಲಿ ಜಾಗ ಹುಡುಕಿಕೊಡಿ ಎಂದರು.
ಗ್ರಾ.ಪಂ. ಸದಸ್ಯ ಅಬ್ದುಲ್ ರಹಿಮಾನ್ ಮಾತನಾಡಿ, ಗ್ರಾ.ಪಂ ಕೆಲ ಸಿಬ್ಬಂದಿಗಳು ನಿಗದಿತ ಅವಧಿಗೆ ಕಚೇರಿಗೆ ಬರುತ್ತಿಲ್ಲ ಎಂದು ಸಭೆಯ ಗಮನಕ್ಕೆ ತಂದರು. ಆಗ ಪಿ.ಡಿ.ಓ ಈಗಾಗಲೇ ಎಲ್ಲ ಸಿಬ್ಬಂದಿಗಳಿಗೂ ತಂಬ್ ವ್ಯವಸ್ಥೆ ಇದ್ದು ಅದನ್ನು ಪರಿಶೀಲಿಸಲು ದಾಖಲೆ ತರಲು ಸೂಚಿಸಿದರು. ಆದರೆ ಸಭೆ ಮುಗಿಯುವ ತನಕವೂ ದಾಖಲೆ ತರದಿದ್ದಾಗ ಆಕ್ರೋಶ ವ್ಯಕ್ತಪಡಿಸಿದ ಅಬ್ದುರ್ರಹ್ಮಾನ್ ಅವರು, ಈ ಬಗ್ಗೆ ಯಾಕೆ ನಿರ್ಲಕ್ಷ್ಯ ವಹಿಸಿರುವುದು ಎಂದು ಪ್ರಶ್ನಿಸಿದರು. ಇದಕ್ಕೆ ಪಿಡಿಒ ವಿಲ್ರೆಡ್ ಲಾರೆನ್ಸ್ ರೊಡ್ರಿಗಸ್, ಇನ್ನು ಮುಂದೆ ಈ ಬಗ್ಗೆ ಪರಿಶೀಲಿಸಿ ಕ್ರಮ ಜರಗಿಸುವುದಾಗಿ ಹೇಳಿ ಚರ್ಚೆಗೆ ತೆರೆ ಎಳೆದರು.
ಸಭೆಯಲ್ಲಿ ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ಸದಸ್ಯರಾದ ಧನಂಜಯ ನಟ್ಟಿಬೈಲು, ಯು.ಟಿ. ಮುಹಮ್ಮದ್ ತೌಸೀಫ್, ಯು.ಕೆ. ಇಬ್ರಾಹಿಂ, ಅಬ್ದುಲ್ ರಶೀದ್, ಸಂಜೀವ, ಜಯಂತಿ, ಶೋಭಾ, ವನಿತಾ, ನೆಬಿಸಾ, ಮೈಸಿದಿ ಇಬ್ರಾಹೀಂ, ರುಕ್ಮಿಣಿ ಉಪಸ್ಥಿತರಿದ್ದರು. ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರೊಡ್ರಿಗಸ್ ಸ್ವಾಗತಿಸಿದರು. ಕಾರ್ಯದರ್ಶಿ ಗೀತಾ ವಂದಿಸಿದರು. ಸಿಬ್ಬಂದಿ ಜ್ಯೋತಿ ಸಹಕರಿಸಿದರು.









